

ನವದೆಹಲಿ: ನಟಿ, ರಾಜಕಾರಣಿ ಜಯಾ ಬಚ್ಚನ್ ಹೆಸರಿನ ವಿವಾದ ಇತ್ತೀಚೆಗೆ ಸಂಸತ್ನಲ್ಲಿ ಪ್ರತಿಧ್ವನಿಸಿದ್ದು, ರಾಜ್ಯಸಭಾ ಅಧ್ಯಕ್ಷ ಹರಿವಂಶ ನಾರಾಯಣ ಸಿಂಗ್ ಅವರು ಸಂಸದೆ ಜಯಾ ಬಚ್ಚನ್ ಅವರನ್ನು 'ಜಯಾ ಅಮಿತಾಭ್ ಬಚ್ಚನ್' ಎಂದು ಸಂಬೋಧಿಸಿದ್ದರು. ಇದಕ್ಕೆ ಜಯಾ ಅತೃಪ್ತಿ ವ್ಯಕ್ತಪಡಿಸಿದ್ದರು. ಇದು ತಿಳಿದ ಸಂಗತಿಯೇ. ಆದರೆ ಈಗ ಲೋಕಸಭಾ ಸದಸ್ಯೆ ಹಾಗೂ ಚಿತ್ರನಟಿ ಕಂಗನಾ ರಾಣೌತ್ ಈ ವಿಚಾರವಾಗಿ ಪ್ರಮುಖ ಕಾಮೆಂಟ್ ಮಾಡಿದ್ದಾರೆ.
ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿರುವ ಕಂಗನಾ, ಸಂಸತ್ನಲ್ಲಿ ನಡೆದ ಚರ್ಚೆ ಬಹಳ ಚಿಕ್ಕ ವಿಚಾರ. ಆದರೆ ಜಯಾ ಬಚ್ಚನ್ ಅವರ ಪ್ರತಿಕ್ರಿಯೆ ಸರಿಯಿರಲಿಲ್ಲ ಎಂದು ಟೀಕಿಸಿದರು.
ಗಂಡಹೆಂಡತಿ ಅನ್ಯೋನ್ಯವಾಗಿದ್ದರೆ ಮಾತ್ರ ಜೀವನ ಸುಂದರವಾಗಿರುತ್ತದೆ. ಆದರೆ ಸ್ತ್ರೀವಾದದಂತಹವುಗಳಿಂದ ಸಂಸಾರ ಹಳಿತಪ್ಪಿ ಅಡ್ಡದಾರಿ ಹಿಡಿಯುತ್ತದೆ. ಇದು ಅತ್ಯಂತ ಕೆಟ್ಟ ವಿಷಯ. ಪ್ರಕೃತಿಯೇ ಪುರುಷರು ಮತ್ತು ಮಹಿಳೆಯರ ನಡುವೆ ಸುಂದರವಾದ ವ್ಯತ್ಯಾಸವನ್ನು ಸೃಷ್ಟಿಸಿದೆ. ಆದರೆ ಕೆಲವರು ಇದನ್ನು ತಾರತಮ್ಯ ಎಂದು ನೋಡುತ್ತಾರೆ. ಆದರೆ ನನ್ನ ದೃಷ್ಟಿಯಲ್ಲಿ ಗಂಡ ಮತ್ತು ಹೆಂಡತಿ ಒಟ್ಟಿಗೆ ಇದ್ದರೆ ಮಾತ್ರ ಜೀವನ ಸುಂದರವಾಗಿರುತ್ತದೆ ಎಂದು ಕಂಗನಾ ಹೇಳಿದ್ದಾರೆ.
ಜಯಾಬಚ್ಚನ್ ಗೆ ತನ್ನ ಪತಿ ಹೆಸರಿನ ಬಗ್ಗೆ ಇಂತಹ ದುರಹಂಕಾರದ ಧೋರಣೆ ಇದ್ದರೆ ಕುಟುಂಬದಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ತಮ್ಮ ಹೆಸರಿನ ಮುಂದೆ ಸಂಬಂಧಪಟ್ಟ ಮತ್ತೊಬ್ಬರ ಹೆಸರು ಸೇರಿಸಿದ ಮಾತ್ರಕ್ಕೆ ನಮ್ಮ ಗುರುತು ಕಳೆದುಹೋಗುತ್ತದೆ ಎಂದು ಚಿಂತಿಸುವ ಇಂತಹವರನ್ನು ನೋಡಿದರೆ ಬೇಸರವಾಗುತ್ತದೆ ಎಂದು ಟೀಕಿಸಿದ್ದಾರೆ.