

ಮುಂಬೈ: ಬಾಲಿವುಡ್ ಕ್ವೀನ್ ಕಂಗನಾ ರಣಾವತ್(Kangana Ranaut) ಮತ್ತು ಜಾವೇದ್ ಅಖ್ತರ್ ನಡುವಿನ ದೀರ್ಘಕಾಲದ ಕಾನೂನು ಹೋರಾಟ ಕೊನೆಗೂ ಅಂತ್ಯಗೊಂಡಿದೆ. ಇಬ್ಬರೂ ತಮ್ಮ ಕಾನೂನು ವಿಷಯವನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ. ಕಂಗನಾ ಅವರು ಅಖ್ತರ್ ಜತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಈ ವಿಷಯವನ್ನು ತಿಳಿಸಿದ್ದಾರೆ.
ಇವರಿಬ್ಬರೂ ಶುಕ್ರವಾರ(ಫೆಬ್ರವರಿ 28) ಮುಂಬೈನ ಬಾಂದ್ರಾದಲ್ಲಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರಾದರು ಮತ್ತು ಐದು ವರ್ಷಗಳ ತಮ್ಮ ವಿವಾದವನ್ನು ಬಗೆಹರಿಸಿಕೊಂಡರು. ಕಂಗಾನ ರಣಾವತ್ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಜಾವೇದ್ ಅಖ್ತರ್ ಜತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಇಬ್ಬರೂ ನ್ಯಾಯಾಲಯದಲ್ಲಿ ನಿಂತು ನಗುತ್ತಾ ಕ್ಯಾಮೆರಾಗೆ ಪೋಸ್ ನೀಡುತ್ತಿರುವುದು ಕಂಡುಬರುತ್ತದೆ.
ಪೋಸ್ಟ್ನಲ್ಲಿ, ಇಂದು ಜಾವೇದ್ ಜೀ ಮತ್ತು ನಾನು ನಮ್ಮ ಕಾನೂನು ವಿಷಯವನ್ನು (ಮಾನನಷ್ಟ ಪ್ರಕರಣ) ಪರಸ್ಪರ ಒಪ್ಪಿಗೆಯಿಂದ ಬಗೆಹರಿಸಿಕೊಂಡಿದ್ದೇವೆ ಎಂದು ಬರೆದಿದ್ದಾರೆ. ಜಾವೇದ್ ಜೀ ತುಂಬಾ ದಯಾಳು ಮತ್ತು ಸಭ್ಯರು. ಜಾವೇದ್ ಅಖ್ತರ್ ತಮ್ಮ ಮುಂದಿನ ಚಿತ್ರಕ್ಕೆ ಹಾಡುಗಳನ್ನು ಬರೆಯಲು ಒಪ್ಪಿಕೊಂಡಿದ್ದಾರೆ ಎಂದು ಬರೆದಿದ್ದಾರೆ.
ಜಾವೇದ್ ಅಖ್ತರ್ ಮತ್ತು ಕಂಗನಾ ರಣಾವತ್ ನಡುವಿನ ವಿವಾದ 2016ರಲ್ಲಿ ಪ್ರಾರಂಭವಾಯಿತು. ಆ ಸಮಯದಲ್ಲಿ ಕಂಗನಾ ರಣಾವತ್ ಮತ್ತು ಹೃತಿಕ್ ರೋಷನ್ ಅವರ ವಿವಾದ ನಡೆಯುತ್ತಿತ್ತು. ಅವರ ಇಮೇಲ್ಗಳು ಸುದ್ದಿಯಾಗುತ್ತಿದ್ದವು. ಜಾವೇದ್ ಅಖ್ತರ್ ಹೃತಿಕ್ ರೋಷನ್ ಕುಟುಂಬಕ್ಕೆ ಆಪ್ತರಾಗಿದ್ದರಿಂದ, ಅವರು ಕಂಗನಾ ಅವರನ್ನು ತಮ್ಮ ಮನೆಗೆ ಆಹ್ವಾನಿಸಿದರು. ಅವರು ಕಂಗನಾಗೆ ಹೃತಿಕ್ ಬಳಿ ಕ್ಷಮೆಯಾಚಿಸುವಂತೆ ಹೇಳಿದ್ದರು.
ಆ ಸಮಯದಲ್ಲಿ ಕಂಗನಾ ಈ ಬಗ್ಗೆ ಏನನ್ನೂ ಹೇಳಲಿಲ್ಲ. ಆದರೆ 2020ರಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ಮರಣದ ನಂತರ ಕಂಗನಾ ಅನೇಕ ಬಾಲಿವುಡ್ ಸೆಲೆಬ್ರಿಟಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ಅದೇ ಸಮಯದಲ್ಲಿ ಸಂದರ್ಶನವೊಂದರಲ್ಲಿ ಜಾವೇದ್ ಅಖ್ತರ್ ಅವರ ಈ ವಿಷಯವನ್ನು ನೆನೆಪಿಸಿಕೊಂಡು, ಜಾವೇದ್ ಅಖ್ತರ್ ತನ್ನನ್ನು ತನ್ನ ಮನೆಗೆ ಕರೆದು ಹೃತಿಕ್ಗೆ ಕಿರುಕುಳ ನೀಡಿದರೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದರು.
ಇದರಿಂದ ಕೋಪಗೊಂಡ ಜಾವೇದ್ ಅಖ್ತರ್ ಕಂಗನಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರು. ಇದಕ್ಕೆ ಪ್ರತೀಕಾರವಾಗಿ ಕಂಗನಾ ಜಾವೇದ್ ಅಖ್ತರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರು. ಇವರಿಬ್ಬರ ನಡುವಿನ ಕಾನೂನು ಹೋರಾಟವು 2020ರಲ್ಲಿ ಪ್ರಾರಂಭವಾಯಿತು. ನಂತರ ನ್ಯಾಯಾಲಯವು ಕಂಗನಾ ರಣಾವತ್ ಅವರ ಪ್ರಕರಣವನ್ನು ದುರ್ಬಲ ಎಂದು ಕರೆದು ವಜಾಗೊಳಿಸಿದರೂ, ಜಾವೇದ್ ಅಖ್ತರ್ ಸಲ್ಲಿಸಿದ ಮಾನನಷ್ಟ ಮೊಕದ್ದಮೆ ಮುಂದುವರೆಯಿತು. ಆದರೆ ಈಗ ಇಬ್ಬರೂ ರಾಜಿ ಮಾಡಿಕೊಂಡು ವಿವಾದವನ್ನು ಕೊನೆಗೊಳಿಸಿದ್ದಾರೆ.(ಏಜೆನ್ಸೀಸ್)