ಕನ್ನಡಿಗರ ಕಡಗಣನೆ, ಸಿಎಂ ಪತ್ರಕ್ಕೂ ಬೆಲೆ ಇಲ್ಲ

web ksca
Published on

ಬೆಂಗಳೂರು: ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಕನ್ನಡ, ಕನ್ನಡಿಗರ ಬಗ್ಗೆ ತಾತ್ಸಾರ ತೋರುತ್ತಿದ್ದು, ಕನ್ನಡಿಗ ಆಟಗಾರರನ್ನೂ ಕಡೆಗಣಿಸುತ್ತಿದೆ. ಹೀಗಾಗಿ ತನಿಖೆ ನಡೆಸಲು ಸಮಿತಿ ರಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಾಮಾಜಿಕ ಕಾರ್ಯಕರ್ತ ಮರಿಲಿಂಗೌಡ ಮಾಲಿಪಾಟೀಲ್ ಪತ್ರ ಬರೆದಿದ್ದಾರೆ.

ಲೇಖಕ ರಾಮಚಂದ್ರ ಗುಹಾ ಅವರ ಕೋರಿಕೆಯನುಸಾರ ಮುಖ್ಯಮಂತ್ರಿಯವರು 2024ರ ಏಪ್ರಿಲ್ 04ರಂದು ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್‌ಗೆ ಪತ್ರ ಬರೆದು ಕ್ರಿಕೆಟ್ ಸ್ಟೇಡಿಯಂ ಸ್ಟಾೃಂಡ್‌ಗಳಿಗೆ ಮಾಜಿ ಕ್ರಿಕೆಟಿಗರಾದ ಜಿ.ಆರ್.ವಿಶ್ವನಾಥ್, ಇ.ಎ.ಎಸ್.ಪ್ರಸನ್ನ, ಬಿ.ಎಸ್.ಚಂದ್ರಶೇಖರ್ ಹೆಸರಿಡುವ ಮೂಲಕ ಭವಿಷ್ಯದ ಕ್ರಿಕೆಟಿಗರಿಗೆ ಸ್ಫೂರ್ತಿ ತುಂಬು ಕೆಲಸ ಮಾಡಬೇಕೆಂದು ಕೋರಿದ್ದರು. ಆದರೆ, ಈ ವರೆಗೂ ಕ್ರಿಕೆಟ್ ಅಸೋಸಿಯೇಷನ್ ಯಾವುದೇ ಕ್ರಮಕೈಗೊಂಡಿಲ್ಲ, ಪ್ರತಿಕ್ರಿಯೆಯನ್ನೂ ನೀಡಿಲ್ಲ. ಈ ಸಂಗತಿಯನ್ನು ತಮ್ಮ ದೂರು ಪತ್ರದಲ್ಲಿ ಉಲ್ಲೇಖಿಸಿರುವ ಮಾಲಿಪಾಟೀಲ್, ನಾಡಿನ ಮುಖ್ಯಮಂತ್ರಿಯವರ ಪತ್ರಕ್ಕೇ ಬೆಲೆ ಕೊಡಲಿಲ್ಲ ಎಂಬುದು ಅವಮಾನಕರ ಸಂಗತಿ ಎಂದು ಅಸಾಮಾಧಾನ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆ, ಕನ್ನಡಿಗ ಆಟಗಾರರ ಬಗ್ಗೆ ಉದಾಸೀನ ಧೋರಣೆ ಅನುಸರಿಸುವ ಅನೇಕ ಬೆಳವಣಿಗೆಗಳು ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ ನಡೆದಿದೆ. ಕನ್ನಡ ವಿರೋಧಿ ತನ ಅನುಸರಿಸುತ್ತಲೇ ಇದ್ದಾರೆ. ಇವರ ಮೇಲೆ ಕ್ರಮವಾಗಬೇಕೆಂದು ಆಗ್ರಹಿಸಿದ್ದಾರೆ.

ಕೇರಳದ ಒಬ್ಬ ಆಟಗಾರನಿಗೆ ಕರ್ನಾಟಕದ ವಿಳಾಸ ಸೃಷ್ಟಿಸಿ ಕರ್ನಾಟಕದ ತಂಡದಲ್ಲಿ ಆಟವಾಡಿಸಿದ ಪ್ರಕರಣದಲ್ಲಿ ಬಿಸಿಸಿಐ ಆಟಗಾರನಿಗೆ ನೋಟಿಸ್ ನೀಡಿತ್ತು. ಇದು ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಕರ್ನಾಟಕಕ್ಕೆ ಮಾಡಿದ ಅವಮಾನವೂ ಹೌದು ಎಂದು ಟೀಕಿಸಿದ್ದಾರೆ.

ಕನ್ನಡದ ಬಗ್ಗೆ ಲವಲೇಷವೂ ಇಲ್ಲದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಬಿಸಿ ಮುಟ್ಟಿಸಲು ಒಂದು ತನಿಖಾ ಸಂಸ್ಥೆ ನೇಮಿಸಬೇಕು, ಇತ್ತೀಚಿನ ವರ್ಷಗಳಲ್ಲಿ ಕನ್ನಡಿಗ ಆಟಗಾರರು ಎಷ್ಟಿದ್ದಾರೆ, ಹೊರಗಿನವರು ಯಾರೆಲ್ಲರಿಗೆ ಅವಕಾಶ ನೀಡಲಾಗಿದೆ ಎಂಬ ಬಗ್ಗೆಯೂ ತನಿಖೆ ಮಾಡಿಸಬೇಕೆಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net