

ಬೆಂಗಳೂರು ಸಿಬ್ಬಂದಿ ನೇಮಕಾತಿ ಮತ್ತು ಸಮರ್ಪಕ ಮೂಲ ಸೌಕರ್ಯವನ್ನು ಇನ್ನೂ ಕಲ್ಪಿಸದಿರುವ ಕಾರಣ ರಾಮನಗರ ಮತ್ತು ಕನಕಪುರ ವೈದ್ಯಕೀಯ ಕಾಲೇಜುಗಳನ್ನು ರಾಷ್ಟ್ರೀಯ ವೈದ್ಯಕೀಯ ಪರಿಷತ್ತು (ಎನ್‌ಎಂಸಿ) ಕೊನೇ ಹಂತದಲ್ಲಿ ಅನುಮತಿ ನೀಡಲು ನಿರಾಕರಿಸಿದೆ.
ಇತ್ತೀಚೆಗೆ ಎನ್‌ಎಂಸಿ ತಂಡವು ಪರಿಶೀಲನೆ ನಡೆಸಿದ್ದು, ಮೂಲಸೌಕರ್ಯ ಮತ್ತು ಸಿಬ್ಬಂದಿ ನೇಮಕಾತಿ ಕೆಲಸಗಳು ಪೂರ್ಣಗೊಳ್ಳದ ಕಾರಣ ನೀಡಿ ಅರ್ಜಿಗಳನ್ನು ತಿರಸ್ಕರಿಸಿದೆ ಎಂದು ತಿಳಿದು ಬಂದಿದೆ.
ಈ ಮೂಲಕ ರಾಮನಗರ ಮತ್ತು ಕನಕಪುರದಲ್ಲಿ ರಾಜಕೀಯ ಘಟಾನುಘಟಿಗಳಾದ ಎಚ್.ಡಿ. ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್ ಅವರಿಗೆ ನಿರಾಸೆ ಮೂಡಿಸಿದೆ. ವೈದ್ಯಕೀಯ ಕಾಲೇಜುಗಳ ವಿಚಾರವಾಗಿ ನಡೆಯುತ್ತಿದ್ದ ವಾಗ್ಯುದ್ದ ಮುಂದುವರಿಯುವ ಸಾಧ್ಯತೆಗಳಿವೆ.
ರಾಜ್ಯದಿಂದ 2024-25ನೇ ಸಾಲಿಗೆ ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಈ ಎರಡೂ ಕಾಲೇಜುಗಳಿಗೆ ಅರ್ಜಿ ಸಲ್ಲಿಸಲಾಗಿತ್ತು. ಸರ್ಕಾರ ಸಲ್ಲಿಸಿದ್ದ ಎರಡೂ ಅರ್ಜಿಗಳನ್ನು ಎನ್‌ಎಂಸಿ ತಿರಸ್ಕರಿಸಿದೆ. ಉಳಿದ 3 ಖಾಸಗಿ ಕಾಲೇಜುಗಳಿಗೆ ಅನುಮತಿ ನೀಡಿದೆ.