ಕೈಲಾಂಚ ವ್ಯಾಪ್ತಿಯ 2300 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆ ಗುರಿ: ಕೃಷಿ ಇಲಾಖೆ ಅಂದಾಜು ಬಿತ್ತನೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಎಂದ ಅಧಿಕಾರಿಗಳು

Kailancha-Ph-01-Ragi Bittane - 28-7-2021
Published on

ಕೈಲಾಂಚ: ಹೋಬಳಿ ರೈತರ ಮುಖದಲ್ಲಿ ಮುಂಗಾರು ಮಳೆ ಹರ್ಷ ತರಿಸಿದ್ದು ಕಳೆದ ಕೆಲ ದಿನಗಳಿಂದ ಆಗಾಗ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಭೂಮಿ ತೇವಾಂಶದಿಂದ ಕೂಡಿದ್ದು ಬಿತ್ತನೆ ಕಾರ್ಯ ಮಾಡಲು ರೈತರು ಮುಂದಾಗಿದ್ದಾರೆ. ಏಳೆಂಟು ಗ್ರಾಮಗಳು ಅರ್ಕಾವತಿ ನದಿ ತೀರದಲ್ಲಿದ್ದು ನೀರಾವರಿ ಸೌಲಭ್ಯ ಹೊಂದಿವೆ, ಉಳಿದಂತೆ ಹೆಚ್ಚಿನ ಕೃಷಿ ಪ್ರದೇಶಗಳು ಮಳೆಯಾಶ್ರಿತವಾಗಿವೆ. ಹೆಚ್ಚಿನ ರೈತರು ಜೀವನೋಪಾಯಕ್ಕಾಗಿ ಪ್ರಮುಖವಾಗಿ ರಾಗಿ ಬೆಳೆ ಅವಲಂಬಿಸಿದ್ದು, ಉಪಕಸುಬಾಗಿ ರೇಷ್ಮೆ, ಹೈನುಗಾರಿಕೆಯಲ್ಲಿ ತೊಡಗಿದ್ದಾರೆ.

ಜತೆಗೆ ವಾಣಿಜ್ಯ ಬೆಳೆಯಾಗಿ ಮಾವು ಬೆಳೆಯುತ್ತಾರೆ. ಮಳೆಗಾಲದಲ್ಲಿ ರಾಗಿ ಬೆಳೆಯುವ ಪರಿಪಾಠ ಬೆಳೆಸಿಕೊಂಡಿರುವ ರೈತರು ರಾಗಿ ಜತೆಯಲ್ಲಿ ಸಾಲು ಬೆಳೆಗಳಾಗಿ ಅವರೆ, ಅಲಸಂದೆ, ತೊಗರಿ, ಹುಚ್ಚೆಳ್ಳು, ಜೋಳ ಬೆಳೆಯುತ್ತಾರೆ. ಕೃಷಿ ಇಲಾಖೆ ಅಂದಾಜಿನ ಪ್ರಕಾರ ಸುಮಾರು 2300 ಹೆಕ್ಟೇರ್‌ನಲ್ಲಿ ರಾಗಿ, 35 ಹೆಕ್ಟೇರ್‌ನಲ್ಲಿ ತೊಗರಿ, 115 ಹೆಕ್ಟೇರ್‌ನಲ್ಲಿ ಅಲಸಂದೆ, 90 ಹೆಕ್ಟೇರ್‌ನಲ್ಲಿ ಅವರೆ, 250 ಹೆಕ್ಟೇರ್‌ನಲ್ಲಿ ಹುರುಳಿ ಬಿತ್ತನೆ ಮಾಡಲು ರೈತರು ತಯಾರಿ ನಡೆಸಿದ್ದಾರೆ.

ಮುಂಗಾರು ಪೂರ್ವ ಮಳೆಗೆ ಸುಮಾರು 250 ಹೆಕ್ಟೇರ್ ಜಾನುವಾರು ಮೇವು, 5 ಹೆಕ್ಟೇರ್‌ನಲ್ಲಿ ಎಳ್ಳು, 20 ಹೆಕ್ಟೇರ್‌ನಲ್ಲಿ ಅಲಸಂದೆ, ಸುಮಾರು 200 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡಿದ್ದರು. ಕಳೆದ ಬಾರಿಗಿಂತ ಈ ಬಾರಿ ಎಂಆರ್-1, ಎಂಆರ್-6, ಜಿಪಿ-28 ತಳಿಯ ರಾಗಿ ಬಿತ್ತನೆ ಬೀಜವನ್ನು ಹೆಚ್ಚಿನ ಪ್ರಮಾಣದಲ್ಲಿ ಕೈಲಾಂಚ ರೈತ ಸಂಪರ್ಕ ಕೇಂದ್ರದಿಂದ ರಿಯಾಯಿತಿ ದರದಲ್ಲಿ ರೈತರು ಪಡೆದಿದ್ದಾರೆ. ಕೃಷಿ ಇಲಾಖೆ ಅಂದಾಜಿಗಿಂತಲೂ ಬಿತ್ತನೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಕೈಲಾಂಚ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು.

ಮುಂಗಾರು ಮಳೆ ರಾಗಿ ಬಿತ್ತನೆಗೆ ಸಹಕಾರಿಯಾದಂತೆ ಕಾಣುತ್ತಿದೆ. ಬಿತ್ತನೆ ಬೀಜ ಭೂಮಿಗೆ ಬಿತ್ತಲು ಕಳೆದ ತಿಂಗಳಿಂದಲೂ ಭೂಮಿ ಹಸನು ಮಾಡಿಕೊಂಡು ಬಂದಿದ್ದೆವು. ಕಳೆದ ಕೆಲವು ದಿನಗಳಿಂದ ಹದ ಮಳೆ ಸುರಿದ ಪರಿಣಾಮ ಬಿತ್ತನೆ ಪ್ರಾರಂಭಿಸಿದ್ದೇವೆ. ಭದ್ರಯ್ಯ ರೈತ, ಅಂಜನಾಪುರ ರೈತರಿಗೆ ಕೃಷಿ ಮಾಹಿತಿ ನೀಡಲು ಮತ್ತು ಉತ್ಪಾದಕತೆ ಹೆಚ್ಚಿಸಲು ಸರ್ಕಾರ ಕೃಷಿ ಇಲಾಖೆ ಮೂಲಕ ನೆರವಾಗುತ್ತಿದೆ. ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ, ಕೃಷಿ ಯಂತ್ರೋಪಕರಣಗಳನ್ನು ನೀಡುತ್ತಿದೆ. ರೈತರು ಅಧಿಕಾರಿಗಳಿಂದ ಮಾಹಿತಿ ಪಡೆದು ಸೌಲಭ್ಯ ಪಡೆದುಕೊಂಡು ಹೆಚ್ಚು ಉತ್ಪಾದನೆ ಮಾಡಬೇಕು. ಪ್ರದೀಪ್ ಕೃಷಿ ಅಧಿಕಾರಿ, ಕೈಲಾಂಚ ರೈತ ಸಂಪರ್ಕ ಕೇಂದ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net