

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ರಾಜ್ಯಾಧ್ಯಕ್ಷ, ಜಿಲ್ಲಾ ಘಟಕಗಳ ಅಧ್ಯಕ್ಷ ಹಾಗೂ ಗಡಿನಾಡು ಘಟಕಗಳ ಅಧ್ಯಕ್ಷರ ಸ್ಥಾನಕ್ಕೆ ಮೇ 9ರಂದು ನಡೆಯಲಿರುವ ಚುನಾವಣೆಗೆ ಸಂಬಂಧಿಸಿಂತೆ ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡಿದೆ.
ಕೇಂದ್ರ ಚುನಾವಣಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರು ಫೆ.8 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು ಫೆ.22 ರವರಗೆ ಕಾಲಾವಕಾಶ ನೀಡಿದ್ದರು. ಈಗ ಮತದಾರರ ಪಟ್ಟಿ ಅಂತಿಮಗೊಂಡಿದ್ದು, ಬೆಂಗಳೂರು ನಗರ ಜಿಲ್ಲೆಗೆ ಸಂಬಂಧಿಸಿದಂತೆ ಗುರುತಿಸಲಾದ ಚುನಾವಣಾ ಕಚೇರಿಗಳಲ್ಲಿ ಹಾಗೂ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಎಲ್ಲ ತಾಲ್ಲೂಕು ತಹಶೀಲ್ದಾರರ ಕೇಂದ್ರ ಕಚೇರಿಯಲ್ಲಿ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಮತದಾರರ ವಿಳಾಸ ಮತ್ತು ವಿವರಗಳನ್ನು ಸುಲಭವಾಗಿ ಪಡೆದುಕೊಳ್ಳಲು ಪರಿಷತ್ತಿನ ವೆಬ್ ಪೋರ್ಟಲ್ http://kannadasahithyaparishattu.in/ ನಲ್ಲಿಯೂ ವಿವರಗಳು ದೊರೆಯಲಿವೆ. ಮತದಾರರ ಪಟ್ಟಿಯನ್ನು ಕನ್ನಡ ವರ್ಣಮಾಲೆಯ ಅಕ್ಷರಗಳಿಗೆ ಅನುಗುಣವಾಗಿ ಮುದ್ರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.