ಕಳಸಾ-ಬಂಡೂರಿ ಯೋಜನೆಯ ಬಾಕಿ ಮಂಜೂರಾತಿ ನೀಡಲು ಕೇಂದ್ರಕ್ಕೆ ಆಗ್ರಹ ಗೋವಾ ಸಿಎಂ ಹೇಳಿಕೆ ಆಘಾತ ತಂದಿದೆ: ಎಚ್.ಕೆ.ಪಾಟೀಲ್

HK Patil
Published on

ಬೆಂಗಳೂರು:

ಕಳಸಾ-ಬಂಡೂರಿ ಯೋಜನೆ ಬಗ್ಗೆ ಗೋವಾ ವಿಧಾನಸಭೆಯಲ್ಲಿ ಸಿಎಂ ಪ್ರಮೋದ ಸಾವಂತ ಅವರು ನೀಡಿರುವ ಹೇಳಿಕೆ ಕರ್ನಾಟಕಕ್ಕೆ ಆಘಾತ ತಂದಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರವು ಮಹಾದಾಯಿ ಯೋಜನೆಗೆ ಯಾವುದೇ ಕಾರಣಕ್ಕೂ ಅನುಮೋದನೆ ನೀಡುವುದಿಲ್ಲವೆಂದು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ ಅವರು ತಮಗೆ ತಿಳಿಸಿದ್ದಾರೆಂದು ಸದನಕ್ಕೆ ತಿಳಿಸಿರುವುದು ಸರಿಯಲ್ಲ ಎಂದರು.

ಮಹಾದಾಯಿ ಜಲವಿವಾದವು ಅಂತರರಾಜ್ಯ ಜಲವಿವಾದದ ಕಾಯ್ದೆಯನ್ವಯ

ನ್ಯಾಯಾಧೀಕರಣ ರಚನೆಯಾದ ಮೇಲೆ ಅಂತಿಮ ತೀರ್ಪು ನೀಡಿದ್ದು, ಆ ತೀರ್ಪು ಕೇಂದ್ರದ

ಗೆಜೆಟ್‌ನಲ್ಲಿ ಪ್ರಕಟಣೆಯಾಗಿ ನ್ಯಾಯಾಧೀಕರಣದ ಐತೀರ್ಪು ಜಾರಿಗೆ ಬಂದಿದೆ. ಈ ಹೊತ್ತಿನಲ್ಲಿ ಗೋವಾದಿಂದ ಈ ರೀತಿಯ ಪ್ರತಿಕ್ರಿಯೆ ಸರಿಯಲ್ಲ ಎಂದರು.

ಕಳಸಾ-ಬಂಡೂರಿ ಯೋಜನೆಗೆ 7.56 ಟಿ.ಎಮ್.ಸಿ ಅಡಿ ನೀರನ್ನು ಮಲಪ್ರಭಾ

ಕಣಿವೆಗೆ ತಿರುಗಿಸಿಕೊಳ್ಳಲು ರಾಜ್ಯ ಕೋರಿತ್ತು. ಇದರಲ್ಲಿ 3.90 ಟಿ.ಎಮ್.ಸಿ ನೀರನ್ನು ರಾಜ್ಯಕ್ಕೆ

ಹಂಚಿಕೆಯಾಗಿದೆ ಎಂದರು.

ಯೋಜನೆ ಜಾರಿಗೊಳಿಸಲು ಪ್ರಸ್ತಾವನೆಯನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಕರ್ನಾಟಕ ಮಂಜೂರಿಗಾಗಿ/ತೀರುವಳಿಗಾಗಿ ಅರ್ಜಿ ಸಲ್ಲಿಸಿತ್ತು. 10.6 ಹೆಕ್ಟೇರ್

ಅರಣ್ಯ ಭೂಮಿ ಕಾಳಿ ಮತ್ತು ಸಹ್ಯಾದ್ರಿ ಹುಲಿ ಕಾಯ್ದಿಟ್ಟ ಪ್ರದೇಶದಲ್ಲಿ ಬರುತ್ತದೆ ಎಂದು

ಗೋವಾ ಆಕ್ಷೇಪಿಸಿತು. ಆದರೂ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಈ ಅರಣ್ಯ ಪ್ರದೇಶವನ್ನು ಬಳಕೆ ಮಾಡಿಕೊಳ್ಳಲು ಶಿಫಾರಸ್ಸು ಮಾಡಿದೆ ಎಂದು ವಿವರಿಸಿದರು.

ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಮುಂದೆ 77ನೇ, 79ನೇ ಮತ್ತು 80ನೇ

ಸಭೆಗಳಲ್ಲಿ ಈ ವಿಷಯವನ್ನು ನಿರ್ಣಯ ಮಾಡದೇ ಗೋವಾ, ವೃಥಾ ಕಾಲಹರಣ ಮುಂದೂಡುತ್ತಾ

ಬಂದಿದೆ. ಸರ್ವೋಚ್ಛ ನ್ಯಾಯಾಲಯವು ಕರ್ನಾಟಕದ ಮಹಾದಾಯಿ ಯೋಜನೆಗೆ

ತಡೆಹಿಡಿಯಬೇಕೆಂಬುವ ಯಾವುದೇ ಆದೇಶ ನೀಡಿಲ್ಲ ಎಂದು ಹೇಳಿದರು.

2022 ರಲ್ಲಿ ಕೇಂದ್ರ ಜಲ ಆಯೋಗವು ಕಳಸಾ ಮತ್ತು ಬಂಡೋರಿ ಯೋಜನೆಗಳ ಪರಿಷ್ಕೃತ ವಿವರವಾದ ಯೋಜನಾ ವರದಿಗಳಿಗೆ ಅನುಮೋದನೆ ನೀಡಿದೆ. 2023ರಲ್ಲಿ ಸರ್ವೋಚ್ಛ ನ್ಯಾಯಾಲಯವು ಗೋವಾದ ಮೂಲದಾವೆಯ ಮೇಲಿನ ಮಧ್ಯಂತರ ಅರ್ಜಿಯನ್ನು ವಿಲೇವಾರಿ ಮಾಡಿ, ಕಳಸಾ ಯೋಜನೆಗೆ ತಡೆಯೊಡ್ಡುವಂತೆ ಕರ್ನಾಟಕದ ವಿರುದ್ಧ ತಡೆಯಾಜ್ಞೆ ನೀಡುವಂತೆ ಕೋರಿದ್ದ ಗೋವಾದ ಪ್ರಾರ್ಥನೆಯನ್ನು ವಜಾ ಮಾಡಿದೆ ಎಂದರು.

ನ್ಯಾಯಯುತವಾದ ಮತ್ತು ಕಾನೂನುಬದ್ಧವಾದ ಹಾಗೂ ಸಂವಿಧಾನಾತ್ಮಕ ರಕ್ಷಣೆ ಹೊಂದಿರುವ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ವೃಥಾ ಅಡ್ಡಿ ಮಾಡುತ್ತಿರುವುದು ಒಕ್ಕೂಟ ವ್ಯವಸ್ಥೆಗೆ ದಕ್ಕೆಯಾಗಲಿದೆ ಎಂದರು.

ನ್ಯಾಯಾಂಗದಿಂದ ಯಾವುದೇ ಅಡೆತಡೆಯಿಲ್ಲದ ಯೋಜನೆಗಳನ್ನು ಮತ್ತು ಕಾನೂನು ಬದ್ಧವಾಗಿ

ಅಂತರ್‌ರಾಜ್ಯ ಜಲವಿವಾದ ಕಾಯ್ದೆಯಡಿಯಲ್ಲಿ ನ್ಯಾಯಾಧೀಕರಣದಿಂದ ಇತ್ಯರ್ಥಗೊಂಡಿರುವ

ಯೋಜನೆಗಳನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರವು ರಾಜ್ಯಕ್ಕೆ ಮಂಜೂರಾತಿಗಳನ್ನು ತಕ್ಷಣ ನೀಡಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net