

ಮಹಾರಾಷ್ಟ್ರವನ್ನು ಸ್ವಾಭಿಮಾನದಿಂದ ಮುನ್ನಡೆಸಿದ ಕೀರ್ತಿ ಇಂದಿಗೂ ಶಿವಾಜಿಮಹಾರಾಜನ ಹೆಸರಿನಲ್ಲಿದೆ. ದೇಶದ ವಾಣಿಜ್ಯರಾಜಧಾನಿ ಎಂದೇ ಪ್ರಸಿದ್ಧಿ ಪಡೆದಿದೆ ಮುಂಬೈ. ಅಂದು ಶಿವಾಜಿಯು ಬಾಲ್ಯಾವಸ್ಥೆಯಲ್ಲಿದ್ದಾಗ ಆತನಿಗೆ ಉತ್ತಮ ಮಾರ್ಗದರ್ಶನ ನೀಡಿ ಗುರಿಯೆಡೆಗೆ ಮುಖಮಾಡಿಸಿದವರು ಶ್ರೀಗುರುರಾಘವೇಂದ್ರರು ಎಂಬುದನ್ನು ಇತಿಹಾಸದ ಪುಟಗಳು ದಾಖಲಿಸಿವೆ. ಇದರಿಂದ ಮರಾಠದೇಶವು ಅಂದು ಸಮೃದ್ಧಿ ಹಾಗು ಧಾರ್ವಿುಕತೆಯಿಂದ ಸುದೃಢವಾಯಿತು. ಉದ್ಯಮವೇ ಮೂಲಭೂತಗುರಿಯೆಂದು ಭಾವಿಸಿದ್ದ ಈ ಮಹಾನಗರಿಗೆ ಧರ್ಮದ ತಂತಿಯೊಂದಿಗೆ ಪುನರ್ಬೆಸುಗೆಯನ್ನು ಹಾಕಿದ ಯಶಸ್ಸು ರಾಘವೇಂದ್ರಮಠದ ಅಂದಿನ ಪೀಠಾಧಿಪತಿ ಶ್ರೀ ಸುಜಯೀಂದ್ರತೀರ್ಥರಿಗೇ ಸಲ್ಲುತ್ತದೆ.
ಅವರು ರಾಯರ ಪೀಠವನ್ನು ಕ್ರಿ.ಶ.1963 ರಿಂದ ಕ್ರಿ.ಶ.1986ರ ವರೆಗೂ ಅಲಂಕರಿಸಿದ್ದರು. ಅನೇಕ ಭಗವದ್ಭಕ್ತರು 1970 ರ ಸಮಯಕ್ಕೆ ಮುಂಬೈಯಿಂದ ಮಂಚಾಲೆಗೆ ತೆರಳಿ ವಾಣಿಜ್ಯನಗರದಲ್ಲಿ ಗುರುರಾಯರ ಸನ್ನಿಧಾನದ ಆವಶ್ಯಕತೆ, ತನ್ಮೂಲಕ ಧರ್ಮದ ಪುನರುತ್ಥಾನ ಪ್ರಸ್ತುತವೆಂದು ಶ್ರೀಗಳಲ್ಲಿ್ಲ ನಿವೇದಿಸಿಕೊಂಡರು. ರಾಯರ ತತ್ವಪ್ರಸಾರಕ್ಕೆಂದೇ, ಧರ್ಮಜಾಗೃತಿಗೆಂದೇ ಪೀಠವನ್ನು ಅಲಂಕರಿಸಿದ್ದ ಶ್ರೀಸುಜಯೀಂದ್ರರು ಕೂಡಲೇ ಒಪ್ಪಿದರು.
ಅಂತೆಯೇ ಶ್ರೀಗಳೇ ಸ್ವತಃ ಗುರುರಾಯರ ಮೃತ್ತಿಕೆಯೊಂದಿಗೆ ತೆರಳಿ ಮುಂಬೈನ ಜೋಗೇಶ್ವರಿಯಲ್ಲಿ ಭಕ್ತರೊಬ್ಬರು ನೀಡಿದ ವಿಸõತವಾದ ಹಾಗು ಸುಂದರವಾದ ಪ್ರದೇಶದಲ್ಲಿ 1971ರ ಏ. 28ರಂದು ಗುರುರಾಯರ ಬೃಂದಾವನವನ್ನು ಪ್ರತಿಷ್ಠಾಪಿಸಿ ಮುಂಬೈಯಲ್ಲಿ ಧರ್ಮದ ನವೀಕರಣಕ್ಕೆ ನಾಂದಿ ಹಾಡಿದರು. ನಂತರವೇ ಪಂಢರಾಪುರ, ಬದರಿ, ಹರಿದ್ವಾರ, ನಾಸಿಕ, ಭುವನೇಶ್ವರ ಮುಂತಾದ ಉತ್ತರ-ಪಶ್ಚಿಮ-ಪೂರ್ವ ಭಾರತದ ಉದ್ದಗಲಕ್ಕೂ ರಾಯರ ಮೃತ್ತಿಕಾಬೃಂದಾವನಗಳು ಪ್ರತಿಷ್ಠಾಪಿತವಾದವು.
ಪೇಶ್ವರ ಆಳ್ವಿಕೆಯಲ್ಲಿ ಶ್ರೀವರದೇಂದ್ರತೀರ್ಥರು ಗುರುರಾಯರ ಮಠವನ್ನು ಪುಣೆನಗರಿಯಲ್ಲಿ ಸ್ಥಾಪಿಸಿದ್ದೇ ಉತ್ತರಭಾರತದ ಮೊತ್ತ ಮೊದಲ ಐತಿಹಾಸಿಕಮಠ. ಇದುವೇ ಪ್ರಾಚೀನಮಠ. ಇಲ್ಲಿನ ವೈಶಿಷ್ಟ್ಯವೆಂದರೆ ರಾಯರ ಗರ್ಭಗುಡಿಯು ಮಂತ್ರಾಲಯದ ಗರ್ಭಗುಡಿಯಂತೆಯೇ ದಪ್ಪ, ಅಗಲವಾಗಿದ್ದು ಕೆತ್ತನೆಗಳನ್ನು ಒಳಗೊಂಡಿದೆ. ಮುಸಲ್ಮಾನ ರಾಜನಾದ ಸಿದ್ದಿಮಸೂದ ಖಾನನು ಮಂಚಾಲೆ ಗ್ರಾಮವನ್ನು ರಾಯರಿಗೆ ದಾನಮಾಡಿದ ಕುರುಹಿಗಾಗಿ ಅವನ ನೆನಪಿನಲ್ಲಿ ಮಂಚಾಲೆಯ ಬೃಂದಾವನದ ಹಿಂಬದಿಯಲ್ಲಿ ಮಿನಾರೊಂದನ್ನು ಸ್ಥಾಪಿಸಲಾಗಿದೆ.
ಅಂತೆಯೇ ಮುಂಬೈನಗರದ ಜೋಗೇಶ್ವರಿಯ ರಾಯರ ಮಠದ ಗರ್ಭಗುಡಿಯ ಹಿಂದಿನ ಮೇಲ್ಛಾವಣಿಯಲ್ಲಿ ಮಿನಾರೊಂದನ್ನು ಕೆತ್ತನೆಮಾಡಲಾಗಿದೆ. ಮಂಚಾಲೆಯಲ್ಲಿ ಗ್ರಾಮದೇವತೆ ಮಂಚಾಲಮ್ಮನಿರುವಂತೆ ಇಲ್ಲಿಯೂ ಮಠದ ಪ್ರಾಕಾರದ ಈಶಾನ್ಯದಲ್ಲಿ ಮಂಚಾಲಮ್ಮನ ವಿಗ್ರಹವನ್ನು ಸ್ಥಾಪಿಸಲಾಗಿದೆ. ಮುಂಬೈನ ಗುಲ್ಶನ್ ನಗರದ ಜೋಗೇಶ್ವರಿಯ ಸುತ್ತಮುತ್ತಲೂ ಅನೇಕ ಮುಸಲ್ಮಾನರು ವಾಸಿಸುತ್ತಿದ್ದು ಅವರೆಲ್ಲರೂ ಇಲ್ಲಿಯೂ ಮಂತ್ರಾಲಯದಂತೆ ಭಕ್ತಿಭಾವದಿಂದ ಮಠದ ಸರ್ವವಿಧಕಾರ್ಯಕಲಾಪಗಳಲ್ಲೂ ಪಾಲ್ಗೊಳ್ಳುತ್ತ ಸಹಕರಿಸುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಲೇ ಇಲ್ಲಿನ ಮಠವನ್ನು ಭಕ್ತರು ಅಭಿನವಮಂತ್ರಾಲಯವೆಂದೇ ಸಂಬೋಧಿಸುತ್ತಾರೆ.
ಪ್ರಸ್ತುತ ಮಂತ್ರಾಲಯಮಠದ ಪೀಠಾಧಿಪತಿಗಳೂ, ಗುರುರಾಯರ ಪೂರ್ವಾಶ್ರಮವಂಶಸ್ಥರೂ ಆಗಿರುವ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರು ನಾಲ್ಕು ವರುಷಗಳ ಹಿಂದೆ ಈ ಪುರಾತನ ಮಠದ ಜೀಣೋದ್ಧಾರವನ್ನು ಕೈಗೊಂಡು 2017ರ ಮಾ. 20ರಂದು ಗುರುರಾಯರ ಬೃಂದಾವನದ ಪುನಃಪ್ರತಿಷ್ಠಾಪನೆಯನ್ನು ನಡೆಸಿಕೊಟ್ಟರು. ಬೃಂದಾವನದೊಳು ಸುಮಾರು 451 ಅತ್ಯಪೂರ್ವ ಸಾಲಿಗ್ರಾಮಗಳನ್ನು ಇರಿಸಿ ಇಲ್ಲಿನ ಭಗವತ್ಸಾನ್ನಿದ್ಧ್ಯವನ್ನು ಇಮ್ಮಡಿಗೊಳಿಸಿರುವರು. ರಾಯರ ಸಮೀಪದಲ್ಲೇ ಮುಖ್ಯಪ್ರಾಣದೇವರೂ ನೆಲೆಸಿರುವರು. ಗಣಪತಿ, ನವಗ್ರಹ ಹಾಗು ಶೇಷದೇವರ ಸಾನ್ನಿದ್ಧ್ಯವೂ ಇಲ್ಲಿದೆ.
ಮಠದಲ್ಲಿ ರಾಘವೇಂದ್ರ ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ. ಇದಲ್ಲದೆ ಯೋಗಕೇಂದ್ರ, ವಧೂವರಾನ್ವೇಷಣಕೇಂದ್ರಗಳೂ ಜೊತೆ-ಜೊತೆಯಲ್ಲೇ ನಡೆಯುತ್ತಿದ್ದು ರಾಯರ ಕಾಲದಲ್ಲಿ ನಡೆಯುತ್ತಿದ್ದ ಸಕಲ ಸಾಮಾಜಿಕ ಕಾರ್ಯಕ್ರಮಗಳೂ ಇಂದಿಗೂ ಸಿಗಬೇಕೆಂಬ ಕಳಕಳಿ ಶ್ರೀಸ್ವಾಮಿಗಳಿಗೂ ಹಾಗು ವಿಚಾರಣಕರ್ತಾ ಶ್ರೀಪೂರ್ಣಪ್ರಜ್ಞಾಚಾರ್ಯರಿಗೂ ಬಹಳವಾಗಿದೆ. ನಡೆದಾಡುವ ರಾಯರೆಂದೇ ಪ್ರಖ್ಯಾತರಾಗಿದ್ದ ಶ್ರೀಸುಶಮೀಂದ್ರತೀರ್ಥರಂತೂ ಅನೇಕ ಬಾರಿ ಇಲ್ಲಿಗೆ ಭೇಟಿಕೊಟ್ಟು ಮಠದ ಉನ್ನತಿಗೆ ಬಹಳವಾಗಿ ಶ್ರಮಿಸಿದ್ದಾರೆ. ಕ್ರಿ.ಶ. 2021ಕ್ಕೆ ಸುವರ್ಣ ವರುಷಗಳನ್ನು ಪೂರೈಸಿರುವ ಮಠದ ಆಗು-ಹೋಗುಗಳು ನಿತ್ಯವೂ ಭಕ್ತರಿಗೆ ತಿಳಿಯಲಿ ಎಂಬ ಉದ್ದೇಶದಿಂದ ಠಜ್ಟಛಿಛಿಡಚಚ್ಟಠಿಜಚ.ಟ್ಟಜ ಎಂಬ ಅಂತರ್ಜಾಲತಾಣವನ್ನೂ ನಿರ್ವಿುಸಿದೆ. ಕೀರ್ತನಕೇಸರೀ ಹುಸೇನ್ದಾಸರು ಇಲ್ಲಿಗೆ ಬಂದು ಅನೇಕಬಾರಿ ದಾಸರಪದಗಳ ಹಾಡುಗಾರಿಕೆಯನ್ನು ನಡೆಸಿಕೊಟ್ಟಿದ್ದಾರೆ. ಉತ್ತರಭಾರತಕ್ಕೆ ತೆರಳುವ ಎಲ್ಲ ಭಕ್ತರಿಗೂ ಶ್ರೀಮಠವು ಅತ್ಯಂತ ಅನುಕೂಲಕರ ಭಕ್ತಿಕೇಂದ್ರವಾಗಿದೆ.