ಕಂಗನಾ ರಣಾವತ್​ ಕಪಾಳಕ್ಕೆ ಬಾರಿಸಿದ ಸಿಐಎಸ್​ಎಫ್​ ಮಹಿಳಾ ಕಾನ್​ಸ್ಟೇಬಲ್​ಗೆ ಚಿನ್ನದ ಉಂಗುರ ಗಿಫ್ಟ್​!

Kangana
Published on

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸತ್ ಪ್ರವೇಶಿಸಲು ಹೊರಟ ಬಾಲಿವುಡ್ ಫೈರ್ ಬ್ರಾಂಡ್ ಕಂಗನಾ ರಣಾವತ್​ಗೆ ಇತ್ತೀಚೆಗಷ್ಟೇ ಕಹಿ ಅನುಭವ ಎದುರಾಗಿದ್ದು ಗೊತ್ತೇ ಇದೆ. ಚಂಡೀಗಢ ವಿಮಾನ ನಿಲ್ದಾಣದಲ್ಲಿ ಮಹಿಳಾ ಉದ್ಯೋಗಿಯೊಬ್ಬರು ಕಂಗನಾ ಕೆನ್ನೆಗೆ ಬಾರಿಸಿದರು. ಇದು ದೇಶಾದ್ಯಂತ ಭಾರಿ ಸಂಚಲನ ಮೂಡಿಸಿತು. ಕೆಲವರು ಈ ಘಟನೆಯನ್ನು ಖಂಡಿಸಿದರೆ, ಇನ್ನು ಕೆಲವರು ಮಹಿಳಾ ಉದ್ಯೋಗಿಯನ್ನು ಬೆಂಬಲಿಸುತ್ತಿದ್ದಾರೆ. ಆಕೆ ಮಾಡಿದ್ದು ನೂರಕ್ಕೆ ನೂರು ಸರಿ ಎನ್ನುತ್ತಿದ್ದಾರೆ. ಕೆಲ ಸೆಲೆಬ್ರಿಟಿಗಳು ಮಹಿಳಾ ಉದ್ಯೋಗಿಗೆ ನೇರವಾಗಿ ಬೆಂಬಲ ನೀಡುತ್ತಿದ್ದಾರೆ. ಆಕೆಗೆ ಕೆಲಸ ಕೊಡಿಸುವ ಬೆಂಬಲ ಸಹ ಘೋಷಣೆ ಮಾಡಿದ್ದಾರೆ. ಇದೀಗ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ಕಳುಹಿಸಲಾಗುತ್ತಿದೆ.

ಬಾಲಿವುಡ್ ನಟಿ ಹಾಗೂ ಇತ್ತೀಚೆಗಷ್ಟೇ ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದೆ ಕಂಗನಾ ರಣಾವತ್, ದೆಹಲಿಗೆ ತೆರಳಲು ಚಂಡೀಗಢ ವಿಮಾನ ನಿಲ್ದಾಣಕ್ಕೆ ತೆರಳಿದಾಗ, ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಐಎಸ್​ಎಫ್​ ಮಹಿಳಾ ಕಾನ್​ಸ್ಟೇಬಲ್ ಕುಲ್ವಿಂದರ್ ಕೌರ್, ಕಂಗನಾ ಕೆನ್ನೆಗೆ ಬಾರಿಸಿದ್ದರು. ಈ ಘಟನೆ ಬಳಿಕ ಕುಲ್ವಿಂದರ್​ ಹೆಸರು ದೇಶಾದ್ಯಂತ ಜನಪ್ರಿಯವಾಗುತ್ತಿದೆ. ಸಂಸದರೊಬ್ಬರಿಗೆ ಹೊಡೆದಿದ್ದಕ್ಕಾಗಿ ಹರಿಯಾಣ ಸರ್ಕಾರ ಆಕೆಯನ್ನು ಕರ್ತವ್ಯದಿಂದ ಅಮಾನತುಗೊಳಿಸಿದೆ. ಆದರೆ, ಪಂಜಾಬ್ ರೈತರು ಕುಲ್ವಿಂದರ್ ಕೌರ್ ಬೆಂಬಲಕ್ಕೆ ನಿಂತಿದ್ದಾರೆ.

ಇದೀಗ ತಮಿಳುನಾಡಿನ ಪೆರಿಯಾರ್ ಅವರ ಅಭಿಮಾನಿಗಳ ಸಂಘವು ಕುಲ್ವಿಂದರ್​ ಕೌರ್​ಗೆ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ಕಳುಹಿಸಲು ನಿರ್ಧರಿಸಿದೆ. ಕೊಯಮತ್ತೂರಿನ ತಂತೈ ಪೆರಿಯಾರ್ ದ್ರಾವಿಡರ್ ಕಳಗಂ (TPDK) 8 ಗ್ರಾಂ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ಕಳುಹಿಸುವುದಾಗಿ ಘೋಷಿಸಿದ್ದು, ಈ ಸಂಗತಿ ಇದೀಗ ಭಾರಿ ಸಂಚಲನ ಮೂಡಿಸಿದೆ.

ಈ ಬಗ್ಗೆ ಟಿಪಿಡಿಕೆ ಪ್ರಧಾನ ಕಾರ್ಯದರ್ಶಿ ಕೋವೈ ರಾಮಕೃಷ್ಣನ್ ಮಾತನಾಡಿ, ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಅವಮಾನಿಸಿದ ಕಂಗನಾ ರಣಾವತ್‌ಗೆ ಹೊಡೆದ ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್​ ಅವರನ್ನು ನಾನು ಮೆಚ್ಚುತ್ತೇನೆ. ಈ ಸಂದರ್ಭದಲ್ಲಿ ನಾವು ಅವರಿಗೆ 8 ಗ್ರಾಂ ಚಿನ್ನದ ಉಂಗುರವನ್ನು ನೀಡಲು ನಿರ್ಧರಿಸಿದ್ದೇವೆ. ನಾವು ಪೆರಿಯಾರ್ ಅವರ ಮೂರ್ತಿಯೊಂದಿಗೆ ಉಂಗುರವನ್ನು ಕಳುಹಿಸುತ್ತೇವೆ. ನಮ್ಮ ಪ್ರತಿನಿಧಿಯು ಕುಲ್ವಿಂದರ್ ಅವರ ಮನೆಗೆ ರೈಲಿನಲ್ಲಿ ಅಥವಾ ವಿಮಾನದಲ್ಲಿ ಹೋಗಿ ಚಿನ್ನದ ಉಂಗುರದ ಜೊತೆಗೆ ಪೆರಿಯಾರ್ ಪುಸ್ತಕಗಳನ್ನು ಹಸ್ತಾಂತರಿಸುತ್ತಾನೆ ಎಂದರು.

ಕಂಗನಾಗೆ ಕಪಾಳಮೋಕ್ಷ ಮಾಡಿದ್ದನ್ನು ಸಮರ್ಥಿಸಿಕೊಂಡು ಕುಲ್ವಿಂದರ್ ಕೌರ್​, ತಾನು ಮಾಡಿದ್ದು ಒಳ್ಳೆಯ ಕೆಲಸ ಎಂದರು. ಮೂರು ವರ್ಷಗಳ ಹಿಂದೆ ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ಮಾಡುವಾಗ ಕಂಗನಾ ಅನುಚಿತ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಆ ಆಂದೋಲನದಲ್ಲಿ ನನ್ನ ತಾಯಿ ಕೂಡ ಭಾಗವಹಿಸಿದ್ದರು. ರೈತರ ಪ್ರತಿಭಟನೆಯನ್ನು ಅವಮಾನಿಸಿದ್ದಕ್ಕೆ ನಾನು ಕಂಗನಾಗೆ ಹೊಡೆದೆ ಎಂದು ಸಿಐಎಸ್​ಎಫ್​ ಮಹಿಳಾ ಕಾನ್‌ಸ್ಟೆಬಲ್ ಕೌರ್ ಸಮರ್ಥನೆ ನೀಡಿದರು.

ಕಪಾಳಮೋಕ್ಷ ಘಟನೆಯ ಬಳಿಕ ಅಧಿಕಾರಿಗಳು ಆಕೆಯನ್ನು ಅಮಾನತು ಮಾಡಿ, ಬಂಧಿಸಲಾಗಿದ್ದು, ಕುಲ್ವಿಂದರ್ ಕೌರ್​ಗೆ ಅನ್ಯಾಯ ಆಗಬಾರದು ಎಂದು ರೈತ ಸಂಘಗಳು ಆಗ್ರಹಿಸುತ್ತಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net