ಕನ್ನಡದಿಂದ ಹಲವು ಕಲಾವಿದರು ಬೇರೆ ಚಿತ್ರರಂಗಗಳಲ್ಲಿ ಬಿಜಿಯಾಗಿರುವುದು ಗೊತ್ತಿದೆ. ಆದರೆ, ಇಲ್ಲಿಂದ ತಂತ್ರಜ್ಞರು ಹೆಚ್ಚಾಗಿ ಪರಭಾಷೆಗಳಿಗೆ ಹೋಗಿಲ್ಲ. ಪ್ರಶಾಂತ್ ನೀಲ್, ಎ. ಹರ್ಷ, ರವಿ ಬಸ್ರೂರ್, ಅಜನೀಷ್ ಲೋಕನಾಥ್, ರವಿ ವರ್ಮ, ಸ್ವಾಮಿ ಜೆ. ಗೌಡ... ಹೀಗೆ ಕೆಲವೇ ಮಂದಿ ಬೇರೆ ಚಿತ್ರರಂಗಗಳಲ್ಲೂ ಛಾಪು ಮೂಡಿಸಿದ್ದಾರೆ. ಇದೀಗ ಈ ಸಾಲಿಗೆ ಮತ್ತೊಬ್ಬ ಕನ್ನಡಿಗ ಸೇರ್ಪಡೆಯಾಗಿದೆ. ಅವರೇ ಛಾಯಾಗ್ರಾಹಕ ಕಾರ್ತಿಕ್ ಮಳ್ಳೂರ್. ಕನ್ನಡದ ಕೆಲ ಚಿತ್ರಗಳಲ್ಲಿ ಛಾಯಾಗ್ರಾಹಕನಾಗಿ ಕೆಲಸ ಮಾಡಿದ ಬಳಿಕ, ಸ್ಪೈ ಥ್ರಿಲ್ಲರ್ ವೆಬ್ಸರಣಿ "ಮುಖ್ಬೀರ್' ಮೂಲಕ ಮುಂಬೈಗೆ ಶಿಫ್ಟ್ ಆದ ಅವರು, ಸೈಕಲಾಜಿಕಲ್ ಹಾರರ್ ಸಿನಿಮಾ "ದ ವೈ', ಎಮೋಷನಲ್ ಫ್ಯಾಮಿಲಿ ಡ್ರಾಮಾ "ಮರ್ಸಿ'ಯಲ್ಲಿ ಕ್ಯಾಮರಾ ಕೈಚಳಕ ತೋರಿಸಿದ್ದಾರೆ. ವಿಶೇಷ ಅಂದರೆ "ಮರ್ಸಿ' ಇತ್ತೀಚೆಗಷ್ಟೆ ಪ್ರತಿಷ್ಠಿತ ಕಾನ್ ಚಲನಚಿತ್ರೋತ್ಸವದಲ್ಲಿ ವಿಶೇಷ ಪ್ರದರ್ಶನ ಕಂಡಿದ್ದು, ಉತ್ತಮ ಪ್ರತಿಕ್ರಿಯೆ ಪಡೆದಿದೆ. ಹಾಗೇ ಕಳೆದ ಏ. 24ರಂದು ಸಿನಿಮಾ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದಲೂ ಒಳ್ಳೆ ರೆಸ್ಪಾನ್ಸ್ ದೊರೆತಿದೆ. ಅದರ ಬೆನ್ನಲ್ಲೇ ಇಂದು ಕಾರ್ತಿಕ್ ಛಾಯಾಗ್ರಹಣವಿರುವ "ಶ್ರೀ ಬಾಬಾ ನೀಬ್ ಕರೋರಿ ಮಹಾರಾಜ್' ವಿಶ್ವಾದ್ಯಂತ ರಿಲೀಸ್ ಆಗಲಿದೆ. ಕಂಟೆಂಟ್ ಜತೆಗೆ ದೃಶ್ಯವೈಭವದಿಂದಲೂ ಗಮನ ಸೆಳೆಯುತ್ತಿರುವ ನೀಮ್ ಕರೋಲಿ ಬಾಬಾ ಬಯೋಪಿಕ್ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿದೆ.