

ಕಂಪ್ಲಿ: ಕಂಪ್ಲಿ ಭಾಗದಲ್ಲಿ ಸಮಾನಾಂತರ ಜಲಾಶಯ ನಿರ್ಮಾಣ ಸಂಬಂಧ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ವಿಧಾನ ಪರಿಷತ್ ಸದಸ್ಯ ವೈ.ಎಂ. ಸತೀಶ್ ಹೇಳಿದರು.
ಇಲ್ಲಿನ ಮಾರುತಿ ನಗರದಲ್ಲಿ ವಿಜಯ ಸಂಕಲ್ಪ ಅಭಿಯಾನದಡಿ ಹಮ್ಮಿಕೊಂಡಿದ್ದ ಬಿಜೆಪಿ ಚಿನ್ಹೆಯ ಗೋಡೆಬರಹ, ಸ್ಟಿಕ್ಕರ್ ಅಳವಡಿಕೆ, ಕರಪತ್ರ ಹಂಚಿಕೆ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ರೈತರ ಅನುಕೂಲಕ್ಕಾಗಿ ಮೆಟ್ರಿ ಬಳಿ ಕಿರು ಸಮಾನಾಂತರ ಜಲಾಶಯ ನಿರ್ಮಿಸುವ ಯೋಜನೆಯಿದೆ. ಕೃಷಿ ಭೂಮಿಗೆ ನೀರೊದಗಿಸಲು, ಜನ-ಜಾನುವಾರುಗಳಿಗೆ ಕುಡಿವ ನೀರು, ಅಂತರ್ಜಲ ಮಟ್ಟ ಹೆಚ್ಚಳಕ್ಕಾಗಿ ಕೆರೆಗಳನ್ನು ತುಂಬಿಸುವ ಆಶಯವಿದೆ. ಸಿಎಂ ಗಮನಸೆಳೆದು ಎಲ್ಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದರು.
ಬಿಜೆಪಿ ಕ್ಷೇತ್ರ ಅಧ್ಯಕ್ಷ ಅಳ್ಳಳ್ಳಿ ವೀರೇಶ್ ಮಾತನಾಡಿ, ಚುನಾವಣೆ ಸಿದ್ಧತೆ ಭರದಿಂದ ಸಾಗಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಂಪ್ಲಿ ಕ್ಷೇತ್ರ ಬಿಜೆಪಿ ಪಾಲಾಗಲಿದೆ ಎಂದರು.
ಬಳ್ಳಾರಿ ಎಪಿಎಂಸಿ ಅಧ್ಯಕ್ಷ ಬಸಲಿಂಗನಗೌಡ, ಬಿಜೆಪಿ ಪ್ರಮುಖರಾದ ಪಿ.ಬ್ರಹ್ಮಯ್ಯ, ಜಿ.ಸುಧಾಕರ, ಎನ್.ರಾಮಾಂಜನೇಯಲು, ಬಿ.ಸಿದ್ದಪ್ಪ, ಎನ್.ಪುರುಷೋತ್ತಮ, ಕೊಡಿದಲರಾಜು, ಕೆ.ಹೊನ್ನೂರಸಾಬ್, ಟಿ.ವಿ.ಸುದರ್ಶನರೆಡ್ಡಿ, ಹೂಗಾರ ರಮೇಶ್, ಡಾ.ವೆಂಕಟೇಶ್ ಭರಮಕ್ಕನವರ್, ಎನ್.ಚಂದ್ರಕಾಂತರೆಡ್ಡಿ, ಕೃಷ್ಣರಾಜು, ಉಪ್ಪಾರ ಲಕ್ಷ್ಮೀದೇವಿ, ಪಾರ್ವತಿ, ನಂ.10 ಮುದ್ದಾಪುರದ ಬಿ.ಎಸ್. ಶಿವಮೂರ್ತಿ, ಬಿ.ಎಸ್.ವೆಂಕಟಸ್ವಾಮಿ ಇತರರಿದ್ದರು.