ನ.11ರಿಂದ ಶ್ರೀ ಬೀರಪ್ಪ ದೇವರ ಭಂಡಾರ ಜಾತ್ರೆ

c.h.Maltesh
Published on

ಶಿವಮೊಗ್ಗ: ಕನಕನಗರದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಬೀರಪ್ಪ ದೇವರ ಭಂಡಾರ ಜಾತ್ರಾ ಮಹೋತ್ಸವ ನ.11ರಿಂದ 14ರವರೆಗೆ ಅದ್ದೂರಿಯಿಂದ ನಡೆಯಲಿದೆ ಎಂದು ದೇವಸ್ಥಾನದ ಸೇವಾ ಸಮಿತಿ ಕಾರ್ಯದರ್ಶಿ ಸಿ.ಎಚ್.ಮಾಲತೇಶ್ ತಿಳಿಸಿದರು.

ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮತ್ತು ಶಿವಮೊಗ್ಗ ಜಡೇದೇವರ ಮಠದ ಶ್ರೀ ಸ್ವಾಮಿ ಅಮೋಘಸಿದ್ದೇಶ್ವರಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಭಂಡಾರ ಜಾತ್ರೆ ನೆರವೇರಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನ.11ರ ಬೆಳಗ್ಗೆ 9ಕ್ಕೆ ಕನಕ ಜಯಂತಿ ಮತ್ತು ಭಂಡಾರ ಬೀಸುವುದು, 12ರ ಬೆಳಗ್ಗೆ 6ರಿಂದ 8ರವರೆಗೆ ಶ್ರೀ ಬೀರಲಿಂಗೇಶ್ವರ ಸ್ವಾಮಿಯ ಕಲ್ಯಾಣಿ ಸ್ಪರ್ಶ ಹಾಗೂ ರುದ್ರಾಭಿಷೇಕ, ಬೆಳಗ್ಗೆ 9ಕ್ಕೆ ಶ್ರೀ ಈಶ್ವರಾನಂದಪುರಿ ಸ್ವಾಮೀಜಿಗೆ ವಿನೋಬನಗರ ಶಿವಾಲಯದಿಂದ ಪೂರ್ಣ ಕುಂಭ ಸ್ವಾಗತದೊಂದಿಗೆ ಮೆರವಣಿಗೆ ಮಾಡಲಾಗುತ್ತದೆ. ಬೆಳಗ್ಗೆ 10ಕ್ಕೆ ಶ್ರೀಗಳಿಂದ ಜೋಗತಿ ಅವರಿಗೆ ಮಡ್ಲಕ್ಕಿ (ಉಡಿ ತುಂಬುವ) ಕಾರ್ಯಕ್ರಮ, ಸಂಜೆ 6ಕ್ಕೆ ಗೊರವಯ್ಯನಿಂದ ದೋಣಿ ಸೇವೆ, ಚೌಡಿಕೆ ಮತ್ತು ಭಜನಾ ಮಂಡಳಿಯಿಂದ ಭಜನೆ ಇರಲಿದೆ ಎಂದರು.

13ರ ಬೆಳಗ್ಗೆ 11ಕ್ಕೆ ಶಿವಾಲಯದಿಂದ ಮೆರವಣಿಗೆ ಮೂಲಕ ಬುತ್ತಿ ಪೂಜಾ ಕಾರ್ಯಕ್ರಮ ಹಾಗೂ ಶ್ರೀ ಬೀರಪ್ಪನ ಸಾನ್ನಿಧ್ಯದಲ್ಲಿ ಭಕ್ತಾದಿಗಳಿಂದ ಭಂಡಾರದ ಒಡೆಯನಿಗೆ ಭಂಡಾರದಾರ್ಚನೆ ನಡೆಯಲಿದೆ. ಸಂಜೆ 7ಕ್ಕೆ ವಿದ್ವಾನ್ ದತ್ತಮೂರ್ತಿ ಭಟ್ ನೇತೃತ್ವದ ಸಂಘಟನೆ ನಾಟ್ಯಶ್ರೀ ಕಲಾತಂಡದಿಂದ ಶ್ರೀ ಬೀರಲಿಂಗೇಶ್ವರ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ರಾತ್ರಿ 9ಕ್ಕೆ ದೇವಾಲಯದ ಸುತ್ತ ಬಲಿ ಸಮರ್ಪಣೆ ನಡೆಯಲಿದೆ ಎಂದು ಹೇಳಿದರು.

ನ.14ರ ಬೆಳಗ್ಗೆ 6ರಿಂದ ಪರಿವಾರ ದೇವತೆಗಳಿಗೆ ಪಂಚಾಮೃತಾಭಿಷೇಕ ಮತ್ತು ವಿಶೇಷ ಅಲಂಕಾರಗಳು ನಡೆಯಲಿವೆ. ಬೆಳಗ್ಗೆ 8ರಿಂದ ಗಣ ಹೋಮದಿಂದ ಪ್ರಾರಂಭಗೊಂಡು ಜಯಾದಿಹೋಮಗಳಿಂದ ಪೂರ್ಣಾಹುತಿ ನೆರವೇರಲಿದೆ. ಅದೇ ದಿನ ಮಧ್ಯಾಹ್ನ 3.30ಕ್ಕೆ ರಾಜಬೀದಿ ಉತ್ಸವವಿದ್ದು ಸಂಗೊಳ್ಳಿ ರಾಯಣ್ಣ ರಸ್ತೆ, ಲಕ್ಷ್ಮೀ ಟಾಕೀಸ್ ರಸ್ತೆ ಮಾರ್ಗವಾಗಿ ಶ್ರೀ ಬೀರಲಿಂಗೇಶ್ವರ ಸ್ವಾಮಿಯ ಅದ್ದೂರಿ ಮೆರವಣಿಗೆ ದೇವಸ್ಥಾನ ತಲುಪಲಿದೆ ಎಂದು ವಿವರಿಸಿದರು. ಮುಖಂಡರಾದ ನವುಲೆ ಈಶ್ವರಪ್ಪ, ಎಚ್.ಪಾಲಾಕ್ಷಿ, ಕೆ.ರಂಗನಾಥ, ಬಿ.ಟಿ.ರಾಜು, ಮೋಹನ್, ಮಧು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net