ಶಾಲಾ ಜಮೀನು ಸಾಗುವಳಿದಾರರಿಗೆ ಭೂಮಿ ಗುತ್ತಿಗೆಗೆ ನೀಡಲು ಒತ್ತಾಯ

kallur megharaj
Published on

ಶಿವಮೊಗ್ಗ: ಹಲವು ವರ್ಷಗಳಿಂದ ಶಾಲಾ ಜಮೀನುಗಳನ್ನು ಸಾಗುವಳಿ ಮಾಡುತ್ತಿರುವ ಒತ್ತುವರಿದಾರರಿಗೆ ಕನಿಷ್ಠ 50 ವರ್ಷ ಗುತ್ತಿಗೆ ಆಧಾರದಲ್ಲಿ ಜಮೀನನ್ನು ವಹಿಸಿಕೊಡಬೇಕೆಂದು ರಾಜ್ಯ ಭೂ-ವಿದ್ಯಾದಾನದ ಜಮೀನುಗಳ ಒತ್ತುವರಿ ಗೇಣಿದಾರರ ಹೋರಾಟ ಸಮಿತಿ ಅಧ್ಯಕ್ಷ ಕಲ್ಲೂರು ಮೇಘರಾಜ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸರ್ಕಾರಿ ಜಮೀನುಗಳಲ್ಲಿ ಕಾಫಿ, ಏಲಕ್ಕಿ ಮುಂತಾದವನ್ನು ಬೆಳೆದಿರುವ ಅನಧಿಕೃತ ಸಾಗುವಳಿದಾರರಿಗೆ ಗುತ್ತಿಗೆ ನೀಡುವಂತೆ ಶಾಲಾ ಜಮೀನು ಒತ್ತುವರಿದಾರರಿಗೂ ಗುತ್ತಿಗೆಗೆ ನೀಡಬೇಕು. ಇದಕ್ಕಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತರಬೇಕೆಂದು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1955-56ರಲ್ಲಿ ಅಂದಿನ ಸಿಎಂ ಕೆಂಗಲ್ ಹನುಮಂತಯ್ಯ ಪ್ರಾರಂಭಿಸಿದ್ದ ಭೂ-ವಿದ್ಯಾದಾನ ಚಳವಳಿಯಲ್ಲಿ ಸುಮಾರು 10 ಸಾವಿರ ಕಡೆಗಳಲ್ಲಿ ಜಮೀನುಗಳನ್ನು ಶಾಲೆಗೆ ದಾನ ನೀಡಲಾಗಿತ್ತು. ಹಲವೆಡೆ ಈ ಜಮೀನುಗಳನ್ನು ಸಣ್ಣ ರೈತರು ಸಾಗುವಳಿ ಮಾಡುತ್ತಿದ್ದಾರೆ. ಕರ್ನಾಟಕ ಭೂ ಸುಧಾರಣಾ ಕಾಯ್ದೆ ಜಾರಿ ಸಂದರ್ಭದಲ್ಲಿ ಶಾಲಾ ಜಮೀನನ್ನು ಹೊರಗಿಟ್ಟಿದ್ದರಿಂದ ಲೋಪವಾಗಿದೆ ಎಂದು ತಿಳಿಸಿದರು.

ಸರ್ಕಾರ ಈಗಲಾದರೂ ಲೋಪವನ್ನು ಸರಿಪಡಿಸಿ ಸಾಗುವಳಿದಾರರಿಗೆ ಗುತ್ತಿಗೆ ಆಧಾರದಲ್ಲಿ ಜಮೀನು ನೀಡುವ ಮೂಲಕ ಆತಂಕ ದೂರ ಮಾಡಬೇಕು. ಆ ಮೂಲಕ ಜಮೀನು ಮಾಲೀಕತ್ವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net