

ನಾನು ಪ್ರತಿ ಬಾರಿಯೂ 'ಮರೆಯದ ನೆನಪನು ಎದೆಯಲ್ಲಿ ತಂದೆ ನೀನು' ಎಂಬ ಹಾಡು ಗುನುಗುವಾಗಲೆಲ್ಲ ನೀವೇ ಮತ್ತೆ ಮತ್ತೆ ನೆನಪಾಗುತ್ತೀರಿ..
ಹೌದು ನನಗೆ ಮಾತ್ರ ಅಲ್ಲ. ಬಹುಶ ಇಡೀ ಕರ್ನಾಟಕ ಮಂದಿಗೆ ನೀವು ಮರೆಯದ ನೆನಪುಗಳನ್ನು ಬಿಟ್ಟು ಹೋಗಿದ್ದಿರಿ. ನೀವು ನಮ್ಮನ್ನು ದೈಹಿಕವಾಗಿ ಬಿಟ್ಟು ತೆರಳಿ ಇಂದಿಗೆ ಸರಿ 14 ವರ್ಷ (2009ರ ಡಿ.30ರಂದು ) ಕಳೆಯಿತು. ಆದ್ರೆ ನಮ್ಮ ಹೃದಯದಲ್ಲಿ ಸದಾ ವಿರಾಜಮಾನ ಆಗಿರುವಿರಿ ಯಜಮಾನರೇ.!
ಇದು ಯಾರ ಬಗ್ಗೆ ಅಂತ ಈಗಲಾದರೂ ಗೊತ್ತಾಯಿತಾ? ಮತ್ಯಾರು ಅಲ್ಲ, ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಕುರಿತಾಗಿದೆ.
ಖ್ಯಾತ ಸಂಗೀತ ಸಂಯೋಜಕ ಸಿ ಅಶ್ವಥ್ ವಿಧಿವಶ ಆಗಿ 24 ಗಂಟೆ (ಡಿ.29) ಕಳೆದಿದ್ದು, ಕರುನಾಡಿನ ಮಂದಿ ಇನ್ನೂ ದುಃಖದಿಂದ ಹೊರ ಬಂದಿರಲಿಲ್ಲ. ಮತ್ತೆ ಬರ ಸಿಡಿಲಿಂನಂಥ ಸುದ್ದಿ, ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಮತ್ತೆಂದೂ ಬಾರದ ಲೋಕಕ್ಕೆ ತೆರಳಿದ್ದಾರೆ ಎಂದು!
ಯಾರಿತ ಸಂಪತ್ ಕುಮಾರ್?
ವಿಷ್ಣುವರ್ಧನ್ ಅವರ ಮೂಲ ಹೆಸರು ಏನು ಗೊತ್ತೇ? ನಿಮಗೆ ತಿಳಿದಿರಲಿಕ್ಕಿಲ್ಲ, ಸಂಪತ್ ಕುಮಾರ್ ಎಂಬಾತ ವಿಷ್ಣುವರ್ಧನ್ ಹೇಗಾದರು ಎಂಬುದು ಒಂದು ರೋಚಕ ಕತೆ. 1972ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು' ಚಿತ್ರದಲ್ಲಿ ನೀಡಿದ ಅದ್ಭುತ ಪರ್ಫಾರ್ಮೆನ್ಸ್ ಕಾರಣದಿಂದ ವಿಷ್ಣುವರ್ಧನ್ ಎಂಬ ಹೆಸರು ನಾಮಕರಣ ಆಯಿತು.
ಬಳಿಕ ನಟಿಸಿದ ಸಾಹಸ ಸಿಂಹ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ದೊರೆತಿದ್ದು, ಬರೋಬ್ಬರಿ 25 ವಾರಕ್ಕೂ ಅಧಿಕ ದಿನ ಪ್ರದರ್ಶನ ಕಾಣುವ ಮೂಲಕ ಆಗಿನ ಕಾಲದಲ್ಲಿ ಬಾಕ್ಸ್ ಆಫೀಸ್ ದಾಖಲೆ ಆಯಿತು. ಇಲ್ಲಿಂದ ಬಳಿಕ ಮುಟ್ಟಿದ್ದೆಲ್ಲವೂ ಚಿನ್ನ ಎಂಬಂತೆ ವಿಷ್ಣು ನಟಿಸಿದ ಶೇ.95 ಸಿನಿಮಾಗಳು ಸೂಪರ್ ಹಿಟ್. ಜತೆಗೆ ಸಾಹಸಸಿಂಹ ಎಂಬ ಬಿರುದು ಕೂಡ ಪಡೆದರು. ಸುಹಾಸಿನಿ -ವಿಷ್ಣುವರ್ಧನ್, ಮಾಧವಿ- ವಿಷ್ಣುವರ್ಧನ್ ಅತ್ಯುತ್ತಮ ಜೋಡಿಯಾಗಿದ್ದರು.
ಕ್ಲಾಸ್ ಮಾಸ್ ಹೀರೋ
ರಾಜ್ ಕುಮಾರ್ ಜಮಾನವಾಗಿದ್ದ ಕಾಲದಲ್ಲಿ ಸ್ಯಾಂಡಲ್ ವುಡ್ ಗೆ ವಿಷ್ಣು ಪದಾರ್ಪಣೆ ಆಯಿತು. ಆಗಿನ ಕಾಲದಲ್ಲಿ ಕೇವಲ ಕ್ಲಾಸ್ ಸಿನಿಮಾಗಳದ್ದೇ ದರ್ಬಾರಾಗಿತ್ತು. ಇದಕ್ಕೆ ಠಕ್ಕರ್ ಕೊಟ್ಟಿದ್ದೆ ವಿಷ್ಣುವಿನ ಮಾಸ್ ಕ್ಲಾಸ್ ಮಿಶ್ರಿತ ಚಿತ್ರಗಳು.
ನಿಮಗೆ ಗೊತ್ತೇ? ವಿಷ್ಣುವರ್ಧನ್ ಕೆಲವು ಸಿನಿಮಾಗಳಿಗೆ ಗಾಯಕರೂ ಆಗಿದ್ದರು. ಕಿಲಾಡಿ ಕಿಟ್ಟು, ನಾಗ ಕಾಳ ಭೈರವ, ಸಾಹಸ ಸಿಂಹ, ಜಿಮ್ಮಿಗಲ್ಲು, ಮೋಜುಗಾರ ಸೊಗಸುಗಾರ, ವಿಷ್ಣುಸೇನಾ ಸಿನಿಮಾಗಳಲ್ಲಿ ಹಾಡುವ ಮೂಲಕ ಗಾಯಕ ಆಗಿಯೂ ಸೈ ಎನ್ನಿಸಿಕೊಂಡಿದ್ದರು.
ಕಿರುತೆರೆಯಲ್ಲಿಯೂ ಛಾಪು!
ವಿಷ್ಣುವರ್ಧನ್ ಸಿನಿಮಾಗಳಲ್ಲಿ ಮಾತ್ರವಲ್ಲದೆ ಧಾರವಾಹಿಯಲ್ಲಿಯೂ ನಟಿಸಿದ್ದರು. ಶಂಕರನಾಗ್ ನಿರ್ದೇಶನದಲ್ಲಿ 1980ರಲ್ಲಿ ಪ್ರಸಾರ ಕಂಡ ಮಾಲ್ಗುಡಿ ಡೇಸ್ ನಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದರು.
ದಾದ ತಮ್ಮ 40 ದಶಕಗಳ ಬಣ್ಣದ ಬದುಕಿನಲ್ಲಿ ಬಂಧನ, ಯಜಮಾನ, ನೀನು ನಕ್ಕರೆ ಹಾಲು ಸಕ್ಕರೆ ಸಹಿತ 200ಕ್ಕೂ ಅಧಿಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ 4 ಬಾರಿ ಅತ್ಯುತ್ತಮ ನಟ, 2 ಬಾರಿ ದಕ್ಷಿಣ ಭಾರತದ ಫಿಲ್ಮ್ ಫೇರ್ ಪ್ರಶಸ್ತಿ, 4 ಬಾರಿ ಸಿನಿಮಾ ಎಕ್ಸ್ ಪ್ರೆಸ್ ಪ್ರಶಸ್ತಿ, ಸಹಿತ ಸಾಲು ಸಾಲು ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಜತೆಗೆ 1990ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಹಾಗೂ 1990ರಲ್ಲಿ ಡಾ. ರಾಜ್ ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಸಿನಿಮಾ ರಂಗದಲ್ಲಿ ನೀಡಿದ ಕೊಡುಗೆ ಪರಿಗಣಿಸಿ 2008ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ. 2008ರಲ್ಲಿ ಸಿಎನ್ಎನ್-ಐಬಿಎನ್ ನಾ ಅತ್ಯಂತ ಪ್ರಸಿದ್ಧ ನಟ ಪಟ್ಟಿಯಲ್ಲಿ ವಿಷ್ಣುವರ್ಧನ್ ಸ್ಥಾನ ಪಡೆದುಕೊಂಡಿದ್ದಾರೆ ಎಂಬುದು ವಿಶೇಷ.
ಇಂದು ವಿಷ್ಣು ದೈಹಿಕವಾಗಿ ನಮ್ಮೊಂದಿಗಿಲ್ಲ, ಆದರೆ ನಮ್ಮ ಹೃದಯದಲ್ಲಿ ವಿರಾಜಮಾನರಾಗಿದ್ದಾರೆ. ಸಿಂಹಕ್ಕೆ ಸಿಂಹವೇ ಸಾಟಿ ಅಲ್ಲವೇ?!