

ಮುಂಬೈ: ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ದಿ ಮೋಸ್ಟ್ ಬ್ಯುಸಿಯೆಸ್ಟ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಸದ್ಯ ರಶ್ಮಿಕಾ ನಟನೆಯ ಛಾವಾ ಸಿನಿಮಾ ಫೆಬ್ರವರಿ 14ರಂದು ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಙಡೆದುಕೊಂಡಿದೆ. ಆದರೆ, ಚಿತ್ರದ ಪ್ರಮೋಷನ್ ವೇಳೆ ನಟಿ ರಶ್ಮಿಕಾ ಮಂದಣ್ಣ ನೀಡಿರುವ ಒಂದು ಹೇಳಿಕೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ರಶ್ಮಿಕಾ ಮಂದಣ್ಣ ಹುಟ್ಟೂರನ್ನೇ ಮರೆತರಾ ಎಂಬ ಪ್ರಶ್ನೆ ಮೂಡಿದೆ.
ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಜತೆಯಾಗಿ ನಟಿಸಿರುವ ಐತಿಹಾಸಿಕ ಕಥಾಹಂದರವುಳ್ಳ ಸಿನಿಮಾ ಛಾವಾ ವಿಶ್ವದಾದ್ಯಂತ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಬಿಡುಗಡೆಗೂ ಮುನ್ನ ಚಿತ್ರತಂಡ ಕಾರ್ಯಕ್ರಮ ಒಂದನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ನಾನು ಹೈದರಾಬಾದ್ನವಳು ಎಂದು ಹೇಳಿಕೊಳ್ಳುವ ಮೂಲಕ ಮತ್ತೊಮ್ಮೆ ಟ್ರೋಲ್ ಪೇಜ್ಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಟಿ ರಶ್ಮಿಕಾ ಮಂದಣ್ಣ, ನಾನು ಹೈದರಾಬಾದ್ನವಳು. ನಾನು ಒಬ್ಬಳೇ ಇಲ್ಲಿಗೆ ಬಂದಿದ್ದೇನೆ. ಇವತ್ತು ನಿಮ್ಮ ಕುಟುಂಬಕ್ಕೆ ಸೇರಿದ್ದೇನೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದರು. ಈ ವಿಡಿಯೋ ಇದೀಗ ಜಾಲತಾಣದಲ್ಲಿ ವೈರಲ್ ಆಗಿದ್ದು, ಕನ್ನಡದ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋಗೆ ಕಮೆಂಟ್ಗಳ ಮಹಾಪೂರವೇ ಹರಿದುಬರುತ್ತಿದೆ.
ತೆಲುಗಿಗೆ ಹೋದಾಗ ಕನ್ನಡದ ಹುಡುಗಿ ಎನ್ನುತ್ತಿದ್ದವರು, ಹಿಂದಿಗೆ ಹೋಗಿ ಹೈದರಾಬಾದ್ನವಳು ಎನ್ನುತ್ತಿದ್ದಾರೆ. ಮುಂದೆ ಬೇರೆ ಚಿತ್ರರಂಗಕ್ಕೆ ಹೋದರೆ, ನಾನು ಬಾಲಿವುಡ್ನವಳು ಎನ್ನುತ್ತಾರಾ?’, ‘ಕನ್ನಡ, ಕರ್ನಾಟಕವನ್ನು ಇಷ್ಟು ಬೇಗ ಮರೆತುಬಿಟ್ಟಿರಾ? ಅಂತೆಲ್ಲ ಜಾಲತಾಣದಲ್ಲಿ ಅಭಿಮಾನಿಗಳು ಪ್ರಶ್ನಿಸಿದ್ದಾರೆ.
ಮಾತ್ರವಲ್ಲ ಕನ್ನಡ ಸಿನಿಮಾಗಳಿಗೆ ಡಬ್ಬಿಂಗ್ ಮಾಡಲು ಹಿಂದೇಟು ಹಾಕುತ್ತಿದ್ದ ರಶ್ಮಿಕಾ ಇದೀಗ ಬೇರೆ ಭಾಷೆಗಳಲ್ಲಿ ತಾವೇ ಡಬ್ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಮೂಡಿಬರುವ ಬಹುಭಾಷಾ ಚಿತ್ರಗಳಿಗೂ ಅವರು ಕನ್ನಡದಲ್ಲಿ ಡಬ್ ಮಾಡುತ್ತಿಲ್ಲ ಎಂದು ಈ ಹಿಂದೆ ನೆಟ್ಟಿಗರು ಗರಂ ಆಗಿದ್ದರು. ಇದೀಗ ಹೈದರಾಬಾದ್ನವಳು ಎಂದು ರಶ್ಮಿಕಾ ಮಂದಣ್ಣ (Rashmika Mandanna) ಮತ್ತೆ ಇಲ್ಲಿನ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.