

ಬೆಂಗಳೂರು: ‘ಕಾಂತಾರ’ ರಿಲೀಸ್ ಆಗಿ ವರ್ಷಗಳೇ ಕಳೆದಿವೆ. ಈ ಚಿತ್ರದ ಪ್ರೀಕ್ವೆಲ್ಗಾಗಿ ಎಲ್ಲರೂ ಕಾತುರದಿಂದ ಕಾಯುತ್ತಿದ್ದರು. ಚಿತ್ರೀಕರಣದ ಅಪ್ಡೇಟ್ಸ್ ತಿಳಿಯಲು ಪ್ರತಿಯೊಬ್ಬರೂ ಕೂತುಹಲದಿಂದ ಎದುರು ನೋಡುತ್ತಿದ್ದರು. ಇದೀಗ ‘ಹೊಂಬಾಳೆ ಫಿಲ್ಮ್ಸ್’ ಕಡೆಯಿಂದ ಕಾಂತಾರಕ್ಕೆ ಸಂಬಂಧಿಸಿದಂತೆ ಬಿಗ್ ನ್ಯೂಸ್ ರಿವೀಲ್ ಆಗಿದೆ. ಹೌದು, ‘ಕಾಂತಾರ 2’ ಫಸ್ಟ್ ಪೋಸ್ಟರ್ ನವೆಂಬರ್ 27ರ ಮಧ್ಯಾಹ್ನ 12:25ಕ್ಕೆ ಅನಾವರಣಗೊಳ್ಳಲಿದೆ. ಸದ್ಯ ಈ ವಿಚಾರ ತಿಳಿದು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ವಿಶೇಷವೆಂದರೆ ‘ಹೊಂಬಾಳೆ ಫಿಲ್ಮ್ಸ್’ ಪೋಸ್ಟ್ ಮಾಡಿರುವ ಟೈಟಲ್ ಕಾರ್ಡ್ನಲ್ಲಿ ಕೇವಲ ‘ಕಾಂತಾರ’ ಎಂದಷ್ಟೇ ಇದೆ. ಹಾಗೆಯೇ ಹ್ಯಾಶ್ಟ್ಯಾಗ್ನಲ್ಲಿ ‘ಕಾಂತಾರ ಚಾಪ್ಟರ್ 1’ ಎಂದು ಹಾಕಿದ್ದಾರೆ. ಸದ್ಯ ಇದನ್ನೆಲ್ಲಾ ನೋಡಿದ ಅಭಿಮಾನಿಗಳಿಗೆ ಮತ್ತಷ್ಟು ಕುತೂಹಲ ಹೆಚ್ಚಾಗಿದೆ.
‘ಹೊಂಬಾಳೆ ಫಿಲ್ಮ್ಸ್’ ತನ್ನ ಅಧಿಕೃತ ಟ್ವಿಟ್ಟರ್ ಪೇಜ್ನಲ್ಲಿ ಟೈಟಲ್ ಕಾರ್ಡ್ ಜೊತೆಗೆ "ಪ್ರತಿ ಕ್ಷಣವೂ ದೈವಿಕ ಸ್ಪರ್ಶವನ್ನು ಅನುಭವಿಸುವ ಜತೆ ಇತಿಹಾಸದ ನಿಗೂಢ ಸತ್ಯವನ್ನು ಅನ್ವೇಷಿಸಿ. ಹಿಂದೆಂದಿಗೂ ನೋಡದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿ. ಇದು ಬರಿ ಬೆಳಕಲ್ಲ, ದರ್ಶನ" ಎಂದು ಬರೆದುಕೊಂಡಿದೆ.
'ಕಾಂತಾರ’ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರು ನಟನಾಗಿ, ನಿರ್ದೇಶಕನಾಗಿ ಕೆಲಸ ಮಾಡಿದ್ದರು. ಚಿತ್ರದಲ್ಲಿ ಎರಡು ಶೇಡ್ನ ಪಾತ್ರವನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದ್ದರು. ದೈವದ ಪಾತ್ರದಲ್ಲಿ ಅವರ ಹಾವ-ಭಾವ ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದರು. ಈಗ ಈ ಚಿತ್ರದ ಎರಡನೇ ಪಾರ್ಟ್ ಬರುತ್ತಿದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಅಧಿಕೃತ ಘೋಷಣೆಯೂ ಆಗಿದೆ.
ಸದ್ಯ ಈ ಪೋಸ್ಟ್ ನೋಡಿ ಅಭಿಮಾನಿಗಳಿಂದ ಕಾಮೆಂಟ್ಗಳ ಮಹಾಪೂರವೇ ಹರಿದುಬರುತ್ತಿದ್ದು, ಫಸ್ಟ್ ಲುಕ್ ನೋಡಲು ಕಾತುರರಾಗಿದ್ದಾರೆ. ಜತೆಗೆ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರ ಅವತಾರ ಹೇಗಿರಬಹುದು ಎಂದು ತಿಳಿಯಲು ಅಭಿಮಾನಿಗಳು ಕಾದಿದ್ದಾರೆ. ಇದಕ್ಕೆ ಸೋಮವಾರದವರೆಗೆ ಕಾಯಲೇಬೇಕು.
ಸದ್ಯ 'ಕಾಂತಾರ 2’ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶನದ ಈ ಸಿನಿಮಾ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಬೆಂಗಾಲಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ರಿಲೀಸ್ ಆಗಲಿದೆ.