ಕಗ್ಗದ ಬೆಳಕು; ನಮ್ಮ ಬಾಳು ಬರಿಯ ಸಮಸ್ಯೆಯೆ?

Kaggada Belaku vvani
Published on
ನರಪರೀಕ್ಷೆಯೆ ಬೊಮ್ಮನಾಶಯವೆ? ನಮ್ಮ ಬಾಳ್ |

ಬರಿ ಸಮಸ್ಯೆಯೆ? ಅದರ ಪೂರಣವದೆಲ್ಲಿ? ||

ಸುರಿದು ಪ್ರಶ್ನೆಗಳನುತ್ತರವ ಕುಡೆಬಾರದನ |

ಗುರುವೆಂದು ಕರೆಯುವೆಯ? - ಮಂಕುತಿಮ್ಮ ||

‘ಮನುಜನ ಪರೀಕ್ಷೆಯೇ ವಿಧಿಯ ಆಶಯವೇ? ನಮ್ಮ ಬಾಳಿನಲ್ಲಿ ಸಮಸ್ಯೆಯೇ ತುಂಬಿದೆಯೇ? ಅದಕ್ಕೆ ಪರಿಹಾರ ಎಲ್ಲಿ? ಒಂದಷ್ಟು ಪ್ರಶ್ನೆಗಳನ್ನು ಸುರಿದು, ಯಾವುದಕ್ಕೂ ಉತ್ತರಿಸಲು ಬರದವನನ್ನು ಗುರುವೆಂದು ಕರೆಯುವೆಯಾ?’ ಎಂದು ಕೇಳುತ್ತದೆ ಈ ಕಗ್ಗ.

ಭಗವಂತನ ಸೃಷ್ಟಿಯೊಳಗೆ ಮಾನವನು ಕೆಲವು ವಿಶೇಷ ಗುಣಗಳನ್ನು ಪಡೆದಿದ್ದಾನೆ. ಚಿಕಿತ್ಸಕ ಬುದ್ಧಿಯಿಂದ ಯೋಚಿಸಬಲ್ಲ, ಭಾವನೆಗಳನ್ನು ವ್ಯಕ್ತಪಡಿಸಬಲ್ಲ, ಪರಿಣಾಮವನ್ನು ಊಹಿಸಿ ಕಾರ್ಯಪ್ರವೃತ್ತನಾಗಬಲ್ಲ. ತನ್ನ ಸುತ್ತ ನೂರೆಂಟು ರಹಸ್ಯಗಳಿರುವುದನ್ನು ಕಂಡು ಬೆರಗಾಗುತ್ತಾನೆ.

ತನ್ನದೇ ಜೀವನವೂ ತಾನು ಬಗೆದಂತೆ ಇಲ್ಲವೆಂದರಿತು ದಿಗಿಲುಗೊಳ್ಳುತ್ತಾನೆ. ಅನೇಕ ಸಮಸ್ಯೆ, ನೋವು-ಸಂಕಟಗಳನ್ನು ಅನುಭವಿಸುತ್ತ, ಉತ್ತರವಿರದ ಪ್ರಶ್ನೆಗಳೆದುರು ಚಡಪಡಿಸುತ್ತಾನೆ. ಹೀಗೆ ಪರಿಸ್ಥಿತಿ ಕೈಮೀರಿ, ಯಾವುದೂ ಅರ್ಥವಾಗುವುದಿಲ್ಲ ಎಂದಾದಾಗ ಜೀವನೋತ್ಸಾಹ ಕಳೆದುಕೊಳ್ಳುವುದು, ಹತಾಶನಾಗುವುದು ಸಾಮಾನ್ಯ.

ಸೃಷ್ಟಿಯನ್ನು ನಿರ್ವಿುಸಿದ ಪರಬ್ರಹ್ಮನು ತನ್ನದೇ ನಿರ್ವಿುತಿಯಲ್ಲಿ ಯಾಕೆ ಕುಂದು-ಕೊರತೆ, ನೋವು-ನಿರಾಶೆಗಳನ್ನಿಟ್ಟ? ಕಾಲನೆಂಬ ಪಾರುಪತ್ಯದವನ ಸುಪರ್ದಿಯಲ್ಲಿ ಎಲ್ಲ ಜೀವಗಳನ್ನೂ ಅದೆತ್ತಲೋ ಅಟ್ಟುತ್ತಿರುವುದಾದರೂ ಏಕೆ? ಸುಖದ ಹಿಂದೆಯೇ ಅಪ್ಪಳಿಸುವ ದುಃಖ, ಗೆಲುವಿನ ಸಂತಸವನ್ನು ಒರೆಸಿಬಿಡುವ ಸೋಲಿನ ಬದುಕನ್ನೇಕೆ ಜೀವಗಳಿಗೆ ನೀಡಿದ್ದಾನೆ? ಹೀಗೆ ಮನುಷ್ಯನನ್ನು ಸದಾ ಪರೀಕ್ಷೆಗೊಡ್ಡುವುದೇ ದೇವನ ಇಚ್ಛೆಯೇ? ಪರಿಹಾರವಿಲ್ಲದ ಸವಾಲುಗಳನ್ನು, ಉತ್ತರ ಸಿಗದ ಪ್ರಶ್ನೆಗಳನ್ನು ನಮ್ಮ ಮುಂದೆ ಸುರುವಿ ಆತನೆಲ್ಲೋ ಮರೆಯಲ್ಲೇ ಉಳಿದುಬಿಡುವುದಾದರೂ ಯಾಕೆ?

ಮನುಷ್ಯಜೀವಿತವು ಇರುಳ ದಾರಿಯಲ್ಲಿ ತಡಕಾಡುತ್ತ, ಏಳು-ಬೀಳುಗಳಲ್ಲಿ ಹೊರಳಾಡುತ್ತ ಭಯದಿಂದ ಮುನ್ನಡೆಯುತ್ತಿದೆ. ಹೀಗಿರುತ್ತ ಒಂದಷ್ಟು ಉತ್ತರವಿರದ ಪ್ರಶ್ನೆಗಳನ್ನು ಮನುಷ್ಯರ ಮುಂದೆ ಹರವಿ, ಯಾವ ಸಂದೇಹ-ಸಂಕಟಗಳನ್ನೂ ಪರಿಹರಿಸಲು ಬಾರದೇ ಉಳಿದವನನ್ನು ಗುರು ಎಂದು ಒಪ್ಪಿಕೊಳ್ಳುವುದಾದರೂ ಹೇಗೆ? ಈ ಬಗೆಯ ಜಿಜ್ಞಾಸೆಗಳು ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತವೆ. ಹಾಗಾಗಿ ಮಾನವನು ಅವಿಶ್ವಾಸದಿಂದಲೇ ಬದುಕಿನ ಪ್ರತಿಕ್ಷಣಗಳನ್ನು ಎದುರಿಸುತ್ತಾನೆ. ತನ್ನನ್ನೇ ತಾನು ನಂಬದಂತಾಗುತ್ತಾನೆ.

ಭಗವಂತ ತಾಯಿಯಂತೆ ಕಾಪಾಡುತ್ತಾನೆ, ಕಾಪಾಡಬೇಕೆನ್ನುವ ನಾವು, ಮಗುವಿನ ಶುದ್ಧ ಮನಸ್ಸನ್ನು ಹೊಂದಿದ್ದೇವೆಯೆ? ನಮ್ಮ ನಂಬಿಕೆಯ ಬೇರುಗಳು ದೃಢವಾಗಿವೆಯೇನು? ಎಲ್ಲೆಡೆ ದೇವರಿದ್ದಾನೆ, ದೇವರೇ ಮುನ್ನಡೆಸುತ್ತಾನೆ, ಎಲ್ಲವೂ ಅವನಿಂದಲೇ ಎಂಬ ಮಾತುಗಳನ್ನೇನೋ ಉದ್ಧರಿಸುತ್ತೇವೆ. ಆದರೆ ನಿಜವಾಗಿ ಅದನ್ನು ಅನುಸರಿಸುತ್ತಿದ್ದೇವೆಯೇ? ಇಲ್ಲ. ಯಾವಾಗ ನಮ್ಮ ನಂಬಿಕೆ ಪೂರ್ವನಿರ್ಣಯದಿಂದ ಪೀಡಿತವಾಗಿರದೆ, ಸ್ಪಷ್ಟತೆ ಹೊಂದಿರುತ್ತದೆಯೋ ಆಗ ಲೋಕವು ಚೈತನ್ಯಯುತವಾಗಿ ಕಾಣುತ್ತದೆ. ಜೀವನದ ಗತಿ ಅರ್ಥವಾಗುತ್ತದೆ.

ಗುರುವು ಗುರಿಯವರೆಗೆ ಕೈ ಹಿಡಿದು ನಡೆಸುವುದಿಲ್ಲ. ಗುರಿ ಯಾವುದೆಂದು ತಿಳಿಸಿ, ಅಲ್ಲಿಗೆ ಹೋಗುವ ದಾರಿ ತೋರುತ್ತಾನೆ, ಅದಕ್ಕೆ ಅರ್ಹರನ್ನಾಗಿಸುತ್ತಾನೆ. ಆದರೆ ಯಾವಾಗ ಗುರುವಿನ ನಡೆ, ನುಡಿಗಳನ್ನು ಸಂದೇಹದಿಂದ ಕಾಣಲಾರಂಭಿಸುತ್ತೇವೋ ಆಗ ಆತ ತೋರಿದ ದಾರಿ ಅಸ್ಪಷ್ಟವಾಗುತ್ತದೆ.

ಮನಸ್ಸು ಸಮಚಿತ್ತ ಕಳೆದುಕೊಂಡು ಭಾವೋದ್ವೇಗಕ್ಕೆ ಒಳಗಾಗುತ್ತದೆ. ಇದರಿಂದಾಗಿ ಜೀವನ ಇನ್ನಷ್ಟು ಗೋಜಲಾಗುತ್ತದೆ. ಹೀಗಾಗದಿರಲು ಅಂತರಾತ್ಮಕ್ಕೆ ತಿಳಿದ ಸತ್ಯವನ್ನು ಅಚಲವಾಗಿ ನಂಬಬೇಕು. ತನ್ನೊಳಗನ್ನು ಪರಿಕಿಸುತ್ತ ದೌರ್ಬಲ್ಯಗಳನ್ನು ತೊಡೆಯಬೇಕು. ಒಳಗಣ್ಣಿನಿಂದ ಜಗತ್ತನ್ನು ನೋಡಿದಾಗ ಮನದ ಪ್ರಶ್ನೆಗಳಿಗೆ ಉತ್ತರ ಲಭ್ಯವಾಗುತ್ತವೆ, ಸಮಸ್ಯೆಗಳು ಪರಿಹರಿಸಲ್ಪಡುತ್ತವೆ, ವ್ಯಕ್ತಿತ್ವ ಉದಾತ್ತವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net