ಯಾತ್ರಿಕರ ಸೇವೆಗಿಲ್ಲದ ‘ನಿವಾಸ’ಗಳು: ಕಾಮಗಾರಿ ಮುಗಿದಿದ್ದರೂ ಉದ್ಘಾಟನೆ ಭಾಗ್ಯವಿಲ್ಲ ಬಳಕೆ ಮುನ್ನವೇ 2 ಬಾರಿ ರಿಪೇರಿ

Kailancha - Ph-001-Avverahalli Revanasiddeswarabetta Athithi Gruha Kattada-7-3-2021
Published on

ಕೈಲಾಂಚ : ಹೋಬಳಿಯ ಪ್ರವಾಸಿ ತಾಣ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದ ಬಳಿ ಪ್ರವಾಸಿಗರು, ಭಕ್ತರ ಅನುಕೂಲಕ್ಕಾಗಿ ಕಟ್ಟಿದ ಕಟ್ಟಡಗಳು ಉದ್ಘಾಟನೆ ಕಾಣದಿರುವುದು ಪ್ರವಾಸೋದ್ಯಮ ಮತ್ತು ಧಾರ್ಮಿಕ ದತ್ತಿ ಇಲಾಖೆ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಕೂಡಲೆ ಇವುಗಳನ್ನು ಸೇವೆಗೆ ಮುಕ್ತಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಅವ್ವರಹಳ್ಳಿ ರೇವಣಸಿದ್ದೇಶ್ವರ ಬೆಟ್ಟ ಐತಿಹಾಸಿಕ ಕ್ಷೇತ್ರವಾಗಿದೆ. ರೇವಣ ಸಿದ್ದೇಶ್ವರರು ತಪ್ಪಸ್ಸನ್ನಾಚರಿಸಿದ ಸ್ಥಳ. ಹಲವಾರು ದೇವಾಲಯಗಳು ಕ್ಷೇತ್ರದಲ್ಲಿವೆ. ಪಾಂಡವರು ಅಜ್ಞಾತವಾಸ ಸಂಧರ್ಭದಲ್ಲಿ ಬೆಟ್ಟದಲ್ಲಿ ಕಾಲ ಕಳೆದಿದ್ದರು ಎಂಬ ಐತಿಹ್ಯವಿದೆ. ಭೀಮನಿಂದ ಪ್ರತಿಷ್ಠಾಪಿಸಲ್ಪಟ್ಟ ಮರುಳಸಿದ್ದೇಶ್ವರ ದೇವಾಲಯವು ಕ್ಷೇತ್ರದಲ್ಲಿದೆ.

ಸುಂದರ ಪರಿಸರದ ನಡುವೆ ಈ ಕ್ಷೇತ್ರವಿದ್ದು, ಪ್ರತಿನಿತ್ಯ ಸ್ಥಳೀಯರಲ್ಲದೆ, ರಾಜ್ಯ, ಹೊರ ರಾಜ್ಯಗಳಿಂದಲೂ ಅಧಿಕ ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದು ಎ-ಗ್ರೇಡ್ ದೇವಾಲಯವಾಗಿದ್ದು, ಪ್ರತಿವರ್ಷ ಸರ್ಕಾರಕ್ಕೆ ಲಕ್ಷಾಂತರ ರೂ. ಆದಾಯ ತಂದುಕೊಡುತ್ತದೆ. ಬೆಟ್ಟಕ್ಕೆ ಭೇಟಿ ನೀಡುವ ಭಕ್ತರು, ಪ್ರವಾಸಿಗರು ರಾತ್ರಿ ತಂಗಲು ಪ್ರವಾಸೋದ್ಯಮ ಇಲಾಖೆಯಿಂದ ಲಕ್ಷಾಂತರ ರೂ. ಖರ್ಚು ಮಾಡಿ 8 ವರ್ಷಗಳ ಹಿಂದೆ ಸುಸಜ್ಜಿತ ಯಾತ್ರಿ ನಿವಾಸ ಕಟ್ಟಲಾಗಿದೆ. ಆದರೆ, ಇದುವರೆಗೂ ಕಟ್ಟಡ ಉದ್ಘಾಟನೆ ಕೈಗೊಂಡಿಲ್ಲ. ಇದರ ಪಕ್ಕದಲ್ಲೇ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಮತ್ತೊಂದು ಕಟ್ಟಡ ನಿರ್ಮಾಣವಾಗಿದ್ದು, 2018ರಲ್ಲೇ ಕಾಮಗಾರಿ ಪೂರ್ಣಗೊಂಡಿದ್ದರೂ ಉದ್ಘಾಟನಾ ಭಾಗ್ಯ ಕಂಡಿಲ್ಲ.

ಹಾಳಾಗುತ್ತಿರುವ ಪೀಠೋಪಕರಣ: ಕಟ್ಟಡಗಳು ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆ ತಲುಪುತ್ತಿವೆ. ನಿರ್ವಹಣಿಯಿಲ್ಲದೆ, ಉದ್ಘಾಟನೆಯೂ ಆಗದೆ ಯಾತ್ರಿ ನಿವಾಸ ಕಟ್ಟಡವನ್ನು ಈಗಾಗಲೇ ಎರಡನೇ ಬಾರಿಗೆ ದುರಸ್ತಿ ಮಾಡಲಾಗಿದೆ. ಒಳಗಿರುವ ಪೀಠೋಪಕರಣ, ಹಾಸಿಗೆ, ಮಂಚಗಳು ಹಾಳಾಗುತ್ತಿವೆ. ಕಟ್ಟಡದ ಮೇಲ್ಛಾವಣಿ ಮೇಲೆ ಗಿಡಗಳು ಬೆಳೆಯುತ್ತಿವೆ.

ಕಟ್ಟಡವನ್ನು ಹೀಗೆ ಬಿಟ್ಟರೆ ಸರ್ಕಾರದ ಹಣ ಪೋಲಾಗುವುದರ ಜತೆಗೆ ಕಟ್ಟಡ ಹಾಳಾಗುವುದು ನಿಶ್ಚಿತ ಎಂಬುದು ಸ್ಥಳೀಯರ ಮಾತಾಗಿದೆ. ಕಟ್ಟಡ ಉದ್ಘಾಟನೆ ಇಂದು ಆಗುತ್ತದೆ, ನಾಳೆ ಆಗುತ್ತದೆ ಎಂದು ಅಧಿಕಾರಿಗಳು ಜನರ ಕಣ್ಣೊರೆಸುವ ಕೆಲಸ ಮಾಡುತ್ತಿದ್ದಾರೆ. ಬೆಟ್ಟಕ್ಕೆ ಬರುವ ಪ್ರವಾಸಿಗರು, ಭಕ್ತರು ರಾತ್ರಿ ವೇಳೆ ವಸತಿ ವ್ಯವಸ್ಥೆಯಿಲ್ಲದೆ ಮಳೆ, ಗಾಳಿ ಎನ್ನದೆ ಕಟ್ಟಡಗಳ ಹೊರಗೆ ವಸತಿ ಪಡೆಯಬೇಕಾಗಿದೆ. ಅಲ್ಲದೆ ಕಾಡು ಪ್ರಾಣಿಗಳ ಹಾವಳಿ ಬೇರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯಕ್ರಮ ಕೈಗೊಂಡು ಕಟ್ಟಡ ಉದ್ಘಾಟಿಸಿ ಬಳಕೆಗೆ ಮುಕ್ತಗೊಳಿಸಬೇಕು ಎಂದು ಅವ್ವೇರಹಳ್ಳಿ ಪ್ರಶಾಂತ್, ಸತೀಶ್, ದೇವರದೊಡ್ಡಿ ಗೋಪಾಲನಾಯ್ಕ, ನಾಗೋಹಳ್ಳಿ ಎನ್.ಎಸ್. ಲಿಂಗೇಗೌಡ, ಕೈಲಾಂಚ ಪ್ರಭು ಮುಂತಾದವರು ಆಗ್ರಹಿಸಿದ್ದಾರೆ.

ಧಾರ್ಮಿಕ ದತ್ತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸುಸಜ್ಜಿತ ಕಟ್ಟಡಗಳು ಬಳಕೆಯಾಗದೆ, ಜನರ ಹಣ ಪೋಲಾಗುತ್ತಿದೆ. ಈಗಾಗಲೇ ಕಟ್ಟಡಗಳು ಎರಡೆರಡು ಬಾರಿ ರಿಪೇರಿ ಕಂಡಿವೆ. ಅಧಿಕಾರಿಗಳು ವಿಳಂಬ ಮಾಡದೆ ಕಟ್ಟಡಗಳ ಉದ್ಘಾಟನೆಗೆ ಕ್ರಮ ಕೈಗೊಳ್ಳಬೇಕು. ನೆಲಮಲೆ ಗಂಗಾಧರ್ ಪೂಜಾರಿದೊಡ್ಡಿ ಈಗಾಗಲೇ ಎರಡೂ ಕಟ್ಟಡಗಳ ಉದ್ಘಾಟನೆಗೆ ತಯಾರಿ ನಡೆಸಿದ್ದು ದಿನಾಂಕ ನಿಗದಿಯಾಗುತ್ತಿದೆ. ಮುಂದಿನ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಕಟ್ಟಡ ಉದ್ಘಾಟನೆ ಕಾಣಲಿದೆ. ಯಶುರಾಜ್ ಆಡಳಿತಾಧಿಕಾರಿ, ರೇವಣಸಿದ್ದೇಶ್ವರಬೆಟ್ಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net