ಬಾಲಿವುಡ್ನಲ್ಲಿ ಆ್ಯಕ್ಷನ್ ಸ್ಟಾರ್ ಆಗಿ ಹೆಸರು ಮಾಡಿರುವ ಟೈಗರ್ ಶ್ರಾಫ್ ಮತ್ತು ಕನ್ನಡದ "ಉಳಿದವರು ಕಂಡಂತೆ', "ಕಿರಿಕ್ ಪಾರ್ಟಿ' ಸಂಕಲನಕಾರ, "ಅವನೇ ಶ್ರೀಮನ್ನಾರಾಯಣ' ನಿರ್ದೇಶಕ ಸಚಿನ್ ಬಿ. ರವಿ ಕಾಂಬಿನೇಷನ್ನಲ್ಲಿ ಹೊಸ ಸಿನಿಮಾ ಮೂಡಿಬರುತ್ತಿರುವುದು ಗೊತ್ತಿತ್ತು. ಇದೀಗ ಆ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್ - ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ. ಈ ಬಗ್ಗೆ ವಿಜಯವಾಣಿ ಜತೆ ಮಾಹಿತಿ ಹಂಚಿಕೊಂಡ ನಿರ್ದೇಶಕ ಸಚಿನ್ ರವಿ, "ಟೈಗರ್ ಶ್ರಾಫ್ ಒಳ್ಳೆ ಡಾನ್ಸರ್ ಮತ್ತು ಫೈಟರ್ ಎಂಬುದು ಎಲ್ಲರಿಗೂ ಗೊತ್ತು. ಅವರ ಸಿಕ್ಸ್ ಪ್ಯಾಕ್ ಬಾಡಿ, ಡಾನ್ಸ್ ಮತ್ತು ಸ್ಟಂಟ್ಗಳನ್ನು ಎಲ್ಲ ಸಿನಿಮಾಗಳಲ್ಲೂ ನೋಡಿರುತ್ತಾರೆ. ಆದರೆ, ನಮ್ಮ ಚಿತ್ರದಲ್ಲಿ ಹಾಡುಗಳೇ ಇರುವುದಿಲ್ಲ. ಕೆಲ ಫೈಟ್ಗಳಿದ್ದರೂ, ಅವು ಕಥೆಗೆ ಪೂರಕವಾಗಿ ಇರಲಿವೆ. ಸಿನಿಮಾದ ಶೇಕಡಾ 80ರಿಂದ 9ರಷ್ಟು ಭಾಗದಲ್ಲಿ ಟೈಗರ್ ಇರುತ್ತಾರೆ. ಭಾವನಾತ್ಮಕ ಅಂಶಗಳಿರುವ ಆ್ಯಕ್ಷನ್ ಥ್ರಿಲ್ಲರ್ ಕಥೆಯಿದು. ಈ ಚಿತ್ರದಲ್ಲಿ ಹೊಸ ಟೈಗರ್ ನೋಡಬಹುದು. ನಟನೆಗೆ ತುಂಬ ಸ್ಕೋಪ್ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಸದ್ಯ ಚಿತ್ರೀಕರಣೋತ್ತರ ಕೆಲಸಗಳು ನಡೆಯುತ್ತಿವೆ. ಕೆಲವೇ ದಿನಗಳಲ್ಲಿ ಚಿತ್ರದ ಟೈಟಲ್ ರಿವೀಲ್ ಮಾಡಲಿದ್ದೇವೆ. ಈ ವರ್ಷ "ರಾಮಾಯಣ', "ಕಿಂಗ್' ಸೇರಿ ಹಿಂದಿಯಲ್ಲಿ ಕೆಲ ದೊಡ್ಡ ಸಿನಿಮಾಗಳು ಬಿಡುಗಡೆಗೆ ಲೈನಪ್ನಲ್ಲಿವೆ. ಹೀಗಾಗಿ 2027ರ ಹೊಸ ವರ್ಷಕ್ಕೆ ನಮ್ಮ ಸಿನಿಮಾ ರಿಲೀಸ್ ಮಾಡಲಿದ್ದೇವೆ' ಎಂದು ಹೇಳಿಕೊಳ್ಳುತ್ತಾರೆ. ಅಂದಹಾಗೆ, ಚಿತ್ರಕ್ಕೆ "ಹಿಟ್ಮ್ಯಾನ್' ಎಂಬ ಶೀರ್ಷಿಕೆ ಇಡಲಾಗಿದ್ದು, ಇನ್ನಷ್ಟೇ ಚಿತ್ರತಂಡ ಅದನ್ನು ಬಹಿರಂಗಗೊಳಿಸಬೇಕಿದೆ. ಹಾಗೇ ಟೈಗರ್ ಶ್ರಾಫ್ ಜತೆ ಸುನೀಲ್ ಶೆಟ್ಟಿ, ಅಮಿತ್ ಸದ್, ಸಂಜನಾ ಸಂಗಿ, ಮಹಿಮಾ ಮಕ್ವಾನಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.