ಕಾಲುಜಾರಿ ಸತ್ತಳೆಂದು ಕಥೆ ಕಟ್ಟಿದ ಅಪ್ಪ! ಪೋಸ್ಟ್‌ಮಾರ್ಟಮ್‌ನಿಂದ ರಹಸ್ಯ ಬಯಲು

murder
Published on

ಕಾಂಚೀಪುರಂ (ತಮಿಳುನಾಡು): ತಮಿಳುನಾಡಿನ ಕಾಂಚೀಪುರದಲ್ಲಿ ಇತ್ತೀಚೆಗೆ 20 ವರ್ಷದ ಆಸುಪಾಸಿನ ಯುವತಿ ಸೇಂಥರಕಿ ಎಂಬಾಕೆ ಮೃತಪಟ್ಟಿದ್ದು, ಅದರ ಬಗ್ಗೆ ಭಾರಿ ಚರ್ಚೆ ಶುರುವಾಗಿತ್ತು.

ಸ್ನಾನದ ಮನೆಯಲ್ಲಿ ಈಕೆಯ ಮೃತದೇಹ ಪತ್ತೆಯಾಗಿತ್ತು. ಸ್ನಾನ ಮಾಡುವ ಸಂದರ್ಭದಲ್ಲಿ ಮಗಳು ಕಾಲುಜಾರಿ ಬಿದ್ದಳೆಂದು ತಂದೆ ಬಾಲಾಜಿ ಪೊಲೀಸರಿಗೆ ಹೇಳಿದ್ದರು. ಮಗಳ ಶವದ ಎದುರು ಅವರು ರೋಧಿಸುತ್ತಿರುವುದು ಕಂಡು ಎಲ್ಲರೂ ಮಮ್ಮಲ ಮರುಗಿದ್ದರು ಕೂಡ.

ಇಷ್ಟು ಚಿಕ್ಕ ವಯಸ್ಸಿನ ಯುವತಿಗೆ ಇಂಥ ಸ್ಥಿತಿ ಬರಬಾರದಿತ್ತು. ಆ ತಂದೆಯ ಕಣ್ಣೀರು ನೋಡಲಾಗುವುದಿಲ್ಲ ಎಂದೆಲ್ಲಾ ಜನ ಆಡಿಕೊಳ್ಳುತ್ತಿದ್ದರು. ತಂದೆ ಹೇಳಿದಂತೆ ಆಕೆ ಕಾಲುಜಾರಿ ಬಿದ್ದಿರಬಹುದು ಎಂದೇ ಎಲ್ಲರೂ ಊಹಿಸಿದ್ದರು. ಪೊಲೀಸರು ಕೂಡ ಈ ಬಗ್ಗೆ ವಿವರಣೆ ಪಡೆದುಕೊಂಡು, ಇದನ್ನೇ ನಂಬಿಕೊಂಡು ಹೋಗಿದ್ದರು.

ಆದರೆ ಇಂದು ಈ ಯುವತಿಯ ಪೋಸ್ಟ್‌ಮಾರ್ಟಮ್‌ ರಿಪೋರ್ಟ್‌ ಬಂದಿದೆ. ಇದನ್ನು ನೋಡಿದ ಎಲ್ಲರೂ ಬೆರಗಾಗಿ ಹೋಗಿದ್ದಾರೆ. ಏಕೆಂದರೆ ಇದು ಬಾತ್‌ರೂಮ್‌ನಲ್ಲಿ ಬಿದ್ದು ಆಗಿರುವ ಸಹಜ ಸಾವಲ್ಲ, ಬದಲಿಗೆ ಇದೊಂದು ಅಸಹಜ ಸಾವು ಅಂದರೆ ಯಾರೋ ಉಸಿರುಗಟ್ಟಿಸಿ ಸಾಯಿಸಿರುವುದು ಎಂದು ತಿಳಿದುಬಂದಿದೆ.

ಈ ವರದಿ ಪೊಲೀಸರ ಕೈಸೇರುತ್ತಲೇ ಬಾಲಾಜಿ ಮನೆಗೆ ದೌಡಾಯಿಸಿದ್ದಾರೆ. ಇಲ್ಲಿಯವರೆಗೆ ತಾವು ಹೆಣೆದ ಕಥೆಯನ್ನು ಎಲ್ಲರೂ ನಂಬಿದ್ದರಿಂದ ನೆಮ್ಮದಿಯಿಂದ ಇದ್ದ ಬಾಲಾಜಿ, ಪೊಲೀಸರನ್ನು ನೋಡಿ ಹೌಹಾರಿದ್ದಾರೆ.

ಅವರ ನಡವಳಿಕೆಯನ್ನು ಕಂಡು ಅನುಮಾನಗೊಂಡ ಪೊಲೀಸರು ಅವರನ್ನು ಠಾಣೆಗೆ ಕರೆದುಕೊಂಡು ಹೋಗಿ ಮರಣೋತ್ತರ ಪರೀಕ್ಷೆಯ ವರದಿಯನ್ನು ಎದುರಿಗಿಟ್ಟಿದ್ದಾರೆ. ಮೊದಮೊದಲ ಸತ್ಯ ಒಪ್ಪಿಕೊಳ್ಳದ ಈ ಅಪ್ಪನನ್ನು ಪೊಲೀಸರು ತಮ್ಮದೇ ಶೈಲಿಯಲ್ಲಿ ಬಾಯಿ ಬಿಡಿಸಿದಾಗ ಸತ್ಯ ಒಪ್ಪಿಕೊಂಡಿದ್ದಾರೆ.

ಅದೇನೆಂದರೆ, ಯುವತಿ ಅದೇ ಏರಿಯಾದ ಬೇರೊಂದು ಜಾತಿಯ ಯುವಕನ ಜತೆ ಸ್ನೇಹ ಬೆಳೆಸಿಕೊಂಡಿದ್ದಳು. ಅವನ ಜತೆ ಸುತ್ತಾಡುವುದಾಗ ತಂದೆ ನೋಡಿದ್ದಾರೆ. ಅವನ ಸಹವಾಸ ಮಾಡಬೇಡ ಎಂದು ಮಗಳಿಗೆ ಬುದ್ಧಿಮಾತು ಹೇಳಿದ್ದಾರೆ. ಆದರೆ ಆಕೆ ಒಪ್ಪಲಿಲ್ಲ, ತಾನು ಆ ಯುವಕನನ್ನೇ ಮದುವೆಯಾಗುವುದು, ಇಲ್ಲದಿದ್ದರೆ ನಾನು ಮದುವೆಯೇ ಆಗುವುದಿಲ್ಲ ಎಂದು ಹಠ ಹಿಡಿದಿದ್ದಾಳೆ. ಆದರೆ ತಂದೆ ಬೇರೊಬ್ಬ ಹುಡುಗನನ್ನು ನೋಡಿ ಮದುವೆಯಾಗುವಂತೆ ಒತ್ತಾಯ ಮಾಡಿದ್ದಾರೆ. ಇದೇ ಸಂಬಂಧವಾಗಿ ಅಪ್ಪ-ಮಗಳ ನಡುವೆ ವಾಗ್ವಿವಾದ ನಡೆದಿದೆ.

ಕೋಪಗೊಂಡ ಅಪ್ಪ, ಆತನನ್ನು ಮದುವೆಯಾಗುವ ಬದಲು ಮಗಳು ಸಾಯುವುದೇ ಮೇಲೆಂದು ತಿಳಿದು ಕತ್ತುಹಿಸುಕಿ ಸಾಯಿಸಿದ್ದಾರೆ. ನಂತರ ಮಗಳ ದೇಹವನ್ನು ಬಾತ್‌ರೂಮಿನಲ್ಲಿ ಇಟ್ಟು, ಸ್ನಾನ ಮಾಡುವಾಗ ಕಾಲುಜಾರಿ ಬಿದ್ದಳೆಂದು ಕಥೆ ಹೆಣೆದಿದ್ದಾರೆ!

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಲಾಜಿಯನ್ನು ಬಂಧಿಸಿ, ಕೇಸು ದಾಖಲು ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net