

ನವದೆಹಲಿ: ಚುನಾವಣೆ ಎಂದಮೇಲೆ ವಾಗ್ದಾಳಿ, ಟೀಕೆ-ಪ್ರತಿಟೀಕೆ, ಆರೋಪ-ಪ್ರತ್ಯಾರೋಪಗಳು ಸಾಮಾನ್ಯ. ಆದರೆ ಇಂಥದ್ದರ ಮಧ್ಯೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ನಾಥ್ ಅವರ ಸ್ಟಾರ್ ಕ್ಯಾಂಪೇನರ್ ಪಟ್ಟ 'ಮಾಫಿಯಾ'ಗೆ ಬಲಿಯಾಗಿದೆ.
ಹಾಗಂತ ಅದು ಯಾವ ಮಾಫಿಯಾ ಎಂದು ಅಚ್ಚರಿ ಆಗುವುದು ಸಹಜ. ಈಗ ಎಲ್ಲೆಡೆ ಡ್ರಗ್ಸ್ ಮಾಫಿಯಾ ಸುದ್ದಿಯಲ್ಲಿರುವುದರಿಂದ ಡ್ರಗ್ಸ್ ಮಾಫಿಯಾದಲ್ಲಿ ಅವರ ಹೆಸರೇನಾದರೂ ಕೇಳಿ ಬಂತಾ? ಎಂಬ ಪ್ರಶ್ನೆಯೊಂದು ಮೂಡಿಹೋದರೂ ಅಚ್ಚರಿಯೇನಲ್ಲ. ಆದರೆ ಅವರ ಸ್ಟಾರ್ಗಿರಿಯನ್ನು ಕಿತ್ತುಕೊಂಡ ಈ ಮಾಫಿಯಾನೇ ಬೇರೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಅವರ ವಿರುದ್ಧ ಕಮಲ್ನಾಥ್ ಮಾಫಿಯಾ ಎಂಬ ಪದ ಬಳಸಿದ್ದಕ್ಕೆ ಅವರ ಸ್ಟಾರ್ ಪ್ರಚಾರಕ ಪಟ್ಟ ತಪ್ಪಿಹೋಗಿದೆ. ಚೌಹಾಣ್ ವಿರುದ್ಧ ಮಾಫಿಯಾ ಎಂಬ ಪದ ಬಳಸಿದ್ದಕ್ಕಾಗಿ ಭಾರತೀಯ ಚುನಾವಣಾ ಆಯೋಗ ಮಧ್ಯಪ್ರದೇಶದ ಉಪ ಚುನಾವಣಾ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸ್ಟಾರ್ ಪ್ರಚಾರಕ್ ಪಟ್ಟಿಯಲ್ಲಿದ್ದ ಕಮಲ್ನಾಥ್ ಹೆಸರನ್ನು ರದ್ದು ಪಡಿಸಿದೆ.
'ಕಲಬೆರಕೆ ಮಾಫಿಯಾನೇ ನಿಮ್ಮ ದೇವರು, ಅದರ ಮೂಲಕ ನೀವು ಮಧ್ಯಪ್ರದೇಶ ಗುರುತಿಸಿಕೊಳ್ಳುವಂತೆ ಮಾಡಿದ್ದೀರಿ' ಎಂದು ಅ.13ರಂದು ಚೌಹಾಣ್ ವಿರುದ್ಧ ಕಮಲ್ನಾಥ್ ಕಮೆಂಟ್ ಮಾಡಿದ್ದರು. ಈ ಹಿಂದೆ ಬಿಜೆಪಿ ನಾಯಕಿ ಇಮರ್ತಿ ದೇವಿ ಅವರನ್ನು ಐಟಂ ಎಂದು ಕಮಲ್ನಾಥ್ ಕರೆದಿದ್ದು ವಿವಾದವಾಗಿತ್ತು. ಮಧ್ಯಪ್ರದೇಶದಲ್ಲಿನ 25 ಶಾಸಕರ ರಾಜೀನಾಮೆ ಹಾಗೂ ಮೂವರ ಮರಣದಿಂದಾಗಿ 28 ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ. (ಏಜೆನ್ಸೀಸ್)