

ಕಲಬುರಗಿ: ಜಿಲ್ಲೆಯಲ್ಲಿ ಕರೊನಾದ ಅಬ್ಬರ ಮುಂದುವರಿದಿದ್ದು, ನಗರದಲ್ಲಿ ಮತ್ತೊಂದು ಬಲಿಯಾಗಿದೆ. ಹೀಗಾಗಿ ಕರೊನಾ ಸಾವಿನ ಸಂಖ್ಯೆ ಜಿಲ್ಲೆಯಲ್ಲಿ ಎರಡಕ್ಕೇರಿದ್ದು, ಸೋಂಕಿತರ ಸಂಖ್ಯೆ ಒಂಬತ್ತಾಗಿದೆ. ಸೋಂಕಿನಿಂದ ಮೃತಪಟ್ಟಿರುವ 65 ವರ್ಷದ ಹಣ್ಣಿನ ವ್ಯಾಪಾರಿ ಚಿಕಿತ್ಸೆ ಪಡೆದು ಕೊಂಡಿದ್ದ ಖಾಸಗಿ ಆಸ್ಪತ್ರೆಯನ್ನು ಆರೋಗ್ಯ ಇಲಾಖೆ ವಶಕ್ಕೆ ತೆಗೆದುಕೊಂಡಿದ್ದು, ಮೃತನಿಗೆ ಚಿಕಿತ್ಸೆ ನೀಡಿದ ವೈದ್ಯ ಮತ್ತು ಸಿಬ್ಬಂದಿಯನ್ನೂ ಪ್ರತ್ಯೇಕವಾಗಿ ಹೋಂ ಕ್ವಾರಂಟೈನ್ಲ್ಲಿರಿಸಿದ್ದಾರೆ. ಸಾವನ್ನಪ್ಪಿದ ವ್ಯಕ್ತಿ ಇದ್ದ ಜಾಗವನ್ನು ಕಂಟೋನ್ಮೆಂಟ್ ಪ್ರದೇಶ ಎಂದು ಘೊಷಿಸಿ ಅಲ್ಲಿ ಎಲ್ಲ ಮುಂಜಾಗ್ರತಾ ಕ್ರಮ ಮತ್ತು ಬಂದೋಬಸ್ತ್ ಮಾಡಲಾಗಿದೆ.
ಜಿಲ್ಲಾಡಳಿತಕ್ಕೆ ತಲೆನೋವು: ಈ ವ್ಯಕ್ತಿಯಿಂದ ಯಾರ್ಯಾರು ಹಣ್ಣು ಖರೀದಿಸಿದ್ದಾರೆ ಎನ್ನುವುದು ಪತ್ತೆಯಾಗುವುದೇ ಕಷ್ಟದ ಸಂಗತಿಯಾಗಿದ್ದು, ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿದೆ. ಈತನಿಂದ ಹಣ್ಣು ಖರೀದಿಸಿದವರೂ ಆತಂಕಕ್ಕೊಳಗಾಗಿದ್ದಾರೆ. ಮೃತನ ಒಟ್ಟಾರೆ ಟ್ರಾವೆಲ್ ಹಿಸ್ಟರಿ ಗೊತ್ತಾಗಬೇಕಾಗಿದೆ.
ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿರುವುದಲ್ಲದೆ, ಚಿಕಿತ್ಸೆ ನೀಡದಂತೆ ಇತರ ವೈದ್ಯರಿಗೂ ಪ್ರಚೋದಿಸುತ್ತಿರುವವರನ್ನು ದೇಶದ್ರೋಹಿಗಳೆಂದು ಪರಿಗಣಿಸಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. | ಬಿ. ಶರತ್ ಜಿಲ್ಲಾಧಿಕಾರಿ, ಕಲಬುರಗಿ
ಪರಭಾಷಿಕರಿಗೆ ಊಟಕ್ಕೂ ಪರದಾಟ
ಶಿರಾಳಕೊಪ್ಪ(ಶಿಕಾರಿಪುರ): ಲಾಕ್ಡೌನ್ ಪ್ರಾರಂಭವಾದ ದಿನದಿಂದ ಯಾವುದೇ ವ್ಯವಹಾರ ನಡೆಸಲಾಗದೆ ಮನೆಯಲ್ಲೇ ಕುಳಿತು ಊಟಕ್ಕೂ ಪರದಾಡುತ್ತಿದ್ದ ಉತ್ತರಪ್ರದೇಶ ಮತ್ತು ರಾಜಸ್ಥಾನ ಮೂಲದ ಯುವಕರಿಗೆ ಪಟ್ಟಣದ ಕೆಲ ಸಂಘಟನೆ ಗಳ ಪ್ರಮುಖರು ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಕಳೆದ 4 ದಿನಗಳಿಂದ ಒಂದೇ ಹೊತ್ತು ಊಟ ಮಾಡಿಕೊಂಡು ರಾತ್ರಿ ಊಟವಿಲ್ಲದೇ ಉಪವಾಸ ಬೀಳುತ್ತಿದ್ದ ಯುವಕರು ಕನಿಷ್ಠ ಊಟಕ್ಕೆ ವ್ಯವಸ್ಥೆ ಮಾಡಿ, ಇಲ್ಲವೇ ನಮ್ಮ ರಾಜ್ಯಕ್ಕೆ ತೆರಳಲು ವಾಹನ ವ್ಯವಸ್ಥೆ ಮಾಡಿಕೊಡಿ. ನಾವು ಅಲ್ಲಿ ಹೋದರೆ ಕೃಷಿ ಮಾಡಿ ಜೀವನ ಸಾಗಿಸುತ್ತೇವೆ ಎಂದು ಅಳಲು ತೋಡಿಕೊಂಡರು.
ಬುಧವಾರದ ಹೈಲೈಟ್ಸ್
ಜ್ಯುಬಿಲೆಂಟ್ ಮಾಲೀಕರ ವಿರುದ್ಧ ಅರ್ಜಿ
ಬೆಂಗಳೂರು: ಕರೊನಾ ಸೋಂಕು ಹರಡಲು ಕಾರಣವಾಗಿರುವ ನಂಜನಗೂಡಿನ ಜ್ಯುಬಿಲೆಂಟ್ ಜನರಿಕ್ಸ್ ಕಂಪನಿ ಮಾಲೀಕರ ವಿರುದ್ಧ ಕ್ರಮ ಜರುಗಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಬೆಂಗಳೂರಿನ ವಕೀಲೆ ಗೀತಾ ಮಿಶ್ರಾ ಹೈಕೋಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಮಾಲೀಕರ ನಿರ್ಲಕ್ಷ್ಯದಿಂದಲೇ ನಂಜನಗೂಡು, ಮೈಸೂರು ಹಾಗೂ ರಾಜ್ಯದ ಇತರ ಭಾಗಗಳಲ್ಲಿ ಕರೊನಾ ಸೋಂಕು ಹರಡಿದೆ. ಅವರ ವಿಚಾರಣೆ ನಡೆಸಿ, ಸೂಕ್ತ ಕಾನೂನು ಕ್ರಮ ಜರುಗಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿದ್ದಾರೆ.
ಗ್ರಾಪಂ ಅಧ್ಯಕ್ಷೆ ಸೇರಿ 57 ಮಂದಿ ಕ್ವಾರಂಟೈನ್ಗೆ
ಸುಳ್ಯ: ವಿದೇಶದಿಂದ ಆಗಮಿಸಿದ ತಾಲೂಕಿನ ಅಜ್ಜಾವರ ಗ್ರಾಮದ ವ್ಯಕ್ತಿಗೆ ಕೆಲ ದಿನಗಳ ಹಿಂದೆ ಕರೊನಾ ಪಾಸಿಟಿವ್ ಆಗಿರುವ ಹಿನ್ನೆಲೆಯಲ್ಲಿ ಒಟ್ಟು 57 ಮಂದಿಯನ್ನು ಮನೆಗಳಲ್ಲಿ ನಿಗಾದಲ್ಲಿರಿಸಲಾಗಿದೆ. ಇವರ ಸಂಪರ್ಕದ ಹಿನ್ನೆಲೆ ಯಲ್ಲಿ ಇತರ 44 ಮಂದಿಯನ್ನು ಕ್ವಾರಂಟೈನ್ನಲ್ಲಿರಿಸಲಾಗಿದೆ. ಮಾ. 18ರಂದು ದುಬೈನಿಂದ ಬಂದಿದ್ದ ವ್ಯಕ್ತಿ 28ರಂದು ಆಸ್ಪತ್ರೆಗೆ ದಾಖಲಾಗಿದ್ದ. ಈ ಮಧ್ಯೆ ಸೋಂಕಿತನ ಸಹೋದರ ಪಂಚಾಯಿತಿಯ ಸಭೆಯೊಂದರಲ್ಲಿ ಭಾಗವಹಿಸಿದ್ದ ರಿಂದ ಗ್ರಾಪಂ ಅಧ್ಯಕ್ಷೆ, ಪಿಡಿಒ, 8 ಸದಸ್ಯರು ಕ್ವಾರಂಟೈನ್ಗೆ ದಾಖಲಾಗಿದ್ದಾರೆ.