

ಕಲಬುರಗಿ: ಮೂರು ದಶಕದ ನಂತರ ತೊಗರಿ ಕಣಜದಲ್ಲಿ ಬುಧವಾರ (ಫೆ.5)ಆರಂಭವಾಗಲಿರುವ ಮೂರು ದಿನಗಳ ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ಬಹುತೇಕ ಪೂರ್ಣಗೊಂಡಿದೆ. ಕಟೌಟ್, ಬ್ಯಾನರ್, ವಿದ್ಯುತ್ ದೀಪಾಲಂಕಾರ, ನಾಡಧ್ವಜಗಳೊಂದಿಗೆ ಮಹಾನಗರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ಸರ್ವಾಧ್ಯಕ್ಷರು ಇಂದು ಆಗಮನ: ಕಲಬುರಗಿ ಮಹಾನಗರ ವರ್ಣ ರಂಜಿತವಾಗಿ ಕಂಗೊಳಿಸುತ್ತಿದ್ದು, ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ರಾದ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಮಂಗಳವಾರ ಬೆಳಗ್ಗೆ 8.45ಕ್ಕೆ ಉದ್ಯಾನ ಎಕ್ಸ್ ಪ್ರೆಸ್ ರೈಲಿನ ಮೂಲಕ ಆಗಮಿಸಲಿದ್ದು, ಸ್ವಾಗತಿಸಲು ಕಸಾಪ ಪದಾಧಿಕಾರಿಗಳು ಸಜ್ಜಾಗಿದ್ದಾರೆ.
ಸಮ್ಮೇಳನಾಧ್ಯಕ್ಷರ ಮೆರವಣಿಗೆ ಡಾ. ಎಸ್.ಎಂ. ಪಂಡಿತ ರಂಗಮಂದಿರದಿಂದ ಬುಧವಾರ ಬೆಳಗ್ಗೆ 8.30ಕ್ಕೆ ಹೊರಡಲಿದೆ. ಕಲಬುರಗಿ ಮಾತ್ರವಲ್ಲದೆ ಕೊಪ್ಪಳ, ಗದಗ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರ, ದಾವಣಗೆರೆ, ಧಾರವಾಡ, ಬಳ್ಳಾರಿ, ಬಾಗಲಕೋಟೆ, ಮಂಡ್ಯ, ರಾಯಚೂರು, ಶಿವಮೊಗ್ಗ, ಹಾಸನ, ಆಂಧ್ರ ಗಡಿನಾಡು ಘಟಕ, ಹಾಸನ, ಉಡುಪಿ ಸೇರಿ ವಿವಿಧ ಜಿಲ್ಲೆಗಳ 60 ಕಲಾ ತಂಡಗಳ ಸಾಂಸ್ಕೃತಿಕ ವೈಭವ ಗಮನ ಸೆಳೆಯಲಿದೆ. ಬೆಳಗ್ಗೆ 11.30ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸಮ್ಮೇಳನ ಉದ್ಘಾಟಿಸುವರು.
ಪುಸ್ತಕ ಪ್ರದರ್ಶನ, ಮಳಿಗೆ ಆಕರ್ಷಣೆ
ಸಮ್ಮೇಳನದಲ್ಲಿ ವಾಣಿಜ್ಯ 193 ಮಳಿಗೆ, 415 ಪುಸ್ತಕ ಮಳಿಗೆಗಳು ಇರಲಿವೆ. ಎರಡು ಕಡೆ ಲೇಖಕರ ಕಟ್ಟೆಗೆ ವ್ಯವಸ್ಥೆ ಮಾಡಲಾಗಿದೆ. ಚಂದ್ರಶೇಖರ ಕಂಬಾರ, ಸಿದ್ದಲಿಂಗಯ್ಯ, ಎಚ್.ಎಸ್. ವೆಂಕಟೇಶಮೂರ್ತಿ ಸೇರಿ ಹಲವು ಹಿರಿಯ ಸಾಹಿತಿಗಳು ಇಲ್ಲಿ ಸೇರಿ ಚರ್ಚೆ ನಡೆಸಲಿದ್ದಾರೆ. ಈವರೆಗೆ 22,250 ಪ್ರತಿನಿಧಿಗಳು ನೋಂದಾಯಿಸಿಕೊಂಡಿದ್ದಾರೆ. 72 ವಿಶೇಷ ಪ್ರತಿನಿಧಿಗಳಿಗೆ ಬ್ರೀಫ್ಕೇಸ್, ಸಾಮಾನ್ಯ ಪ್ರತಿನಿಧಿಗಳಿಗೆ ಪರಿಸರ ಸ್ನೇಹಿ ಬ್ಯಾಗ್, ಪೆನ್, ಬ್ಯಾಡ್ಜ್ ಮತ್ತು ನೋಟ್ಬುಕ್ ಒಳಗೊಂಡ ಕಿಟ್ ವಿತರಿಸಲಾಗುತ್ತಿದೆ.
ವಸತಿ/ಸಾರಿಗೆ ಸೌಲಭ್ಯ
ನಗರದಲ್ಲಿ 60 ಲಾಡ್ಜ್, 15 ಕಲ್ಯಾಣಮಂಟಪ, ಸರ್ಕಾರದ ಐದು ಅತಿಥಿಗೃಹ, ಗುಲ್ಬರ್ಗ ವಿವಿ, ವಿಟಿಯು, ಇಎಸ್ಐಸಿ ಅತಿಥಿ ಗೃಹಗಳು, ಪ್ರಮುಖ ವಿದ್ಯಾಸಂಸ್ಥೆಗಳ ವಸತಿನಿಲಯಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಸಮ್ಮೇಳನಕ್ಕೆ ಹೋಗಿ ಬರಲು ಉಚಿತ ವಾಹನ ಸೌಕರ್ಯವಿದೆ.
ಸಹಾಯವಾಣಿ ಆರಂಭ
ಸಮ್ಮೇಳನಕ್ಕೆ ಆಗಮಿಸುವ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಬಸ್ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದೆ. ಇದರಲ್ಲಿ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಇರಲಿದೆ. ವಿವರಕ್ಕೆ ದೂ: 7259542950, 8105542950, 7619542950, 9008542950ಗಳಿಗೆ ಸಂರ್ಪಸಬಹುದು. ಸಹಾಯವಾಣಿ ಕೇಂದ್ರದಲ್ಲಿ ನಾಲ್ವರು ಇರಲಿದ್ದಾರೆ. ಈ ಪೈಕಿ ಒಬ್ಬ ಅಧಿಕಾರಿ, ಮೂವರು ಸಹಾಯಕರು ಪಾಳಿಯಲ್ಲಿ ಸೇವೆ ಸಲ್ಲಿಸುತ್ತಾರೆ.
ದೇಸಿ ಊಟದ ರುಚಿ
ಸಮ್ಮೇಳನದಲ್ಲಿ 4 ಲಕ್ಷ ಜನರಿಗೆಅಡುಗೆ ಸಿದ್ಧತೆ ನಡೆದಿದೆ. ಊಟಕ್ಕಾಗಿ 200 ಕೌಂಟರ್ ಮಾಡಲಾಗುತ್ತಿದ್ದು, 1,300 ಸ್ವಯಂಸೇವಕರನ್ನು ಬಳಸಿಕೊಳ್ಳಲಾಗುತ್ತಿದೆ.
ಅಕ್ಷರ ಜಾತ್ರೆಗೆ ಸಿದ್ಧತೆ ಬಹುತೇಕ ಪೂರ್ಣಗೊಂಡಿದೆ. ಸಣ್ಣಪುಟ್ಟ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದ್ದು, ಯಾವುದೇ ಹಂತದಲ್ಲೂ ಅಪಸ್ವರ ಮತ್ತು ತೊಂದರೆ ಕಾಣಿಸದಂತೆ 16 ಸಮಿತಿಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಸಮ್ಮೇಳನಕ್ಕೆ ಆಗಮಿಸುವವರಿಗೆ ಅಗತ್ಯ ವ್ಯವಸ್ಥೆ ಮಾಡಲಾಗುವುದು. ಮಾದರಿ ನುಡಿ ಜಾತ್ರೆ ನಮ್ಮ ಉದ್ದೇಶ. | ಬಿ. ಶರತ್ ಜಿಲ್ಲಾಧಿಕಾರಿ
ಜಯತೀರ್ಥ ಪಾಟೀಲ