

ಕೋಲಾರ: ಜಿಲ್ಲಾ ಕಾಂಗ್ರೆಸ್‌ನ ಗುಂಪುಗಾರಿಕೆ ಮತ್ತೆ ಸೋಟಗೊಂಡಿದ್ದು, ಬೀದಿ ರಂಪಾಟಕ್ಕೆ ಶನಿವಾರ ಸಾಕ್ಷಿಯಾಯಿತು.
ನಗರ ಹೊರವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ಶನಿವಾರ ಕಾಂಗ್ರೆಸ್‌ನ ವಿವಿಧ ಘಟಕಗಳ ಪದಾಧಿಕಾರಿಗಳ ಸಭೆ ಆಯೋಜಿಸಲಾಗಿತ್ತು. ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು ಸಭೆ ಪ್ರಾರಂಭವಾಗುವ ಮುನ್ನವೇ ಸಭೆಯನ್ನು ನಗರದಿಂದ ಹೊರಗೆ ಆಯೋಜಿಸಲಾಗಿದೆ. ಇಲ್ಲಿಗೆ ಕಾರ್ಯಕರ್ತರು ಬರುವುದು ಕಷ್ಟಸಾಧ್ಯ, ಕನಿಷ್ಠಪಕ್ಷ ಒಂದು ಬ್ಯಾನರ್ ಸಹ ಕಟ್ಟಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ವೇದಿಕೆ ಮೇಲಿದ್ದ ಹೂವಿನ ಕುಂಡಗಳನ್ನು ಕೆಳಗೆ ತಳ್ಳಿ, ನೀರಿನ ಬಾಟಲ್ ಎಸೆದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಧ್ಯೆ ಪ್ರವೇಶಿಸಿದ ಶಾಸಕ ಕೆ.ವೈ.ನಂಜೇಗೌಡ ಹಾಗೂ ಜಿಲ್ಲಾ ಉಸ್ತುವಾರಿ ನಾರಾಯಣಸ್ವಾಮಿ ಅವರು ಪ್ರಸಾದ್ ಬಾಬು ಅವರನ್ನು ಸಮಾಧಾನಪಡಿಸಲು ಯತ್ನಿಸಿದರು. ಆದರೆ, ಶಾಸಕ ಹಾಗೂ ಉಸ್ತುವಾರಿ ಮಾತು ಕೇಳದ ಪ್ರಸಾದ್ ಬಾಬು, ಮತ್ತೊಂದು ಗುಂಪಿನ ಕಾರ್ಯಕರ್ತರ ನಡುವೆ ವಾಗ್ವಾದಕ್ಕೆ ಇಳಿದರು. ಈ ವೇಳೆ ಮಾತಿನ ಚಕಮಕಿ ನಡೆದು, ಕೈಕೈ ಮಿಲಾಯಿಸಿಕೊಂಡರು.
ಈ ವೇಳೆ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬೆಂಬಲಿಗರು ವೇದಿಕೆ ಮೇಲೆ ಹತ್ತಿ, ಪಕ್ಷ ಕಟ್ಟಿದವರಿಗೆ ಸಭೆಗೆ ಆಹ್ವಾನ ನೀಡಿಲ್ಲ. ಏಕೆ ತಾರತಮ್ಯ ಮಾಡಿದ್ದೀರಾ ಎಂದು ಪ್ರಶ್ನಿಸಿದರು. ವೇದಿಕೆ ಮೇಲಿದ್ದ ಕೆಲ ಮುಖಂಡರು ಕಾರ್ಯಕರ್ತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಪರಿಸ್ಥಿತಿ ತಿಳಿಯಾಗಲಿಲ್ಲ.
ವೇದಿಕೆ ಮೇಲೆಯೇ ಜಗಳ:
ರಮೇಶ್‌ಕುಮಾರ್ ಬೆಂಬಲಿಗರು ವೇದಿಕೆ ಮೇಲಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು ಅವರನ್ನು ಕೆಳಗೆ ತಳ್ಳಿ ಕಾರ್ಯಕ್ರಮದಿಂದ ಹೊರ ಹೋಗುವಂತೆ ತಾಕೀತು ಮಾಡಿದರು. ಆಗ ಮತ್ತೆ ಮಾತಿನ ಚಕಮಕಿ ನಡೆಯಿತು. ಇದ್ದಕ್ಕಿದ್ದಂತೆ ಲಕ್ಷ್ಮೀನಾರಾಯಣ, ಪ್ರಸಾದ್ ಬಾಬು ಅವರನ್ನು ಬಲವಂತವಾಗಿ ಕೆಳಗೆ ತಳ್ಳಿದರು. ಆಗ ಲಕ್ಷ್ಮೀನಾರಾಯಣ ಅವರು ಕಾರ್ಯಕ್ರಮದಿಂದ ಸ್ವಲ್ಪ ಹೊತ್ತು ಹೊರನಡೆದಾದರೂ ಪ್ರಸಾದ್ ಬಾಬು ಎದುರು ಗುಂಪಿನವರ ಮೇಲೆ ಪ್ರತಿರೋಧ ವ್ಯಕ್ತಪಡಿಸಿದರು. ಪಟ್ಟು ಬಿಡದ ಇನ್ನೊಂದು ಬಣ ಪ್ರಸಾದ್‌ಬಾಬು ಅವರನ್ನೂ ವೇದಿಕೆಯಿಂದ ಕೆಳ ತಳ್ಳಿತು.
ಮಾಹಿತಿ ಇಲ್ಲ: ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್, ಶ್ರೀನಿವಾಸಪುರ, ಮುಳಬಾಗಿಲು ಹಾಗೂ ಕೋಲಾರದಲ್ಲಿರುವ ವಿವಿಧ ಘಟಕಗಳ ಪದಾಧಿಕಾರಿಗಳಿಗೂ ಸಭೆಯ ಮಾಹಿತಿ ನೀಡಿಲ್ಲ. ಇಲ್ಲಿ ತಾರತಮ್ಯ ನಡೆದಿದೆ ಎಂದು ಆರೋಪಿಸಿ ಕೆಲವರು ವೇದಿಕೆಗೆ ಏರಿದರು. ಆಗ ಎರಡೂ ಗುಂಪುಗಳ ಕಾರ್ಯಕರ್ತರ ನಡುವೆ ನೂಕುನುಗ್ಗಲಾಯಿತು. ಇದು ವೇದಿಕೆಯ ಮೇಲಿದ್ದ ಮುಖಂಡರನ್ನು ಮುಜುಗರಕ್ಕೀಡುಮಾಡಿತು.
ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಹಾಗೂ ಮಾಜಿ ಎಂಎಲ್ಸಿ ಎಂ.ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಭೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ಶಾಸಕರಾದ ಕೆ.ವೈ.ನಂಜೇಗೌಡ, ಕೊತ್ತೂರು ಮಂಜುನಾಥ್, ಪರಿಷತ್ ಸದಸ್ಯ ಅನಿಲ್ ಕುಮಾರ್ ಹಾಜರಿದ್ದರು. ಇವರ ಸಮ್ಮುಖದಲ್ಲೇ ಗಲಾಟೆಯಾಗಿದ್ದು, ನಜೀರ್ ಅಹ್ಮದ್ ಅವರು ಎರಡೂ ಗುಂಪಿನ ಕಾರ್ಯಕರ್ತರನ್ನು ಸಮಾಧಾನಪಡಿಸಿ, ಸಭೆಯನ್ನು ಮುಂದುವರಿಸಿದರು.