ಶಿಕ್ಷಕರ ನೇಮಕಾತಿ, ಕನ್ನಡ ಭಾಷಾ ಹುದ್ದೆಯೇ ಮಾಯ!

Teacher
ಸಾಂದರ್ಭಿಕ ಚಿತ್ರ
Published on

| ಶ್ರೀಕಾಂತ ಅಕ್ಕಿ ಹೊಸಪೇಟೆ

ಪದವೀಧರ ಶಿಕ್ಷಕರ ನೇಮಕಾತಿಯಲ್ಲಿ ಪ್ರತಿ ಸಲವೂ ಕನ್ನಡ ಭಾಷಾ ಶಿಕ್ಷಕರ ಹುದ್ದೆ ಮಾಯ ವಾಗುತ್ತಿರುವುದು ವ್ಯಾಪಕ ಟೀಕೆಗೆ ಒಳಗಾಗಿದೆ. ಈಗಾಗಲೆ 2016, 2017 ಮತ್ತು 2019ರಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ನಾಲ್ಕನೆ ಹಂತದಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ನಡುವೆ ಒಮ್ಮೆಯೂ ಕನ್ನಡ ವಿಷಯ ಶಿಕ್ಷಕರನ್ನು ನೇಮಕ ಮಾಡಿಕೊಂಡಿಲ್ಲ. ಈಗ 6 ರಿಂದ 8 ನೇ ತರಗತಿ ಬೋಧನೆಗಾಗಿ 15 ಸಾವಿರ ಶಿಕ್ಷಕರ ಹುದ್ದೆ ಭರ್ತಿಗೆ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಇಲ್ಲೂ ಕನ್ನಡ ಭಾಷಾ ಶಿಕ್ಷಕರ ಹುದ್ದೆ ಸೃಜನೆ ಮಾಡಿಲ್ಲ. ಇದರಿಂದಾಗಿ ಕರ್ನಾಟಕದಲ್ಲೇ ಭಾಷಾ ಶಿಕ್ಷಕರ ನೇಮಕ ನಡೆಯದಿದ್ದರೆ ಇನ್ಯಾವ ರಾಜ್ಯದಲ್ಲಿ ನೇಮಕವಾಗಬೇಕು ಎಂಬ ಪ್ರಶ್ನೆ ಮೂಡಿದೆ. ಪದವಿಯಲ್ಲಿ ಕನ್ನಡವನ್ನು ಐಚ್ಛಿಕ ವಿಷಯವನ್ನಾಗಿ ಅಭ್ಯಸಿಸಿ ಬಿ.ಇಡಿ ಮತ್ತು ಡಿ.ಇಡಿಗಳಲ್ಲಿ ಕನ್ನಡ ಭಾಷಾ ಬೋಧನಾ ವಿಷಯವನ್ನು ಅಧ್ಯಯನ ಮಾಡಿದ ಅನೇಕ ಶಿಕ್ಷಕರು ಇಂದಲ್ಲ, ನಾಳೆ ಕನ್ನಡ ಭಾಷಾ ವಿಷಯ ಶಿಕ್ಷಕರ ಹುದ್ದೆ ಸೃಜಿಸುತ್ತಾರೆ ಎಂದು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ, ಕನ್ನಡ ಭಾಷಾ ಬೋಧನೆ ಮಾಡಲು ಅವ ಕಾಶವೇ ನೀಡದಿರುವುದು ದುರ್ದೈವದ ಸಂಗತಿ.

ಸರ್ಕಾರದ ನಡೆಗೆ ಟೀಕೆ: ಕನ್ನಡ ಶಾಲೆಗಳಲ್ಲಿ ಭಾಷಾ ವಿಷಯ ಬೋಧಿಸಲು ಶಿಕ್ಷಕರನ್ನು ನೇಮಕ ಮಾಡಬೇಕೆನ್ನುವ ಸಾಮಾನ್ಯ ವಿಚಾರ ತಿಳಿಯಲಿಲ್ಲವೇ ಎಂಬ ಪ್ರಶ್ನೆ ಎದ್ದಿದೆ. ಪ್ರಸ್ತುತ ನೇಮಕಾತಿಯಲ್ಲಿ ಆಂಗ್ಲಭಾಷಾ ವಿಷಯಗಳ ಹುದ್ದೆಗಳು ಕಡಿಮೆಯಾಗಿದೆ ಎಂದು ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 250 ಹುದ್ದೆಗಳನ್ನು 557ಕ್ಕೆ ಹೆಚ್ಚಿಸಲಾಗಿದೆ. ಆದರೆ, ಒಂದೇ ಒಂದು ಹುದ್ದೆ ಕನ್ನಡ ಭಾಷಾ ಶಿಕ್ಷಕರರದ್ದಿಲ್ಲ. ಉಳಿದ ವಿಷಯಗಳ ಶಿಕ್ಷಕರ ನೇಮಕಾತಿಗೆ ವಿರೋಧವಿಲ್ಲ. ಆದರೆ, ಎಲ್ಲ ವಿಷಯಗಳಿಗೆ ಸಿಗುವ ಅವಕಾಶದಂತೆ ಕನ್ನಡ ವಿಷಯ ಬೋಧನೆಗೆ ಕನ್ನಡನಾಡಿನಲ್ಲಿ ಮೊದಲ ಆದ್ಯತೆ ಸಿಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಚಿಂತಿಸಬೇಕಾಗಿದೆ.

6 ರಿಂದ 8 ನೇ ತರಗತಿ ಬೋಧನೆಗಾಗಿ 15 ಸಾವಿರ ಶಿಕ್ಷಕರ ಹುದ್ದೆ ಭರ್ತಿಗೆ ಅಧಿಸೂಚನೆ ಹೊರಡಿಸಿರುವುದು ಸ್ವಾಗತಾರ್ಹ. ಆದರೆ, ಅದರಲ್ಲಿ ಕನ್ನಡ ಭಾಷಾ ವಿಷಯ ಶಿಕ್ಷಕರ ಹುದ್ದೆ ಸೃಜನೆ ಮಾಡಿಲ್ಲ. ಹಾಗಾದರೇ ಕನ್ನಡ ಭಾಷಾ ವಿಷಯ ಶಿಕ್ಷಕರ ಅವಶ್ಯಕತೆ ರಾಜ್ಯಕ್ಕಿಲ್ಲವೇ? ಸರ್ಕಾರದ ಈ ಧೋರಣೆ ಸರಿಯಲ್ಲ. ಕೂಡಲೇ ನೇಮಕಾತಿ ಅಧಿಸೂಚನೆಯಲ್ಲಿ ಕನ್ನಡ ಭಾಷಾ ವಿಷಯ ಶಿಕ್ಷಕರ ಹುದ್ದೆ ಸೃಜನೆ ಮಾಡಬೇಕು. | ಬರಗೂರು ರಾಮಚಂದ್ರಪ್ಪ ಕನ್ನಡ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ಬೆಂಗಳೂರು ಸರ್ಕಾರ ನೇಮಕಾತಿ ಮಾಡಿಕೊಳ್ಳುತ್ತಿರುವ ಪದವೀಧರ ಶಿಕ್ಷಕರಲ್ಲಿ ಆಂಗ್ಲ ಭಾಷೆ, ವಿಜ್ಞಾನ, ಸಮಾಜ ಪಾಠ ವಿಷಯ ಬೋಧಿಸುವವರ ನೇಮಕಾತಿಗೆ ಅವಕಾಶ ನೀಡಿದೆ. ಎಲ್ಲ ವಿಷಯಗಳನ್ನು ಅಭ್ಯಸಿಸಿದಂತೆ ಕನ್ನಡವನ್ನು ಪ್ರಥಮ ಭಾಷೆಯಾಗಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ, ಕನ್ನಡ ಭಾಷೆ ವಿಷಯ ಬೋಧಿಸಲು ಶಿಕ್ಷಕರನ್ನು ನೇಮಿಸಿಕೊಳ್ಳದಿರುವುದು ಅತ್ಯಂತ ನೋವಿನ ಸಂಗತಿ. | ದಿವಾಕರ ನಾರಾಯಣ ಕಲ್ಯಾಣ ಕರ್ನಾಟಕ ಶಿಕ್ಷಕರ ಸಂಘದ ಅಧ್ಯಕ್ಷ, ಬಳ್ಳಾರಿ

ಅರ್ಜಿ ಸಲ್ಲಿಕೆಗೆ ತಾಂತ್ರಿಕ ಸಮಸ್ಯೆ

ರಾಜ್ಯ ಸರ್ಕಾರ 15 ಸಾವಿರ ಶಿಕ್ಷಕರ ಹುದ್ದೆ ಭರ್ತಿಗೆ ಅಧಿಸೂಚನೆ ಹೊರಡಿಸಿದ್ದು, ತಾಂತ್ರಿಕ ದೋಷದಿಂದ ನಿಗದಿತ ಸಮಯಕ್ಕೆ ಅರ್ಜಿ ಸಲ್ಲಿಕೆ ಆರಂಭವಾಗಿಲ್ಲ. ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ವೇಳಾಪಟ್ಟಿ ಪ್ರಕಾರ ಬುಧವಾರದಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಬೇಕಾಗಿತ್ತು. ಆದರೆ, ರಾತ್ರಿಯವರೆಗೂ ಅರ್ಜಿ ಸಲ್ಲಿಸುವ ಲಿಂಕ್ ಶಿಕ್ಷಣ ಇಲಾಖೆಯ ವೆಬ್​ಸೈಟ್​ನಲ್ಲಿ ಕಾಣಲಿಲ್ಲ. ಈ ಸಂಬಂಧ ಅಧಿಕಾರಿಗಳನ್ನು ಸಂರ್ಪಸಿದಾಗ ತಾಂತ್ರಿಕ ಕಾರಣದಿಂದ ಸಮಸ್ಯೆ ಉಂಟಾಗಿದ್ದು, ಬುಧವಾರ ರಾತ್ರಿಯಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಸಾಧ್ಯವಾಗಲಿದೆ. ಅರ್ಜಿ ಸಲ್ಲಿಸಲು ಏ.22 ಕೊನೆಯ ದಿನವಾಗಿದ್ದು, ಅಭ್ಯರ್ಥಿಗಳಿಗೆ ಆತಂಕ ಬೇಡ ಎಂದು ತಿಳಿಸಿದರು.

ಅಭ್ಯರ್ಥಿಗಳ ಆರೋಪ: ಆಂಗ್ಲಭಾಷಾ ಶಿಕ್ಷಕರ ಹುದ್ದೆಗಳ ಹಂಚಿಕೆಯಲ್ಲಿ ಶಿಕ್ಷಣ ಇಲಾಖೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ. 2019ನೇ ಸಾಲಿನ ನೇಮಕಾತಿಯಲ್ಲಿ ಉಳಿಕೆಯಾದ ಹುದ್ದೆಗಳಲ್ಲಿ 3 ಸಾವಿರಕ್ಕೂ ಹೆಚ್ಚು ಆಂಗ್ಲಭಾಷಾ ಹುದ್ದೆಗಳಾ ಗಿರುತ್ತವೆ. ಆದರೆ, ಪ್ರಸ್ತುತ 2022ನೇ ಸಾಲಿನ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಯಲ್ಲಿ ಅತ್ಯಂತ ಕಡಿಮೆ ಹುದ್ದೆಗಳು(1,500) ಆಂಗ್ಲ ಭಾಷಾ ಶಿಕ್ಷಕರಿಗೆ ಹಂಚಿಕೆ ಮಾಡಿತ್ತು. ಆದರೆ, ಹೈದರಾಬಾದ್ ಕರ್ನಾಟಕ ಅಭ್ಯರ್ಥಿಗಳು ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ಭಾಗದವರಿಗೆ ಆಂಗ್ಲ ಭಾಷಾ ಹುದ್ದೆಗಳನ್ನು 250ರಿಂದ 550ಕ್ಕೆ ಹೆಚ್ಚಿಸಿದೆ. ಉಳಿದ ಜಿಲ್ಲೆಗಳಲ್ಲಿ 1200ಕ್ಕೂ ಆಂಗ್ಲಭಾಷೆ ಖಾಲಿ ಇದ್ದರೂ ಇದರ ಸಂಖ್ಯೆ ಹೆಚ್ಚಿಸಿಲ್ಲ. ಇದು ತಾರತಮ್ಯ ಧೋರಣೆಯಾಗಿದ್ದು, ಸರಿಪಡಿಸಬೇಕೆಂದು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net