

ಬೆಂಗಳೂರು: ಬೆಂಗಳೂರಿನ ಅಂಗಡಿ, ಮಳಿಗೆಗಳ ನಾಮಫಲಕದಲ್ಲಿ ಪ್ರಧಾನವಾಗಿ ಕನ್ನಡವನ್ನು ಕಡ್ಡಾಯ ಮಾಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೇ(ಬಿಬಿಎಂಪಿ) ರಾಜಧಾನಿಯಾದ್ಯಂತ ಕನ್ನಡವನ್ನು ಯದ್ವಾತದ್ವ ಬಳಸುತ್ತಿದೆ.
ಬೆಂಗಳೂರಿನ ರಸ್ತೆ, ವೃತ್ತ, ಪ್ರದೇಶಗಳ ಹೆಸರು, ಮಾರ್ಗದರ್ಶನ ಫಲಕಗಳನ್ನು ಅಳವಡಿಸುವಲ್ಲಿ ಸ್ಥಳೀಯ ಅಧಿಕಾರಿಗಳು ತಮ್ಮಿಷ್ಟಕ್ಕೆ ಬಂದಂತೆ ಹೆಸರುಗಳನ್ನು ಬಳಸುತ್ತ, ಸಾರ್ವಜನಿಕ ಆಸ್ತಿಗೆಳಿಗೆ ನಾಮಕರಣ ಮಾಡುವ ಸರ್ಕಾರದ ನೀತಿಗೆ ತಿಲಾಂಜಲಿ ನೀಡಿದೆ. ಕನ್ನಡದ ನಾಮಪದಗಳನ್ನೂ ಇಂಗ್ಲಿಷ್ಗೆ ತರ್ಜುಮೆ ಮಾಡುವ, ಅಧಿಕೃತ ಹೆಸರನ್ನು ಬಿಟ್ಟು ಹಳೆಯ ಹೆಸರನ್ನೆ ಮುಂದುವರಿಸುವ, ಇಂಗ್ಲಿಷ್ನ ಸಂಕ್ಷಿಪ್ತ ರೂಪದಲ್ಲಿ ಬರೆಯುವುದನ್ನು ಮುಂದುವರಿಸಿದೆ.
ಕನ್ನಡದಲ್ಲೇ ಇಂಗ್ಲಿಷ್: ಅನೇಕ ಪ್ರದೇಶಗಳ ಹೆಸರಿನೊಂದಿಗೆ ಇಂಗ್ಲಿಷ್ ಬಳಕೆ ಮುಂದುವರಿದಿದೆ. ಬನಶಂಕರಿಯನ್ನು ಕೆಲವರು ಬಿಎಸ್ಕೆ ಎಂದು ಕರೆಯುವುದನ್ನೇ ಪಾಲಿಕೆಯ ಅಧಿಕೃತ ಫಲಕಗಳಲ್ಲಿ ಬಳಸಲಾಗಿದೆ. ಅದೇ ರೀತಿ ಕೃಷ್ಣರಾಜೇಂದ್ರ ಮಾರುಕಟ್ಟೆಯನ್ನು ‘ಕೆ.ಆರ್. ಮಾರ್ಕೆಟ್’, ಚನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶವನ್ನು ‘ಸಿ.ಟಿ. ಬೆಡ್’, ಕೇಂದ್ರ ರೇಷ್ಮೆ ಮಂಡಳಿಯನ್ನು ‘ಸೆಂಟ್ರಲ್ ಸಿಲ್ಕ್ ಬೋರ್ಡ್’ ಎಂದು, ನರಸಿಂಹರಾಜ ರಸ್ತೆಯನ್ನು ‘ಎನ್.ಆರ್. ರಸ್ತೆ’ ಎಂದು ಕನ್ನಡದಲ್ಲೇ ಬರೆದಿರುವುದು ಕೆಲವು ಉದಾಹರಣೆ ಮಾತ್ರ.
ಪೊಲೀಸರೊಂದಿಗೆ ಸಮನ್ವಯವಿಲ್ಲ: ಅನೇಕ ಕಡೆಗಳಲ್ಲಿ ಸಂಚಾರಿ ಪೊಲೀಸರು ಅಳವಡಿಸಿರುವ ಮಾರ್ಗಫಲಕಗಳಿಗೂ ಬಿಬಿಎಂಪಿ ಫಲಕಗಳಿಗೂ ಹಲವು ವ್ಯತ್ಯಾಸಗಳಿವೆ. ಪಾಲಿಕೆಯಲ್ಲಿ ಹೆಸರುಗಳನ್ನು ಪೊಲೀಸರೊಂದಿಗೆ ಹಂಚಿಕೊಳ್ಳುವ ಪದ್ಧತಿ ಇಲ್ಲ. ಹಾಗಾಗಿ ಸಾಮಾನ್ಯವಾಗಿ ಜನಬಳಕೆಯಲ್ಲಿರುವ ಹೆಸರುಗಳನ್ನೆ ಪೊಲೀಸರು ಬಳಸುತ್ತಿರುತ್ತಾರೆ ಎಂದು ಬಿಬಿಎಂಪಿ ಕಂದಾಯ ಇಲಾಖೆ ಮೂಲಗಳು ತಿಳಿಸಿವೆ. ಸ್ವತಃ ಪಾಲಿಕೆಯಲ್ಲೂ ಸಮನ್ವಯವಿಲ್ಲ. ಬಸವನಗುಡಿ ರಸ್ತೆಯಲ್ಲಿ ಇಂಗ್ಲಿಷ್ನಲ್ಲಿ ಬುಲ್ ಟೆಂಪಲ್ ರೋಡ್ ಎಂದು ಬರೆದಿರುವ ಪಾಲಿಕೆಯೇ ಬಾಲಗಂಗಾಧರನಾಥ ಮೇಲ್ಸೇತುವೆಯ ಮೇಲೆ ಅಳವಡಿಸಿರುವ ಫಲಕದಲ್ಲಿ ಇಂಗ್ಲಿಷ್ನಲ್ಲೂ ಬಸವನಗುಡಿ ಎಂದೇ ಬರೆದಿದೆ. ರಾಯನ್ ವೃತ್ತದಿಂದ ಆರಂಭವಾಗುವ ‘ಪಂಡಿತ್ ದೀನದಯಾಳ್ ಉಪಾಧ್ಯಾಯ ರಸ್ತೆ’ ನಾಮಫಲಕದ ಎದುರಲ್ಲೇ ಪಾಲಿಕೆ ಮತ್ತೊಂದು ಫಲಕ ಅಳವಡಿಸಿದ್ದು, ಅದರಲ್ಲಿ ಕೇವಲ ‘3ನೇ ಅಡ್ಡರಸ್ತೆ’ ಎಂದು ಬರೆದಿದೆ. ಬೇಲಿಮಠ ರಸ್ತೆಯನ್ನು ಬೇಲಿಮಠ್ ಎಂದು ಬರೆಯುವಂತಹ ಅಕ್ಷರ ಲೋಪಗಳು ಲೆಕ್ಕಕ್ಕಿಲ್ಲ.
ನಾಮಪದದ ತರ್ಜುಮೆ: ಯಾವುದೇ ಭಾಷೆಯ ನಾಮಪದವನ್ನು ತರ್ಜುಮೆ ಮಾಡಬಾರದು ಎಂಬುದು ಸಾಮಾನ್ಯ ತಿಳಿವಳಿಕೆ. ಆದರೆ, ಬಸವನಗುಡಿಯ ತರ್ಜುಮೆ ಮಾಡಿದ ಹೆಸರನ್ನೇ ಬಿಬಿಎಂಪಿಯೂ ಬಳಸುತ್ತಿದೆ. ದೊಡ್ಡ ಬಸವನಗುಡಿ ಇರುವ ಪ್ರದೇಶವಾದ್ಧರಿಂದ ಈ ಹೆಸರು ಬಂದಿದ್ದು, ಕೆಲವರು ‘ಬುಲ್ ಟೆಂಪಲ್’ ಎಂದು ಕರೆದಿದ್ದರು. ಇದನ್ನೇ ಬಿಬಿಎಂಪಿ ಮುಂದುವರಿಸಿದೆ. ಕನ್ನಡದಲ್ಲಿ ಬಸವನಗುಡಿಯನ್ನು ಇಂಗ್ಲಿಷ್ನಲ್ಲಿ ಬುಲ್ ಟೆಂಪಲ್ ರೋಡ್ ಎಂದು ಬರೆಯಲಾಗುತ್ತಿದೆ. ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ, ಹೆಸರನ್ನು ಯಾವುದೇ ಭಾಷೆಯಲ್ಲಿ ಹಾಗೆಯೇ ಬರೆಯಬೇಕು. ‘ಬುಲ್’ ಎಂಬುದು ಕೆಟ್ಟ ಅನುವಾದ. ಬಸವಣ್ಣ ಎಂಬುದು ಗೂಳಿಯಲ್ಲ. ಪಾಲಿಕೆ ತಿದ್ದಿಕೊಳ್ಳಬೇಕು ಎಂದಿದ್ದಾರೆ.
ಮೆಟ್ರೋ ಮಾದರಿ: ಬಿಬಿಎಂಪಿಗೆ ಹೋಲಿಸಿದರೆ ಬೆಂಗಳೂರು ಮೆಟ್ರೋ ಉತ್ತಮ ಸ್ಥಿತಿಯಲ್ಲಿದೆ. ನಿಲ್ದಾಣಗಳ ಹೆಸರನ್ನು ಸಂಕ್ಷಿಪ್ತಗೊಳಿಸದೆ, ಅನುವಾದಿಸದೆ, ಮಹಾತ್ಮಾ ಗಾಂಧಿ ರಸ್ತೆ, ನಾಡಪ್ರಭು ಕೆಂಪೇಗೌಡ ಬಸ್ ನಿಲ್ದಾಣ ಎಂದು ಪೂರ್ಣ ಪ್ರಮಾಣದಲ್ಲಿ ಉಚ್ಛರಿಸಲಾಗುತ್ತದೆ.
ಹೆಸರಿಡುವ ಮುನ್ನ...: ಬೆಂಗಳೂರು ಸೇರಿ ರಾಜ್ಯದ ಯಾವುದೇ ನಗರದ ರಸ್ತೆಗೆ, ವೃತ್ತಕ್ಕೆ, ಉದ್ಯಾನಕ್ಕೆ ನಾಮಕರಣ ಮಾಡಲು ಹಾಗೂ ಹೆಸರು ಬದಲಿಸಲು ಸ್ಪಷ್ಟ ಮಾರ್ಗಸೂಚಿಯನ್ನು ನಗರಾಭಿವೃದ್ಧಿ ಇಲಾಖೆ ನೀಡಿದೆ. ನಾಮಕರಣಕ್ಕೆ ನಾಗರಿಕರಿಂದ ಬರುವ ಮನವಿ ಅಥವಾ ಸ್ವಯಂಪ್ರೇರಿತವಾಗಿ ಪಾಲಿಕೆ ಕಂದಾಯ ಇಲಾಖೆ ಪ್ರಸ್ತಾವನೆ ಸಿದ್ಧಪಡಿಸಿ, ಸ್ಥಳಕ್ಕೆ ತೆರಳಿ ಪಂಚನಾಮೆ ನಡೆಸುತ್ತದೆ. ಯಾವುದೇ ಗೊಂದಲಗಳು ಮೇಲ್ನೋಟಕ್ಕೆ ಕಂಡುಬರದಿದ್ದರೆ ಸುದ್ದಿ ಮಾಧ್ಯಮದಲ್ಲಿ ಈ ಕುರಿತು ಪ್ರಕಟಿಸಿ, ಸಾರ್ವಜನಿಕರಿಂದ ಪ್ರತಿಕ್ರಿಯೆಗೆ ಸಮಯ ನೀಡಲಾಗುತ್ತದೆ. ಆಕ್ಷೇಪಣೆಗಳಿದ್ದಲ್ಲಿ ಪರಿಗಣಿಸಿ ಕೌನ್ಸಿಲ್ ಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲಾಗುತ್ತದೆ. ನಂತರ ನಗರಾಭಿವೃದ್ಧಿ ಇಲಾಖೆ ಅಂತಿಮ ಒಪ್ಪಿಗೆಯನ್ನು ನೀಡುತ್ತದೆ. ಸರ್ಕಾರದ ಎಲ್ಲ ವ್ಯವಹಾರಗಳಲ್ಲಿ ಈ ಹೆಸರನ್ನೇ ಬಳಸಬೇಕು.
ದೆಹಲಿ ಮಾದರಿ ಏಕಿಲ್ಲ: ರಸ್ತೆಗಳಿಗೆ ಹೆಸರು ಬರೆಯುವಾಗ ದೆಹಲಿ ಮಾದರಿಯಾಗ ಬಲ್ಲದು. ಅಮೃತಾ ಶೇರ್ಗಿಲ್ ಮಾರ್ಗ್ ಎಂಬುದನ್ನು ಇಂಗ್ಲಿಷ್ನಲ್ಲಿ ಬರೆಯಬೇಕಾದರೂ ‘ರೋಡ್’ ಎಂದು ಬದಲಿಸದೆ ‘MARG’ ಎಂದೇ ಬರೆಯಲಾಗುತ್ತದೆ. ಅದೇ ರೀತಿ ರಫೀ ಮಾರ್ಗ್, ರಾಮ್ ತುಲಾ ಮಾರ್ಗ್, ಕ್ಯಾಪ್ಟನ್ ಗೌರ್ ಮಾರ್ಗ್ ಎಂಬಲ್ಲಿ ಇಂಗ್ಲಿಷ್ನಲ್ಲೂ ‘MARG’ ಎಂದೇ ಬಳಸಲಾಗಿದೆ.ಬೆಂಗಳೂರಿನಲ್ಲಿ ಫಲಕದಲ್ಲಿ ಇಂಗ್ಲಿಷ್ ಬಳಸುವಾಗಲೂ ‘RASTE', "VRUTTA' ಎಂದು ಬಳಸಿದರೆ ತಪ್ಪೇನು? ಹೊರಗಿಂದ ಬರುವವರಿಗೆ ಕನ್ನಡದ ಸೊಗಡು ಪರಿಚಯ ಆಗುತ್ತದೆ ಎನ್ನುವುದು ರಾ. ನಂ. ಚಂದ್ರಶೇಖರ್ ವಾದ.
-ರಮೇಶ್ ದೊಡ್ಡಪುರ