

ಶಿವಮೊಗ್ಗ: ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಪ್ರಾತಿನಿಧಿಕ ಮತ್ತು ಸ್ವಾಯತ್ತ ಸಂಸ್ಥೆ. ಇತ್ತೀಚಿನ ದಿನಗಳಲ್ಲಿ ಅಲ್ಲಿ ಸರ್ವಾಧಿಕಾರಿ ಧೋರಣೆ ವಿಪರೀತವಾಗಿದ್ದು, ತಕ್ಷಣವೇ ಅಧ್ಯಕ್ಷರನ್ನು ಅಮಾನತಿನಲ್ಲಿರಿಸಿ ಸರ್ಕಾರ ತನಿಖಾ ಆಯೋಗ ರಚಿಸಬೇಕು ಎಂದು ಸಾಹಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಆಗ್ರಹಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಕನ್ನಡ ನಾಡು-ನುಡಿ ಜಾಗೃತಿ ಸಮಿತಿಯಿಂದ ಕನ್ನಡ ಸಾಹಿತ್ಯ ಪರಿಷತ್ ಉಳಿಸಿ ಹೋರಾಟದ ಕನ್ನಡಿಗರ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ತನಿಖೆಯಲ್ಲಿ ಅಧ್ಯಕ್ಷರು ಕಳಂಕಿತರೆಂದು ಸಾಬೀತಾದರೆ ವಜಾ ಮಾಡಬೇಕು. ಇಲ್ಲವಾದರೆ ಅಮಾನತು ರದ್ದುಪಡಿಸಿ ಅಧ್ಯಕ್ಷರಾಗಿ ಮುಂದುವರಿಸಬೇಕು ಎಂದರು.
ಕಸಾಪ ಅಧ್ಯಕ್ಷರು ಸಂಸ್ಥೆಯ ಘನತೆ, ಗೌರವ ಕಾಪಾಡಬೇಕು. ಕನ್ನಡದ ಆಶಯಗಳಿಗೆ ಬದ್ಧರಾಗಿರಬೇಕು. ಆದರೆ ವಿಕೇಂದ್ರೀಕರಣ ತತ್ವದೊಂದಿಗೆ ನಡೆಯಬೇಕಿದ್ದ ಕಸಾಪವನ್ನು ಕೇಂದ್ರೀಕೃತ ಮಾಡಲು ಹೊರಟಿರುವ ಮಹೇಶ್ ಜೋಶಿ ಧೋರಣೆಯೇ ಸರ್ವಾಧಿಕಾರವಾಗಿದೆ. ಇದನ್ನು ನಾವು ಖಂಡಿಸುತ್ತೇವೆ. ಈ ವಿಚಾರದಲ್ಲಿ ಅವರಿಗೆ ನೀಡಿದ್ದ ಸಚಿವ ಸ್ಥಾನಮಾನ ಹಿಂಪಡೆದ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದು ತಿಳಿಸಿದರು.
ಕರ್ನಾಟಕ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್, ರೈತ ನಾಯಕಿ ಸುನಂದಾ ಜಯರಾಮ್, ಸಾಹಿತಿ ಜಾಣಗೆರೆ ವೆಂಕಟರಾಮಯ್ಯ, ಮಹಿಳಾ ಹೋರಾಟಗಾರರಾದ ಕೆ.ಎಸ್.ವಿಮಲಾ, ಮೀರಾ ಶಿವಲಿಂಗಯ್ಯ, ಪ್ರಮುಖರಾದ ಕಲ್ಕುಳಿ ವಿಠ್ಠಲ ಹೆಗ್ಡೆ, ಆರ್.ಜೆ.ಹಳ್ಳಿ ನಾಗರಾಜ, ರೋಹಿದಾಸ ನಾಯಕ್, ಸಮಾಜವಾದಿ ನಾಯಕ ಪಿ.ಪುಟ್ಟಯ್ಯ, ಸಂಚಾಲಕ ಡಾ. ಎಚ್.ಟಿ.ಕೃಷ್ಣಮೂರ್ತಿ, ಸಮಿತಿ ಸಂಚಾಲಕ ಕೆ.ಪಿ.ಶ್ರೀಪಾಲ್, ಹೊನ್ನಾಳಿ ಚಂದ್ರಶೇಖರ್, ಅಕ್ಷತಾ ಹುಂಚದಕಟ್ಟೆ ಮತ್ತಿತರರಿದ್ದರು.