ಕೊಲ್ಲಿಯಲ್ಲಿ ಇರಾನ್ ಮತ್ತು ಇಸ್ರೇಲ್ & ಅಮೆರಿಕಾ ಯುದ್ಧ, ವರ್ಷಗಳೇ ಕಳೆದರೂ ಮುಗಿಯದ ರಷಿಯಾ ಮತ್ತು ಯೂಕ್ರೇನ್ ಕದನ ಸೇರಿ ಅಂತಾರಾಷ್ಟ್ರೀಯ ಮಟ್ಟದ ಹಲವು ಬೆಳವಣಿಗೆಗಳಿಂದಾಗಿ ಭಾರತಕ್ಕೂ ಹಲವು ಸವಾಲುಗಳು ಎದುರಾಗಿವೆ. ಹೀಗಾಗಿ ಚಿನ್ನದ ಆಭರಣ ಖರೀದಿಸದಂತೆ, ಹೊರದೇಶಗಳಿಗೆ ಪ್ರವಾಸಕ್ಕೆ ಹೋಗದಂತೆ, ಪೆಟ್ರೋಲ್ & ಡೀಸಲ್ ಸೇರಿ ಇತರೆ ಇಂಧನವನ್ನು ಮಿತವಾಗಿ ಬಳಸುವಂತೆ ಇತ್ತೀಚೆಗಷ್ಟೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಅದರ ಬೆನ್ನಲ್ಲೇ ಹಿರಿಯ ನಟ ಕಮಲ್ ಹಾಸನ್ ಕೂಡ ಸಿನಿಮಾ ಖರ್ಚು ಕಡಿಮೆ ಮಾಡುವಂತೆ ತಮಿಳು ನಾಡು ಚಿತ್ರರಂಗದ ಬಳಿ ಮನವಿ ಮಾಡಿಕೊಂಡಿದ್ದಾರೆ. "ಪಶ್ಚಿಮ ಏಷಿಯಾದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ಇಡೀ ವಿಶ್ವ ಆರ್ಥಿಕ ಅಸಮತೋಲನ ಎದುರಾಗಿದೆ. ಇದರಿಂದ ಉಂಟಾಗಿರುವ ಬೆಲೆಯೇರಿಕೆಯ ಪರಿಣಾಮವನ್ನು ಭಾರತವೂ ಎದುರಿಸುವಂತಾಗಿದೆ. ಸಿನಿಮಾ ನಿರ್ಮಾಣ ವೆಚ್ಚ ಏರುತ್ತಿರುವ ಸಮಯದಲ್ಲಿ ಈ ಬೆಳವಣಿಗೆಗಳು ಭಾರತೀಯ ಚಿತ್ರರಂಗದ ಮೇಲೂ ಪರಿಣಾಮ ಬೀರಲಿವೆ. ಬೆಲೆ ಏರಿಕೆ ಸಿನಿಮಾ ನಿರ್ಮಾಪಕರ ಮೇಲೆ ಮಾತ್ರವಲ್ಲ ಹಣ ಕೊಟ್ಟು ಸಿನಿಮಾ ನೋಡಲು ಬರುವ ಪ್ರೇಕ್ಷಕ ವರ್ಗದ ಮೇಲೂ ಒತ್ತಡ ಹೇರಲಿದೆ. ಹೀಗಾಗಿ ಸಿನಿಮಾ ಕಾರ್ಮಿಕರಿಗೆ ತೊಂದರೆ ಆಗದಂತೆ, ಖರ್ಚು ಕಡಿಮೆ ಮಾಡಬೇಕಿದೆ. ವ್ಯವಸ್ಥಿತ ಪ್ಲಾ$್ಯನಿಂಗ್, ರಿಲೀಸ್ ತಡ ಮಾಡುವ ಮೂಲಕ ಸುಖಾ ಸುಮ್ಮನೇ ಖರ್ಚು ಮಾಡದೇ ಸಿನಿಮಾ ನಿರ್ಮಾಣ ವೆಚ್ಚ ಕಡಿಮೆ ಮಾಡಬೇಕಿದೆ. ಪ್ರೀತಿ ಪ್ಯಾರಿಸ್ನಲ್ಲೇ ಚಿಗುರಬೇಕಿಲ್ಲ. ಹನಿಮೂನ್ ಸ್ವಿರ್ಜಲೆಂಡಿನಲ್ಲೇ ಆಗಬೇಕಿಲ್ಲ. ಹೀಗಾಗಿ ಅನವಶ್ಯಕ ಹೊರದೇಶ ಪ್ರಯಾಣಕ್ಕೆ ಬ್ರೇಕ್ ಹಾಕಬೇಕಿದೆ. ಈ ಆರ್ಥಿಕ ಸಮಸ್ಯೆಯನ್ನು ಎದುರಿಸಲು ಎಲ್ಲರೂ ಒಂದಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಿದೆ' ಎಂದು ಭಾರತದ ಎಲ್ಲ ಚಿತ್ರರಂಗಗಳ ಸದಸ್ಯರಿಗೆ ಓಪನ್ ಲೆಟರ್ ಬರೆದಿದ್ದಾರೆ. ಹಾಗೇ, "ಜಾಗತಿಕ ಅನಿಶ್ಚಿತತೆ ಎದುರಾಗಿರುವ ಈ ಸಮಯದಲ್ಲಿ ಎಲ್ಲ ಕ್ಷೇತ್ರಗಳೂ ಒಂದಾಗಿ ದೇಶದ ಜತೆ ನಿಲ್ಲಬೇಕಿದೆ. ಜವಾಬ್ದಾರಿಯುತವಾಗಿ, ಆರ್ಥಿಕ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕಿದೆ. ಇದು ವೈಯಕ್ತಿಕ ಕಾಳಜಿಗಿಂತ, ದೇಶದ ಕಾಳಜಿ ಬಗ್ಗೆ ಯೋಚಿಸುವ ಸಮಯ. ಸಿನಿಮಾ ಕೇವಲ ಮನರಂಜನೆ ಮಾತ್ರವಲ್ಲ, ಜವಾಬ್ದಾರಿ ಕೂಡ. ಚಿತ್ರರಂಗದಿಂದ ಅತಿ ಹೆಚ್ಚು ಗಳಿಸಿರುವವರು ಈ ನಿಟ್ಟಿನಲ್ಲಿ ಎಲ್ಲರಿಗೂ ಮಾದರಿಯಾಗಬೇಕು. ಇವತ್ತು ಸಿನಿಮಾ ಆರ್ಥಿಕತೆಯನ್ನು ಉಳಿಸಿದರೆ, ಸಿನಿಮಾದ ಭವಿಷ್ಯವನ್ನು ರೂಪಿಸಿದಂತೆ' ಎಂದು ಕಮಲ್ ಕರೆ ನೀಡಿದ್ದಾರೆ.