

ಎಲೆಗಳನು ಕಡ್ಡಿ, ಕಡ್ಡಿಯ ರೆಂಬೆಕೊಂಬೆಗಳು |
ತಳೆದು ಪೆರ್ಚಿಸುತಿಹವು ಮರದ ಬಾಳ್ಸಿರಿಯ ||
ಸ್ಥಲವೊಂದು ನಿನಗಿಹುದು ವಿಶ್ವವೃಕ್ಷದೊಳಂತು |
ಹಳಿಯದಿರು ನಿನ್ನಿರವ - ಮಂಕುತಿಮ್ಮ ||
ರೆಂಬೆ-ಕೊಂಬೆಗಳನ್ನು ವಿಸ್ತಾರವಾಗಿ ಹರಡಿ ಮುಗಿಲೆತ್ತರ ಬೆಳೆದು ನಿಂತ ಮರವು ರಮಣೀಯವಾಗಿ ಕಂಗೊಳಿಸುತ್ತದೆ. ಬಲಿಷ್ಠವಾಗಿ ಬೆಳೆದ ಕಾಂಡ, ಅದರ ಗೆಲ್ಲುಗಳು, ಬಿಳಲು-ಕಡ್ಡಿಗಳು ಪ್ರತಿದಿನವೂ ಹೊಸ ಚಿಗುರನ್ನು ಚಿಗುರಿಸುತ್ತವೆ. ಹಣ್ಣಾದ ಎಲೆಗಳನ್ನು ಉದುರಿಸುತ್ತಿರುತ್ತದೆ. ಹೀಗೆ ಕಾಯಿ-ಹಣ್ಣುಗಳ ಮೇಳನದಲ್ಲಿ, ನೆಲದಾಳಕ್ಕಿಳಿದ ಬೇರುಗಳ ಆಧಾರದಲ್ಲಿ ಮರವು ಸಮೃದ್ಧವಾಗಿ ಬೆಳೆಯುತ್ತದೆ. ಮರದಲ್ಲಿರುವ ಪ್ರತಿ ಎಲೆ, ಕಡ್ಡಿಗಳು ಕೂಡ ಮರದ ಬಾಳುವಿಕೆಗೆ ಮತ್ತು ಬೆಳೆಯುವಿಕೆಗೆ ಅತ್ಯಗತ್ಯ.
ಪ್ರಕೃತಿಯಲ್ಲಿರುವ ಸಾಮಾನ್ಯ ವೃಕ್ಷದಂತೆಯೇ ವಿಶ್ವವೆನ್ನುವ ವೃಕ್ಷವು ಅಗೋಚರವಾಗಿ ಎಲ್ಲವನ್ನೂ ಒಳಗೊಂಡು ವಿಶಾಲವಾಗಿ ಬೆಳೆದಿದೆ, ಬೆಳೆಯುತ್ತಲೇ ಇದೆ. ಈ ವಿಶ್ವವೃಕ್ಷವನ್ನು ಜ್ಞಾನಿಗಳು ಬ್ರಹ್ಮಾಶ್ವತ್ಥ, ವಿಶ್ವಾಶ್ವತ್ಥ ಎಂದು ಕರೆದರು. ಅದು ಉಳಿದ ತರುಗಳಂತೆ ಬಾನಿನತ್ತ ಮುಖ ಮಾಡಿ, ನೆಲದಾಳಕ್ಕೆ ಬೇರುಗಳನ್ನಿಳಿಸಿ ಬೆಳೆದು ನಿಂತದ್ದಲ್ಲ. ಬ್ರಹ್ಮಾಶ್ವತ್ಥದ ಬೇರುಗಳು ಮೇಲ್ಭಾಗಕ್ಕೆ ಚಾಚಿಕೊಂಡು, ವ್ಯೋಮದಲ್ಲಿ ಹರಡಿದೆ. ರೆಂಬೆಕೊಂಬೆ, ಬಿಳಲು-ಎಲೆಗಳು ವಸುಂಧರೆಯತ್ತ ಚಾಚಿವೆ. ಅಸಂಖ್ಯ ಜೀವರಾಶಿಗಳು ಈ ವಿಶ್ವಾಶ್ವತ್ಥದ ಶಾಖೆಶಾಖೆಗಳಲ್ಲಿ ಚಿಗುರಾಗಿ, ಎಲೆಯಾಗಿ, ಹೊಂದಳಿರ ಪಲುಕಾಗಿ ಕಂಗೊಳಿಸುತ್ತವೆ. ಮರದಲ್ಲಿ ಸದಾ ಅಲುಗುತ್ತಿರುವ ಎಲೆಗಳಿಗೆ ಬೇರುಗಳೇ ಪೋಷಕ. ರೆಂಬೆ-ಕೊಂಬೆ, ಕಡ್ಡಿ-ಕಡ್ಡಿಗಳು ಎಲೆಗಳನ್ನು ಹಿಡಿದುಕೊಂಡಿರುವಂತೆಯೇ ಬ್ರಹ್ಮಚೈತನ್ಯವೊಂದು ವಿಶಾಲ ವಿಶ್ವವನ್ನು ಧರಿಸಿ ಪೋಷಿಸುತ್ತಿದೆ. ಜೀವನು ಆ ವಿಶಾಲ ವೃಕ್ಷದ ಒಂದಂಶವಾಗಿ ಮತ್ತೆಮತ್ತೆ ಹುಟ್ಟುತ್ತ ತನ್ನನ್ನು ತಾನು ಉದ್ಧರಿಸಿಕೊಳ್ಳುತ್ತ ಪರಮಾತ್ಮನತ್ತ ಚಲಿಸುತ್ತಿದ್ದಾನೆ. ಜೀವನು ದೇವನನ್ನು ಸೇರಬೇಕಾದರೆ ಜಗತ್ತು ಎಂಬ ಸೇತುವನ್ನು ದಾಟಲೇಬೇಕು. ಹಾಗಾಗಿ ವಿಶ್ವದ ಎಲ್ಲ ಜೀವರುಗಳು, ಅವುಗಳ ಸಂಸಾರ, ಬದುಕು ಎಲ್ಲವೂ ಭಗವಂತನಿಗೇ ಸೇರಿದುದು. ಆತನೊಳಗೆ, ಆತನನ್ನು ಆಧರಿಸಿಯೇ, ಆತನಿಂದಲೇ ವಿಶ್ವದ ಜೀವನ. ಇಲ್ಲಿ ಯಾವುದೂ ವ್ಯರ್ಥವಲ್ಲ. ಪ್ರತಿಯೊಂದಕ್ಕೂ ನಿಸರ್ಗದತ್ತ ಕರ್ತವ್ಯಗಳಿವೆ. ತನ್ನ ಅಸ್ತಿತ್ವವನ್ನು ಹಳಿದುಕೊಳ್ಳುತ್ತ ದುಃಖಿತರಾಗಿರುವ ಅನೇಕರು ಸಮಾಜದಲ್ಲಿದ್ದಾರೆ. ದಕ್ಕದ ಕನಸುಗಳನ್ನು ನೆನೆದೋ, ನಿರಾಶೆ-ನೋವುಗಳಿಗೆ ನಲುಗಿಯೋ ತನ್ನನ್ನು ತಾನು ಕೀಳೆಂದು ಪರಿಗಣಿಸಿ ಖಿನ್ನರಾಗುವುದು ಸರಿಯಲ್ಲ. ಬದುಕಿಗೆ ಲಭ್ಯವಾದ ಅವಕಾಶಗಳು ಭಗವಂತನ ಕೃಪೆ ಎಂದರಿತು ಲೋಕಹಿತಕ್ಕಾಗಿ ತುಡಿಯುವ ಜೀವಗಳು ವಿಶ್ವವೃಕ್ಷದ ಐಸಿರಿಯನ್ನು ಹೆಚ್ಚಿಸುತ್ತವೆ. ಪರೋಪಕಾರ, ಪ್ರತಿಸ್ಪಂದನೆ, ಪ್ರೇಮಭಾವಗಳಿಂದ ಬಾಳಿದಾಗ ಬದುಕು ಆಪ್ತವೆನ್ನಿಸುತ್ತದೆ.
ವಿಶ್ವವೃಕ್ಷದಲ್ಲಿ ಎಲ್ಲರಿಗೂ ಒಂದಲ್ಲ ಒಂದು ಸ್ಥಾನವಿದೆ. ವಿಶ್ವಚೈತನ್ಯದ ರಕ್ಷಣೆಯಲ್ಲಿ ಬಾಳುವ ಸೌಭಾಗ್ಯ ದೊರೆತಿರುವುದು, ವಿವೇಕವುಳ್ಳ, ಸಂವಹನದ ಸಾಮರ್ಥ್ಯವುಳ್ಳ ಮನುಷ್ಯರಾಗಿ ಹುಟ್ಟಲು ಅಪಾರ ಪುಣ್ಯಬಲ ಬೇಕು. ದೇವರ ಸದುದ್ದೇಶವನ್ನು ಪೂರೈಸುವುದಕ್ಕೆ, ಆತನ ಸಂಕಲ್ಪದಂತೆಯೇ ನಡೆಯುವ ಸತ್ಕಾರ್ಯಗಳ ಮೂಲಕ ಲೋಕಹಿತವನ್ನು ಸಾಧಿಸುವುದಕ್ಕೆ ಸಾಧನವಾಗುವ ಸದವಕಾಶವೇ ಬದುಕಿನ ಭಾಗ್ಯ. ವಿಶ್ವ ವೃಕ್ಷದ ಪುಟ್ಟ ಭಾಗವಾಗಿ, ಅದನ್ನು ಬೆಳೆಸುವುದರಲ್ಲಿ ನಾವೆಲ್ಲ ಜೊತೆಗೂಡಿದ್ದೇವೆ ಎನ್ನುವ ಸತ್ಯದ ಅರಿವಿನಿಂದ ವಿನಮ್ರರಾಗುತ್ತೇವೆ. ವಿಶಾಲ ವಿಶ್ವವು ತನ್ನದೇ ಕುಟುಂಬ ಎನ್ನುವ ಆತ್ಮೀಯತೆ ಸಹಜ ಸ್ವಭಾವವಾಗುತ್ತದೆ.