ಮುಖ್ಯಮಂತ್ರಿ ಬೊಮ್ಮಾಯಿ ಕಚೇರಿಯಲ್ಲಿ ಕಿಚ್ಚ ಸುದೀಪ್​; ನಡೆಯಿತು ಹಲವು ವಿಷಯಗಳ ಕುರಿತು ಚರ್ಚೆ..

Untitled-1
Published on

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಚಿತ್ರನಟ, ನಿರ್ದೇಶಕ ಕಿಚ್ಚ ಸುದೀಪ್ ಇಂದು ಭೇಟಿಯಾಗಿ ಬಹಳಷ್ಟು ಮಾತುಕತೆ ನಡೆಸಿದ್ದಾರೆ. ಮುಖ್ಯಮಂತ್ರಿ ಅವರ ಕಚೇರಿಯಲ್ಲೇ ಸುದೀಪ್ ಭೇಟಿ ಆಗಿರುವ ಕುರಿತು ಖುದ್ದು ಸಿಎಂ ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ಮೆಚ್ಚಿನ ನಟ ಸುದೀಪ್​ ಅವರನ್ನು ಇಂದು ತಮ್ಮ ಕಚೇರಿಯಲ್ಲಿ ಭೇಟಿಯಾಗಿದ್ದು, ಎಂದಿನಂತೆ ಖುಷಿಯ ವಿಚಾರ ಎಂದಿರುವ ಸಿಎಂ, ಮನೋರಂಜನಾ ಕ್ಷೇತ್ರಕ್ಕೆ ಸಂಬಂಧಿತ ಹಲವು ವಿಚಾರಗಳ ಕುರಿತು ಬಹಳಷ್ಟು ಮಾತುಕತೆ ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ. ಮಾತ್ರವಲ್ಲ, ಸುದೀಪ್ ಅವರ ಮುಂದಿನ ಎಲ್ಲ ಕಾರ್ಯದಲ್ಲೂ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ.

ಜುಲೈ 28ರಂದು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಿಗೇ ಕಿಚ್ಚ ಸುದೀಪ್ ಟ್ವೀಟ್ ಮಾಡಿ ಶುಭ ಕೋರಿದ್ದರು. 'ನಾನು ಅವರ ಸರಳತೆಯನ್ನು ನೋಡಿ ಬೆಳೆದವನು. ನನ್ನ ವೃತ್ತಿಜೀವನದ ಆರಂಭದ ದಿನಗಳಲ್ಲಿ ಅವರು ಸಾಕಷ್ಟು ಬೆಂಬಲವಾಗಿ ನಿಂತಿದ್ದರು, ನಿಮಗೆ ಒಳ್ಳೆಯದಾಗಲಿ ಮಾಮ' ಎಂದು ಸುದೀಪ್ ಅಂದು ಹೇಳಿಕೊಂಡಿದ್ದರು. ಅದಾಗಿ ಒಂದು ತಿಂಗಳ ಬಳಿಕ ಇದೀಗ ಖುದ್ದಾಗಿ ಸಿಎಂ ಅವರನ್ನು ಭೇಟಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net