ಚತುರ್ಭಾಷಾ ಚತುರೆ ಅರ್ಚನಾ; 4 ಭಾಷೆಗಳಲ್ಲಿ ಮಿಂಚುತ್ತಿರುವ ಕನ್ನಡದ ನಟಿ

Archana
Published on

ಬೆಂಗಳೂರು: ‘ಮಾಮು ಟೀ ಅಂಗಡಿ’ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟವರು ಬೆಂಗಳೂರು ಹುಡುಗಿ ಅರ್ಚನಾ. ಆ ಬಳಿಕ ‘ಗೌಡ್ರು ಹೋಟೆಲ್’, ‘ಟ್ಯೂಬ್​ಲೈಟ್’ ಸಿನಿಮಾಗಳಲ್ಲಿ ನಟಿಸಿದರು. ಅಷ್ಟರಲ್ಲಿ ತಮಿಳಿನಲ್ಲಿ ಅವಕಾಶಗಳು ಬಂದು, ಅವರು ಕಾಲಿವುಡ್​ಗೆ ಹಾರಿದರು. ‘ಯಾನೈ ಮೇಲೆ ಕುದುರೈ ಸವಾರೈ’, ‘ಕನ್ನಿಸಾಮಿ’, ‘ವೆರುಲಿ’, ‘ಥಾವಮ್, ‘ಮೌನಿಕ’ ಸೇರಿದಂತೆ ಕೆಲವು ತಮಿಳು ಚಿತ್ರಗಳಲ್ಲಿ ನಟಿಸಿದರು. ‘ದಮಯಂತಿ ಕೌಶಿಕ ವರ್ವ’ ಚಿತ್ರದ ಮೂಲಕ ಟಾಲಿವುಡ್​ಗೆ ಎಂಟ್ರಿ ಕೊಟ್ಟ ಅರ್ಚನಾ, ಇದೀಗ ಮತ್ತೆ ಕನ್ನಡಕ್ಕೆ ವಾಪಸ್ಸಾಗಿದ್ದಾರೆ. ಜತೆಗೆ ಮಲಯಾಳಂನಲ್ಲೂ ಮಿಂಚಲು ರೆಡಿಯಾಗಿದ್ದಾರೆ.

‘ನನಗೆ ಕನ್ನಡದಲ್ಲಿ ಹೆಚ್ಚು ನಟಿಸಬೇಕು ಅಂತ ಆಸೆ. ಇಷ್ಟದ ಪಾತ್ರ ಸಿಗುತ್ತಿರಲಿಲ್ಲ. ತಮಿಳಿನಲ್ಲಿ ಹೆಚ್ಚು ಮಹಿಳಾಪ್ರಧಾನ ಪಾತ್ರಗಳು ಸಿಗುತ್ತಿವೆ. ಹೀಗಾಗಿ ಅಲ್ಲಿ ಸಿನಿಮಾಗಳನ್ನು ಮಾಡುತ್ತಿದ್ದೇನೆ. ಈಗ ಕನ್ನಡದಲ್ಲಿ ‘ಸುರಾರಿ’ ಎಂಬ ಚಿತ್ರದಲ್ಲಿ ಕುಂದಾಪುರದ ಹುಡುಗಿ ಲಕ್ಷಣ ಎಂಬ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಈಗಾಗಲೇ ಟ್ರೇಲರ್ ಮತ್ತು ಹಾಡುಗಳು ಬಿಡುಗಡೆಯಾಗಿದ್ದು, ಉತ್ತಮ ರೆಸ್ಪಾನ್ಸ್ ಬರುತ್ತಿದೆ’ ಎಂದು ಕನ್ನಡ ಚಿತ್ರದ ಬಗ್ಗೆ ಹೇಳಿಕೊಳ್ಳುತ್ತಾರೆ ಅರ್ಚನಾ.

ಚಿತ್ರಕ್ಕೆ ವಿಶಾಲ ಜಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ನಿರ್ದೇಶಿಸಿ, ನಾಯಕನಾಗಿ ನಟಿಸಿದ್ದಾರೆ. ‘ಸುರಾರಿ’ ಕನ್ನಡದ ಜತೆ ಹಿಂದಿ, ತಮಿಳು ಹಾಗೂ ತೆಲುಗಿನಲ್ಲೂ ಬಿಡುಗಡೆಯಾಗಲಿದೆ. ಇದೀಗ ಮಾಲಿವುಡ್​ಗೆ ಪದಾರ್ಪಣೆ ಮಾಡಿರುವ ಅರ್ಚನಾ, ಮಲಯಾಳಂ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಮೂಡಿಬರುತ್ತಿರುವ ‘ಮೈ ಫಾದರ್ ಮೈ ಹೀರೋ’ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಆ ಚಿತ್ರ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಹೀಗೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಅಂತ ನಾಲ್ಕು ಭಾಷೆಗಳಲ್ಲೂ ಅರ್ಚನಾ ನಟಿಸುತ್ತಿದ್ದಾರೆ. ಅವರು ನಟಿಸಿರುವ ಮೂರು ತಮಿಳು ಹಾಗೂ ಒಂದು ತೆಲುಗು ಸೇರಿದಂತೆ ನಾಲ್ಕು ಚಿತ್ರಗಳು ಬಿಡುಗಡೆಗೆ ರೆಡಿಯಿವೆಯಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net