ತೋರ್ಪಡಿಕೆಗಾಗಿ ಅದಾಲತ್‌ಗೆ ಬರಬೇಡಿ, ಕಂದಾಯ ಅದಾಲತ್‌ನಲ್ಲಿ ಡಿಸಿ ಸತ್ಯಭಾಮ ತಾಕೀತು

27 mbl 1a
Published on

ಮುಳಬಾಗಿಲು: ಕಂದಾಯ ಇಲಾಖೆ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ. ಮಾಹಿತಿ ಕೊರತೆಯಿಂದ ಹಲವು ನಾಗರಿಕರು ಪ್ರತಿನಿತ್ಯ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಇದನ್ನು ತಪ್ಪಿಸಲು ಅದಾಲತ್ ಏರ್ಪಡಿಸಿದ್ದು, ಫಲಾನುಭವಿಗಳು ಲಿಖಿತವಾಗಿ ಸಮಸ್ಯೆ ಪ್ರಸ್ತಾಪಿಸಿ ಪರಿಹಾರ ಪಡೆಯಬಹುದು. ಇದಕ್ಕೆ ಮದ್ಯವರ್ತಿಗಳ ಅವಶ್ಯಕತೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹೇಳಿದರು.

ತಾಲೂಕು ಕಚೇರಿ ಆವರಣದಲ್ಲಿ ಶುಕ್ರವಾರ ಕಸಬಾ ಹೋಬಳಿಯ ಕಂದಾಯ ಅದಾಲತ್ ಉದ್ಘಾಟಿಸಿ ಮಾತನಾಡಿ, ಕೆಲವರು ವಿನಾಕಾರಣ ಬಿಲ್ಡಪ್ ಕೊಡಲು ಅದಾಲತ್‌ಗಳಲ್ಲಿ ಪಾಲ್ಗೊಳ್ಳುವ ಪರಿಪಾಠ ಇಟ್ಟುಕೊಂಡಿದ್ದಾರೆ. ಇಲ್ಲಿ ಅದರ ಅವಶ್ಯಕತೆಯಿಲ್ಲ. ನಾವು ಅದೂ ಇದು ಎಂದು ಹೇಳಿಕೊಳ್ಳುವವರು ತಾವಿರುವ ಕ್ಷೇತ್ರಗಳಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಿ ಎಂದು ತಾಕೀತು ಮಾಡಿದರು.

ಇದುವರೆಗೆ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಕಂದಾಯ ಮತ್ತು ಪಿಂಚಣಿ ಅದಾಲತ್‌ಗಳನ್ನು ಏರ್ಪಡಿಸಲಾಗಿತ್ತು. ಪೌತಿ ವಾರಸುದಾರರ ಕಾಯ್ದೆ ಆಂದೋಲನ ಸಹ ಈ ಯೋಜನೆಯಲ್ಲಿ ಪ್ರಮುಖವಾಗಿ ಪರಿಗಣಿಸಲಾಗಿದೆ. ಅರ್ಹ ರೈತರಿಗೆ ಸರ್ಕಾರದ ಸೌಲಭ್ಯಗಳು ಸಿಗಲು, ಪಹಣಿಗಳಲ್ಲಿ ಇರುವ ಸಣ್ಣ ಪುಟ್ಟ ಲೋಪದೋಷಗಳನ್ನು ತಿದ್ದುಪಡಿ ಮಾಡಿಸಿಕೊಡಲು ಅರ್ಜಿ ನೀಡಿದರೆ, ಅಗತ್ಯ ದಾಖಲೆಗಳನ್ನು ಇಲಾಖೆಯಿಂದಲೇ ಸಂಗ್ರಹಿಸಿ ಮನೆಬಾಗಿಲಿಗೆ ಸೇವೆ ಒದಗಿಸಲಾಗುವುದು ಎಂದರು.

ಪಿಂಚಣಿ ಸಮಸ್ಯೆಗೆ ಪರಿಹಾರ: ಬಹುತೇಕ ಪಿಂಚಣಿ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಲಿಂಕ್ ಸಮಸ್ಯೆಯಿಂದ ಪಿಂಚಣಿ ನಿಂತಿರುವುದನ್ನು ಸರಿಪಡಿಸಿ ಪಾವತಿ ಮಾಡಲಾಗುತ್ತಿದೆ. ಕೆಲವೊಂದು ದಾಖಲೆಗಳು ಇಲ್ಲದಿರುವುದರಿಂದ ಅರ್ಜಿಗಳನ್ನು ಸಲ್ಲಿಸಿದ್ದು, ಪರಿಶೀಲಿಸಲಾಗುತ್ತಿದೆ. ಪಿಂಚಣಿ ಬಗ್ಗೆ 76 ಅರ್ಜಿಗಳು ಸಲ್ಲಿಕೆಯಾಗಿವೆ. ಇದಕ್ಕೂ ಮುನ್ನ 236 ಅರ್ಜಿಗಳನ್ನು ಪರಿಶೀಲಿಸಿ ಪಿಂಚಣಿ ಸೌಲಭ್ಯ ನೀಡಲಾಗಿದೆ ಎಂದು ಡಿಸಿ ವಿವರಿಸಿದರು.

ಎಸಿ ವಿ.ಸೋಮಶೇಖರ್, ತಹಸೀಲ್ದಾರ್ ಕೆ.ಎನ್.ರಾಜಶೇಖರ್, ಪೌರಾಯುಕ್ತ ಜಿ.ಶ್ರೀನಿವಾಸಮೂರ್ತಿ, ಟಿಎಚ್‌ಒ ಡಾ.ಕೆ.ಎಂ.ವರ್ಣಶ್ರೀ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಅರವಿಂದ್, ಉಪನ್ಯಾಸಕ ಆಲಂಗೂರು ಮಂಜುನಾಥ್, ಆರ್‌ಐಗಳಾದ ಸಂಪತ್‌ಕುಮಾರ್, ಜಯರಾಮ್, ಸಿ.ಸುಬ್ರಮಣಿ, ಉಮೇಶ್ ಮತ್ತಿತರರು ಇದ್ದರು.

ವಕೀಲರಿಗೆ ಖಡಕ್ ಎಚ್ಚರಿಕೆ: ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಡಿಸಿ ಮಾತನಾಡುತ್ತಿರುವ ಸಂದರ್ಭದಲ್ಲಿ ಮುಖಂಡರೊಬ್ಬರು ಮಧ್ಯಪ್ರವೇಶಿಸಿ, ಸಾರ್ವಜನಿಕರ ಸಮಸ್ಯೆಗಳಿಗೆ ಮೊದಲು ಸ್ಪಂದಿಸಿ, ನಂತರ ಸುದ್ದಿಗೋಷ್ಠಿ ನಡೆಸಿ ಎಂದು ತಗಾದೆ ತೆಗೆದರು. ತಾವ್ಯಾರು ಎಂಬುದು ತಿಳಿದಿಲ್ಲ ಎಂದು ಡಿಸಿ ಹೇಳಿದಾಗ, ನಾನು ವಕೀಲ. ನನಗೂ ಕಾನೂನು ಗೊತ್ತಿದೆ ಎಂದು ಪ್ರತಿಕ್ರಿಯಿಸುತ್ತಿದ್ದಂತೆ ಸಿಟ್ಟಾದ ಡಿಸಿ, ನೀವು ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ. ಇಲ್ಲಿ ಕಟ್ಟಕಡೆಯ ವ್ಯಕ್ತಿಯಿಂದ ಅರ್ಜಿ ಸ್ವೀಕರಿಸಲು ನಾವಿದ್ದೇವೆ. ನೇರವಾಗಿ ಅವರಿಂದಲೇ ಅರ್ಜಿ ಸ್ವೀಕರಿಸಿ ಪರಿಹಾರ ಒದಗಿಸುತ್ತೇವೆ. ಇಲ್ಲಿ ನಿಮ್ಮ ಅವಶ್ಯಕತೆ ಇಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.

ಖಾತೆ, ಮುಟೇಷನ್ ಬದಲಾವಣೆಗೆ ಅರ್ಜಿ ಸಲ್ಲಿಸಿರುವವರು 30 ದಿನಗಳವರೆಗೆ ಕಾಯಬೇಕಾಗಿದೆ. ನಂತರ ಯಾರದ್ದೂ ಆಕ್ಷೇಪ ಇಲ್ಲದಿದ್ದರೆ ಖಾತೆಗಳನ್ನು ಮಾಡಿ ಮನೆಬಾಗಿಲಿಗೆ ತಲುಪಿಸಲಾಗುವುದು. ಭೂ ಮಂಜೂರಾತಿ ಮತ್ತು ಸಾಗುವಳಿ ಚೀಟಿ ಕಡತಗಳು ಲಭ್ಯವಿಲ್ಲದಿದ್ದರೆ ಎಸಿ ಅವರು ಪರಿಶೀಲಿಸಿ, ದಾಖಲೀಕರಣ ಮಾಡಿಕೊಂಡು ನಂತರ ಈ ಪ್ರಕರಣಗಳನ್ನು ಪರಿಹರಿಸುತ್ತಾರೆ. ಸಿ.ಸತ್ಯಭಾಮ, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net