ಬೆಂಗಳೂರು: ನವೀನ್ ಮಹಾದೇವ್ ನಟಿಸಿ, ನಿರ್ದೇಶಿಸಿರುವ ಸಾರಿಕಾ ರಾವ್, ಹಿಮಶ್ರೀ ಅಭಿನಯದ ಮಹಿಳಾ ಪ್ರಧಾನ ‘ಮೃತ್ಯುದೇವತೆ’ ಚಿತ್ರ ಈಗಾಗಲೇ ಪೋಸ್ಟ್-ಪ್ರೊಡಕ್ಷನ್ ಪೂರ್ಣಗೊಳಿಸಿ, ರಿಲೀಸ್‌ಗೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಇದೇ 29ಕ್ಕೆ ತೆರೆಮೇಲೆ ಬರುವುದಾಗಿ ಚಿತ್ರತಂಡ ಘೋಷಿಸಿತ್ತು. ಆದರೆ, ಕೊನೆಯ ಹಂತದಲ್ಲಿ ಸೆನ್ಸಾರ್ ಸಮಸ್ಯೆ ಎದುರಾಗಿದ್ದು, ಹೀಗಾಗಿ ಚಿತ್ರತಂಡ ರಿಲೀಸ್ ದಿನಾಂಕ ಮುಂದೂಡುವ ಸಾಧ್ಯತೆಯಿದೆ. ಸೆನ್ಸಾರ್ ಪ್ರಮಾಣಪತ್ರಕ್ಕಾಗಿ ‘ಮೃತ್ಯು ದೇವತೆ’ ಚಿತ್ರತಂಡ ಪ್ರಾದೇಶಿಕ ಸಿಬಿಎಫ್ಸಿಗೆ ಅರ್ಜಿ ಸಲ್ಲಿಸಿದೆ. ಸಿನಿಮಾ ನೋಡಿರುವ ಮಂಡಳಿ ಸದಸ್ಯರು ಚಿತ್ರದಲ್ಲಿ ಕೆಲವೆಡೆ ಕೋಳಿ ಬಳಸಿರುವುದಕ್ಕೆ ಅನಿಮಲ್ ಬೋರ್ಡ್‌ನಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ ಪಡೆದಿರುವ ಬಗ್ಗೆ ವಿಚಾರಿಸಿದೆ. ಆದರೆ, ಚಿತ್ರತಂಡ ಎನ್‌ಒಸಿ ಪಡೆಯದ ಕಾರಣ ಸೆನ್ಸಾರ್ ಸರ್ಟಿಫಿಕೇಟ್ ನೀಡಲು ಮಂಡಳಿ ನಿರಾಕರಿಸಿದೆ. ಸದ್ಯ ಚಿತ್ರತಂಡ ಅನಿಮಲ್ ಬೋರ್ಡ್‌ಗೆ ಅರ್ಜಿ ಸಲ್ಲಿಸಿದ್ದು, ಅನುಮತಿ ಸಿಕ್ಕ ಬಳಿಕವಷ್ಟೇ ಪರಿಷ್ಕೃತ ಬಿಡುಗಡೆ ದಿನಾಂಕ ಘೋಷಿಸುವುದಾಗಿ ತಿಳಿಸಿದೆ. ಮಹಿಳಾ ಪ್ರಧಾನ ‘ಮೃತ್ಯು ದೇವತೆ’ ಚಿತ್ರದ ‘ನಮ್ಮವ ಮಾದೇವ’ ಎಂಬ ಟೈಟಲ್ ಟ್ರ್ಯಾಕ್ ಇತ್ತೀಚೆಗೆ ರಿಲೀಸ್ ಮಾಡಲಾಗಿದೆ. ಸಮಾಜದಲ್ಲಿ ಯುವತಿಯರು ಹೇಗೆಲ್ಲ ವಂಚನೆಗೆ ಒಳಗಾಗುತ್ತಾರೆ? ಅದರಿಂದ ಹೊರಬರಲು ಏನು ಮಾಡಬೇಕು? ಎಂಬುದೇ ಚಿತ್ರದ ಕಥೆ. ಸಾರಿಕಾ, ಹಿಮಶ್ರೀ ಜತೆಗೆ ಹಿರಿಯ ನಟಿ ವಿನಯಾ ಪ್ರಸಾದ್, ಮಾಹೀನ್, ಪವನ್, ಸೂರ್ಯ ಕಲಾ ಬಳಗದಲ್ಲಿದ್ದಾರೆ.