

ರಾಣೆಬೆನ್ನೂರ: ಯಾವ ದೇಶದಲ್ಲಿ ಸಂಸ್ಕಾರ, ಸಂಸತಿ ಇರುತ್ತದೆಯೋ ಆ ದೇಶದಲ್ಲಿ ಶಾಂತಿ ನೆಲೆಸಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಆದರೆ, ಸಂಸ್ಕಾರ ಸಂಸತಿ ಇಲ್ಲದ ದೇಶದಲ್ಲಿ ಶಾಂತಿಯೂ ಇರಲ್ಲ, ಅಭಿವೃದ್ಧಿಯೂ ಕಾಣಲ್ಲ. ಆದ್ದರಿಂದ ಮನುಷ್ಯನಿಗೆ ಸಂಸ್ಕಾರ ಬಿತ್ತಲು ಮಠಮಾನ್ಯಗಳು ಬಹಳ ಮುಖ್ಯವಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕಿನ ಕಾಕೋಳ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಗುರುಶರಣ ಬಸವೇಶ್ವರರ 156ನೇ ಪುಣ್ಯಾರಾಧನೆ, ಉಚಿತ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯ ಆತ್ಮ ಸಾಯಾಗಿ ಚಿಂತನೆ ಮಾಡಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಹುಟ್ಟು ಸಾವು ನಮ್ಮ ಕೈಯಲ್ಲಿಲ್ಲ. ಆದರೆ ಬದುಕು ನಮ್ಮ ಕೈಯಲ್ಲಿದೆ. ಆದ್ದರಿಂದ ಹುಟ್ಟು ಸಾವಿನ ಬಗ್ಗೆ ಚಿಂತಿಸುವ ಬದಲು ಬದುಕನ್ನು ಪರಿರ್ಪೂಣ ಮಾಡಿಕೊಳ್ಳಲು ಶ್ರಮಿಸೋಣ. ಕಾಯಕದಿಂದ ದೊಡ್ಡವರಾಗೋಣ. ಕಾಕೋಳ ಗುರುಶರಣ ಬಸವೇಶ್ವರ ಮಠದ ಅಭಿವೃದ್ಧಿಗಾಗಿ ನನ್ನ ಅನುದಾನದಲ್ಲಿ ಸಹಾಯಧನ ಕೊಡುತ್ತೇನೆ ಎಂದು ಭರವಸೆ ನೀಡಿದರು.
ವಿಜಯಪುರದ ಕವಲಗೇರಿಯ ಡಾ. ಸಿದ್ದರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಗ್ರಾಮದ ಪ್ರಮುಖರಾದ ರಾಜಶೇಖರಗೌಡ ಪಾಟೀಲ, ಲಲಿತಾ ಜಾಧವ, ವೀರೇಶ ಬಡಿಗೇರ, ಮಾಲತೇಶ ಜಾಧವ, ಚಂದ್ರಣ್ಣ ಕುದರಿಹಾಳ ಮತ್ತಿತರರು ಉಪಸ್ಥಿತರಿದ್ದರು.