ಬೆಂಗಳೂರು: ಮುಂದಿನ ವಾರ ದಕ್ಷಿಣ ಭಾರತ ಚಿತ್ರರಂಗದ ಹಲವು ಬಹುನಿರೀಕ್ಷಿತ ಸಿನಿಮಾಗಳು ರಿಲೀಸ್ ಆಗುತ್ತಿವೆ. ತಮಿಳುನಾಡು ಸಿಎಂ, ನಟ ವಿಜಯ್ ದಳಪತಿ ಅಭಿನಯದ ‘ಜನನಾಯಗನ್’ ಮತ್ತು ಗುರುದತ್ ಗಾಣಿಗ ನಿರ್ದೇಶನದ ಕನ್ನಡದ ‘ಕರಾವಳಿ’ ಸೇರಿ ಹಲವು ಚಿತ್ರಗಳು ತೆರೆಗೆ ಬರುತ್ತಿವೆ. ಈ ಸಿನಿಮಾಗಳ ನಡುವೆಯೇ ಕನ್ನಡದ ಮತ್ತೊಂದು ಚಿತ್ರ ಬಿಡುಗಡೆಯಾಗುತ್ತಿದೆ. ವಿಜಯ್ ರಾಘವೇಂದ್ರ ಅಭಿನಯದ ‘ಶ್ರೀಮತಿ ಸಿಂಧೂರ’ ಇದೇ 24ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಇಲ್ಲಿ ವಿಜಯ್‌ಗೆ ಪ್ರಿಯಾ ಹೆಗ್ಡೆ ಜೋಡಿಯಾಗಿದ್ದಾರೆ. ತೆರೆಗೆ ಬರಲು ಸಜ್ಜಾಗಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಚಿತ್ರತಂಡವು ಪ್ರಿ-ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ನಟ ವಿಜಯ್ ರಾಘವೇಂದ್ರ ಭಾಗಿಯಾಗಿ, ‘ಹುಡುಗಿಯೊಬ್ಬಳು ಮದುವೆಯಾದರೆ ಶ್ರೀಮತಿ ಆಗುತ್ತಾಳೆ. ಸಿಂಧೂರ ಎನ್ನುವುದು ಆಕೆಗೆ ಸಿಗುವ ಗೌರವ. ಅದೇ ರೀತಿ ಜವಾಬ್ದಾರಿ ಹುಡುಗನೊಬ್ಬ ಇಷ್ಟಪಟ್ಟ ಹುಡುಗಿಯನ್ನು ಮದುವೆ ಆಗುತ್ತಾನೆ. ಮುಂದೆ ಆತನಿಗೆ ಅನೇಕ ತಿರುವುಗಳು ಬರುತ್ತದೆ. ಇದರಿಂದ ಅವನು ಯಾವ ದಿಕ್ಕಿಗೆ ಹೋಗುತ್ತಾನೆ. ಏನೆಲ್ಲಾ ಬದಲಾವಣೆಗಳು ಆಗುತ್ತದೆ ಎಂಬುದೇ ಚಿತ್ರದ ಪ್ರಮುಖ ಅಂಶ. ಸಂಸಾರದಲ್ಲಿ ದೈವಭಕ್ತಿ ಇರಬೇಕು. ನಾವು ನಂಬಿದ ದೇವರು ಎಂದಿಗೂ ಕೈಬಿಡುವುದಿಲ್ಲ. ಇದೊಂದು ಕೌಟುಂಬಿಕ ಮನರಂಜನೆಯ ಸಿನಿಮಾವಾಗಿದ್ದು, ಕೈಲಾಶ್ ಖೇರ್ ಹಾಡಿರುವ ಆಂಜನೇಯ ಕುರಿತು ಸಾಂಗ್ ಹೈಲೈಟ್’ ಎಂದು ಮಾಹಿತಿ ಹಂಚಿಕೊಂಡರು. ಆರ್. ಅನಂತರಾಜು ನಿರ್ದೇಶನದ ಈ ಚಿತ್ರದಲ್ಲಿ ವಿಜಯ್, ಪ್ರಿಯಾ ಜತೆ ಡಿ.ಎನ್.ಲಿಯೋ ಮನೋಜ್, ಗಣೇಶ್‌ರಾವ್ ಕೇಸರಕರ್, ರೇಷ್ಮಾ ವಿ. ಗೌಡ, ಪ್ರಸನ್ನ ಬಾಗೀನ, ಉಗ್ರಂ ರವಿ, ಮಾಸ್ಟರ್ ಮೌರ್ಯ, ಮಾರುತಿ, ತಾರಾಗಣದಲ್ಲಿದ್ದಾರೆ.