

ಹೈದರಾಬಾದ್: 'ಕಲ್ಕಿ 2898 ಕ್ರಿ.ಶ' ಬಿಡುಗಡೆ ಸಮೀಪಿಸುತ್ತಿರುವಂತೆಯೇ ಇದಕ್ಕೆ ಸಂಬಂಧಿಸಿದ ಕೆಲವು ಕುತೂಹಲಕಾರಿ ಸಂಗತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.
ನಾಗ್ ಅಶ್ವಿನ್, ಪ್ರಭಾಸ್ ಅವರ ಥ್ರಿಲ್ಲರ್ ಸಿನಿಮಾ 'ಕಲ್ಕಿ 2898 ಎಡಿ'. ಇದು ಜೂನ್ 27 ರಂದು ಬಿಡುಗಡೆಯಾಗಲಿದೆ. ಸಿನಿಮಾ ಪ್ರೇಮಿಗಳೆಲ್ಲಾ ಕಾತರದಿಂದ ಕಾಯುತ್ತಿದ್ದಾರೆ. ಈ ಚಿತ್ರದ ಹವಾ ಹೇಗಿದೆ ಎಂದರೆ ಬಿಡುಗಡೆಗೂ ಮುನ್ನವೇ ದಾಖಲೆಗಳನ್ನು ಮುರಿಯುತ್ತಿದೆ.
ವಿದೇಶಗಳಲ್ಲಿ ಇದರ ಪ್ರೀ-ಬುಕಿಂಗ್ ಪ್ರಾರಂಭವಾಗಿದ್ದು, ಟಿಕೆಟ್‌ಗಳು ಬಿಸಿ ಕೇಕ್‌ನಂತೆ ಮಾರಾಟವಾಗಿವೆ. ಆರ್‌ಆರ್‌ಆರ್ ಬಿಡುಗಡೆಗೂ ಮುನ್ನ ಮಾರಾಟವಾಗಿದ್ದ ಟಿಕೆಟ್ ದಾಖಲೆಗಳನ್ನು ಮುರಿದಿದೆ. ಈಗಾಗಲೇ ಅಮೆರಿಕದಲ್ಲಿ ಮಿಲಿಯನ್ ಡಾಲರ್ ಪ್ರೀ-ಸೇಲ್ ವ್ಯವಹಾರ ನಡೆದಿದೆ. ಇದು ಪ್ರೀ-ಬುಕಿಂಗ್‌ನಲ್ಲಿ ಅತ್ಯಂತ ವೇಗವಾಗಿ ಮಿಲಿಯನ್ ಡಾಲರ್ ಗಡಿ ದಾಟಿದ ಭಾರತೀಯ ಚಿತ್ರ ಎಂಬ ದಾಖಲೆಯನ್ನು ಸೃಷ್ಟಿಸಿದೆ.
ಬುಕ್ಕಿಂಗ್ ಹೀಗೆಯೇ ಮುಂದುವರಿದರೆ ಬಿಡುಗಡೆಗೂ ಮುನ್ನವೇ ಎರಡು ಮಿಲಿಯನ್ ಡಾಲರ್ ತಲುಪುವ ನಿರೀಕ್ಷೆ ಇದೆ. ಇದುವರೆಗೆ ಆಸ್ಟ್ರೇಲಿಯಾದ 9 ಸ್ಥಳಗಳಲ್ಲಿ ಪ್ರೀ-ಬುಕಿಂಗ್ ತೆರೆಯಲಾಗಿದ್ದು, ಅಲ್ಲಿಯೂ ಟಿಕೆಟ್‌ಗಳು ಹೆಚ್ಚು ಮಾರಾಟವಾಗುತ್ತಿವೆ.
ಐಮ್ಯಾಕ್ಸ್ ಶೋ: ಕಲ್ಕಿ ವಿದೇಶದಲ್ಲಿ ಅತಿ ಹೆಚ್ಚು ಐಮ್ಯಾಕ್ಸ್ ನಲ್ಲಿ ಬಿಡುಗಡೆಯಾದ ಚಿತ್ರ ಎಂಬ ಮತ್ತೊಂದು ದಾಖಲೆಯನ್ನು ಹೊಂದಿದೆ. ಅಲ್ಲಿ ಜೂನ್ 26ಕ್ಕೆ ಚಿತ್ರ ಬಿಡುಗಡೆಯಾಗಲಿದೆ. 90 ಕ್ಕೂ ಹೆಚ್ಚು ಐಮ್ಯಾಕ್ಸ್ ಇದನ್ನು ಏಕಕಾಲದಲ್ಲಿ ಪ್ರದರ್ಶಿಸುತ್ತದೆ. ಇಲ್ಲಿಯವರೆಗೆ ಯಾವುದೇ ಭಾರತೀಯ ಚಿತ್ರವು ಇಷ್ಟು ಐಮ್ಯಾಕ್ಸ್ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿಲ್ಲ. ಬಿಡುಗಡೆಗೆ ಇನ್ನೂ ಸಮಯ ಇರುವುದರಿಂದ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆಯಂತೆ.
‘ಕಲ್ಕಿ’ಯಲ್ಲಿ ಎರಡೇ ಹಾಡು: ಇತ್ತೀಚೆಗಷ್ಟೇ ಈ ಚಿತ್ರದಲ್ಲಿ ಒಂದೇ ಹಾಡು ಇರಲಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈಗ ಮತ್ತೊಂದು ಹಾಡು ಸೇರ್ಪಡೆಯಾಗುತ್ತಿದೆ ಎಂಬ ಸುದ್ದಿ ಹಬ್ಬಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ಹಾಡನ್ನು ಬಿಡುಗಡೆ ಮಾಡಲು ನಿರ್ಮಾಪಕರು ಯೋಚಿಸುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಅಮಿತಾಬ್ ಬಚ್ಚನ್ ಕೂಡ ತಮ್ಮ ಬ್ಲಾಗ್ ನಲ್ಲಿ ಪೋಸ್ಟ್ ಮಾಡಿದ್ದು, 'ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಸಿನಿಮಾದ ಹಾಡಿನ ಚಿತ್ರೀಕರಣದಲ್ಲಿ ನಾನು ಬ್ಯುಸಿಯಾಗಿದ್ದೇನೆ' ಎಂದಿದ್ದಾರೆ. ಈ ಹಾಡನ್ನು ಬಾಲಿವುಡ್‌ನ ಜನಪ್ರಿಯ ಗಾಯಕ ಅರ್ಜಿತ್ ಸಿಂಗ್ ಹಾಡಿದ್ದಾರಂತೆ.
ಚಿತ್ರವು ಪ್ಯಾನ್-ಇಂಡಿಯಾ ಪ್ರಮಾಣದಲ್ಲಿ ಬಿಡುಗಡೆಯಾಗುತ್ತಿದ್ದು, ಪ್ರಚಾರ ತೀವ್ರಗೊಳಿಸಲಾಗಿದೆ. ಅದ್ಧೂರಿ ಬಜೆಟ್ ನಲ್ಲಿ ತಯಾರಾಗಿರುವ ಈ ಸಿನಿಮಾದಲ್ಲಿ ಪ್ರಭಾಸ್ ಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದು, ಹಿರಿಯ ನಾಯಕ ಕಮಲ್ ಹಾಸನ್ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಮಿತಾಬ್ ಬಚ್ಚನ್ ಅಶ್ವತ್ಥಾಮನಾಗಿ ನಟಿಸಿದ್ದಾರೆ. ಪಶುಪತಿ, ರಾಜೇಂದ್ರ ಪ್ರಸಾದ್ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.