

ಮುಂಬೈ: ವಿಶ್ವ ಸುಂದರಿ 2024ರ ಚೆಕ್ ಗಣರಾಜ್ಯದ ಕಿರೀಟ ಕ್ರಿಸ್ಟಿನಾ ಪಿಜ್ಕೋವಾ ಮುಡಿಗೇರಿದೆ. ಆದರೆ ಈ ಬಾರಿ ವಿಶ್ವ ಸುಂದರಿ ಪಟ್ಟ ಅಲಂಕರಿಸುವಲ್ಲಿ ಕನ್ನಡತಿ ಉಡುಪಿಯ ಚೆಲುವೆ ಸಿನಿ ಶೆಟ್ಟಿ ಜಸ್ಟ್ ಮಿಸ್ ಆಗಿದ್ದಾರೆ.
ಈ ಬಾರಿ ಮುಂಬೈನಲ್ಲಿ 71ನೇ ವಿಶ್ವ ಸುಂದರಿ ಸ್ಪರ್ಧೆ ನಡೆಯಿತು. ವಿಶ್ವದ 120 ದೇಶಗಳ ಮಾಡೆಲ್ಗಳು ಸ್ಪರ್ಧಿಸಿದ್ದರು. ಭಾರತದಿಂದ 22ರ ಹರಯದ ಸಿನಿ ಶೆಟ್ಟಿ ಭಾಗವಹಿಸಿದ್ದರು.
ಕರ್ನಾಟಕದ ಸಿನಿ ಶೆಟ್ಟಿ ಬೆಳೆದದ್ದು ಮುಂಬೈನಲ್ಲಿ. 2022 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಪ್ರಶಸ್ತಿಯನ್ನು ಗೆದ್ದ ಸಿನಿ ಶೆಟ್ಟಿ ಈ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಅಗ್ರ 8 ರೊಳಗೆ ತಲುಪಿದರು. ಆದರೆ ಅದರ ನಂತರ ಅವರು ಟಾಪ್ 4 ಸ್ಪರ್ಧಿಗಳನ್ನು ಪ್ರವೇಶಿಸಲು ವಿಫಲವಾದರು.
ನಂತರ ಅವರು ಸೌಂದರ್ಯ ಸ್ಪರ್ಧೆಯಿಂದ ಹಿಂದೆ ಸರಿದರು. ಹೀಗಾಗಿ ಸಿನಿಶೆಟ್ಟಿ ಅವರಿಗಷ್ಟೇ ಅಲ್ಲ, ದೇಶದ ಕೋಟ್ಯಂತರ ಜನರಿಗೆ ನಿರಾಸೆ ಎದುರಾಯಿತು. 1994ರಲ್ಲಿ ಕರ್ನಾಟಕದ ಐಶ್ವರ್ಯಾ ರೈ ವಿಶ್ವಸುಂದರಿಯಾಗಿ ಆಯ್ಕೆಯಾಗಿದ್ದನ್ನು ಸ್ಮರಿಸಬಹುದು.
ಭಾರತವು ಈ ಹಿಂದೆ ಆರು ಬಾರಿ ವಿಶ್ವ ಸುಂದರಿ ಪ್ರಶಸ್ತಿ ಗೆದ್ದಿದೆ. ರೀಟಾ ಫರಿಯಾ (1966), ಐಶ್ವರ್ಯಾ ರೈ ಬಚ್ಚನ್ (1994), ಡಯಾನಾ ಹೇಡನ್ (1997), ಯುಕ್ತಾ ಮುಖಿ (1999), ಪ್ರಿಯಾಂಕಾ ಚೋಪ್ರಾ (2000), ಮಾನುಷಿ ಚಿಲ್ಲರ್ (2017). ಇದೇ ವೇಳೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬಂದಿದ್ದ ನೀತಾ ಅಂಬಾನಿ ಅವರಿಗೆ ವಿಶ್ವ ಸುಂದರಿ ಮಾನವೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇನ್ನು ಪುಟ್ಟ ದೇಶ ಜೆಕ್ ಗಣರಾಜ್ಯವು ವಿಶ್ವ ಸುಂದರಿ ಕಿರೀಟವನ್ನು ಗೆದ್ದಿರುವುದು ಇದು ಎರಡನೇ ಬಾರಿ ಎಂಬುದು ಗಮನಾರ್ಹ ಸಂಗತಿಯಾಗಿದೆ.