ಕಗ್ಗದ ಬೆಳಕು: ಬದುಕೆಂಬ ನಾಟಕದಲ್ಲಿ ಜೀವವಿಹಾರ

Kaggada Belaku vvani
Published on

ವಹಿಸು ಕೆಲಭಾರಗಳ; ಸಹಿಸು ಕೆಲ ನೋವುಗಳ |

ಪ್ರಹರಿಸರಿಗಳನನಿತು ಯುಕ್ತಗಳನರಿತು ||

ಮಹಿಯ ನಾಟಕದಿ ನೀಂ ಮನಸಿಟ್ಟು ಕುಣಿಕುಣಿದು |

ವಿಹರಿಸಾತ್ಮಾಲಯದಿ - ಮಂಕುತಿಮ್ಮ ||

‘ಕೆಲ ಭಾರಗಳನ್ನು ವಹಿಸು. ಕೆಲವು ನೋವುಗಳನ್ನು ಸಹಿಸು. ಶತ್ರುಗಳ ಜತೆ ಯುಕ್ತವನ್ನರಿತು ವ್ಯವಹರಿಸು. ಭೂಮಿಯ ನಾಟಕದಲ್ಲಿ ಮನಸ್ಸಿಟ್ಟು ಕುಣಿದು ಆತ್ಮವೆಂಬ ಆಲಯದಲ್ಲಿ ವಿಹರಿಸು’ ಎನ್ನುತ್ತದೆ ಈ ಕಗ್ಗ.

ಪ್ರಕೃತಿಯಲ್ಲಿರುವ ಜೀವ-ಜಡ ರೂಪಗಳೆಲ್ಲ ಒಂದಲ್ಲೊಂದು ರೀತಿಯಲ್ಲಿ ಉಪಯುಕ್ತವಾಗಿವೆ, ಅವುಗಳದೇ ಆದ ಕರ್ತವ್ಯವನ್ನು ನಿಭಾಯಿಸುತ್ತಿರುತ್ತವೆ. ನಿಸರ್ಗದ ವರ್ತಲವು ಹೀಗೆ ಸಂಯೋಜಿತವಾಗಿದ್ದರಷ್ಟೇ ನೆಲವು ಸುಭಿಕ್ಷವಾಗಿರುತ್ತದೆ. ಈ ವ್ಯವಸ್ಥೆ ಹದ ತಪ್ಪದಂತೆ ಪ್ರಕೃತಿಯು ಎಚ್ಚರದಿಂದ ಕಾಯುತ್ತದೆ. ಮನುಷ್ಯನೂ ವಿಧಾತನ ಈ ಸಂಯೋಜನೆಗೆ ಒಳಪಟ್ಟಿದ್ದಾನೆ. ಸೃಷ್ಟಿಯದ್ಭುತಗಳಿಗೆ ಹೋಲಿಸಿದರೆ ಏನೂ ಅಲ್ಲದ, ಉಳಿದ ಪ್ರಾಣಿಗಳಷ್ಟು ಬಲಿಷ್ಠನೂ ಆಗಿರದ ಮನುಷ್ಯನು ಬುದ್ಧಿಬಲದಿಂದಾಗಿ ವಿಶೇಷ ಅರ್ಹತೆ ಪಡೆದಿದ್ದಾನೆ. ಭಾವ-ಬುದ್ಧಿಗಳನ್ನುಪಯೋಗಿಸಿ ಲೋಕಹಿತ ಕಾಪಾಡುವ ಕರ್ತವ್ಯ ಮನುಷ್ಯನ ಮೇಲಿದೆ. ಆದರೆ ಜನತೆ ತಮ್ಮ ನಿಜಸಾಮರ್ಥ್ಯ ಮತ್ತು ತಮ್ಮ ಗುರುತರ ಹೊಣೆಯ ಬಗೆಗೆ ಅರಿಯದೆ ಮೂಢರಂತೆ ವರ್ತಿಸುತ್ತಾರೆ. ಹಾಗಾಗಿಯೇ ಬದುಕು ಭಾರವೆನಿಸುತ್ತದೆ. ವ್ಯರ್ಥ ಜೀವನವೆಂದು ಖಿನ್ನರಾಗುತ್ತಾರೆ, ತಮ್ಮ ಅಭಿಪ್ರಾಯವನ್ನು ಸಾರ್ವತ್ರಿಕಗೊಳಿಸುವುದೂ ಇದೆ. ಜೀವನವೆಂದರೆ ಹೋರಾಟ, ಕುತೂಹಲಗಳ ಆಗರ. ಉತ್ಸಾಹದಿಂದ ನಡೆಯಲು ಹೊರಟವನಿಗೆ ಮಾತ್ರ ಸುತ್ತಲಿನ ಪರಿಸರವು ಚೇತೋಹಾರಿಯಾಗಿ ಕಾಣಿಸಬಹುದು. ನಿಂತೇ ಇದ್ದರೆ ಮನಸ್ಸು ಉದಾಸವಾಗುತ್ತದೆ.

ಪ್ರತಿಯೊಬ್ಬರೂ ಭವಿತವ್ಯದ ಬಗೆಗೆ ಹಲವು ಕನಸು-ಕಲ್ಪನೆಗಳನ್ನು ಹೆಣೆದುಕೊಳ್ಳುತ್ತಾರಾದರೂ ಅವೆಲ್ಲ ಈಡೇರುವುದಿಲ್ಲ. ಬದುಕು ಬಂದಂತೆ ಸ್ವೀಕರಿಸುವ ಅನಿವಾರ್ಯತೆಯಲ್ಲಿ ಮನಸ್ಸು ಸೋಲದಂತೆ ಎಚ್ಚರ ವಹಿಸಬೇಕು. ಇಹದ ಬದುಕಿಗೆ ಬಂದ ಮೇಲೆ ಕೆಲವೊಂದು ಭಾರ, ಜವಾಬ್ದಾರಿಗಳನ್ನು ಹೊರಲೇಬೇಕು. ಏಕೆಂದರೆ ಈ ಎಲ್ಲದಕ್ಕೂ ಮೂಲವಾದದ್ದು ಆತ್ಮ. ಅದು ಜೀವದೆಶೆ ಪಡೆದು ಬಂದಿದ್ದರಿಂದ ಕೆಲವು ಜವಾಬ್ದಾರಿಗಳಿವೆ. ಇಲ್ಲಿ ಪಾಪ-ಪುಣ್ಯಗಳ ಲೆಕ್ಕಾಚಾರವೂ ಉಂಟು. ಪೂರ್ಣತ್ವವನ್ನು ಸೇರಲು ಬೇಕಾದ ಪುಣ್ಯವನ್ನು ಸಂಚಯಿಸಿ, ಕರ್ಮದೋಷಗಳಿಂದ ಮುಕ್ತವಾಗುವುದಕ್ಕೆ ಭೂಮಿಯ ಬದುಕು ನೆರವಾಗುಗುತ್ತದೆ. ಆ ಸಂದರ್ಭಗಳಲ್ಲಿ ಸ್ವಾಭಾವಿಕವಾಗಿ ಕಷ್ಟ, ನೋವು, ನಿರಾಶೆಗಳು ಎದುರಾಗುತ್ತವೆ. ಬದುಕಿನ ಪ್ರತಿಕೂಲ ಪರಿಸ್ಥಿತಿಗಳನ್ನು ಸಂಯಮದಿಂದ ಎದುರಿಸುವುದೇ ನೈಜ ಸಾಮರ್ಥ್ಯ.

ಲೋಕಸಂಸಾರದಲ್ಲಿ ಭಿನ್ನಾಭಿಪ್ರಾಯಗಳು, ಹಗೆತನ, ಮಾತ್ಸರ್ಯ, ತಿರಸ್ಕಾರದ ನಡತೆಗಳು ಸಹಜವಾದರೂ ಅವನ್ನೆಲ್ಲ ಯುಕ್ತ ರೀತಿಯಿಂದ ಪರಿಹರಿಸಿಕೊಳ್ಳುವ ಪ್ರಜ್ಞೆ ವ್ಯಕ್ತಿಯಲ್ಲಿರಬೇಕು. ಕೋಪದ ಮೂಲವನ್ನು ತಿಳಿಯುವ ಮತ್ತು ರಾಗ-ದ್ವೇಷಕ್ಕೆ ಒಳಗಾಗದ ಸ್ಥಿರಚಿತ್ತವು ಪ್ರತಿ ಸನ್ನಿವೇಶವನ್ನೂ ಅರ್ಥೈಸಿಕೊಳ್ಳುತ್ತದೆ. ಶತ್ರುವಿನಲ್ಲಿರುವ ಶತ್ರುಭಾವವನ್ನು ನಿಗ್ರಹಿಸಲು ಶ್ರೇಷ್ಠ ಮಾರ್ಗವನ್ನು ಅನುಸರಿಸುತ್ತದೆ. ಜೀವನಸಂಗ್ರಾಮದಿಂದಾಗಿ ಬಂಧನಗಳನ್ನು ತೊಡೆದುಕೊಂಡು ಮುಂದುವರಿಯಲು ಆತ್ಮಕ್ಕೆ ಸಾಧ್ಯವಾಗುತ್ತದೆ. ಆದುದರಿಂದ ಜೀವರುಗಳೆಲ್ಲ ಭೂಮಿಯೆಂಬ ರಂಗಸ್ಥಳದಲ್ಲಿ ಕುಣಿಯುವ ಪಾತ್ರಧಾರಿಗಳು. ಸೂತ್ರಧಾರಿಯಾದ ವಿಧಾತನು ಅವ್ಯಕ್ತವಾಗಿದ್ದೇ ನಿನ್ನೆ-ಇಂದು-ನಾಳೆಗಳ ನಾಟಕವನ್ನು ನಿರ್ದೇಶಿಸುತ್ತಿದ್ದಾನೆ. ಅವನ ಇಚ್ಛೆ ಏನು ಎಂದು ತಿಳಿಯದೆ ಸೂತ್ರದ ಗೊಂಬೆಗಳಂತೆ ಕುಣಿಯುವುದಷ್ಟೇ ಜೀವರ ಕರ್ತವ್ಯ. ಭಾವೋದ್ವೇಗಕ್ಕೆ, ಇಂದ್ರಿಯಾಭಿಲಾಷೆಗಳಿಗೆ ಒಳಗಾಗದೆ ವಿವೇಚನೆಯಿಂದ ನಡೆದುಕೊಳ್ಳುವ ಆತ್ಮಪ್ರಜ್ಞೆ ಎಚ್ಚೆತ್ತುಕೊಳ್ಳಬೇಕು. ವ್ಯಕ್ತಿಯು ತನ್ನ ನೆಲೆ-ಬೆಲೆಯನ್ನರಿತು, ಕರ್ತವ್ಯನಿಷ್ಠನಾಗಿರುತ್ತ, ಆತ್ಮವೆಂಬ ಆಲಯದಲ್ಲಿ ವಿಹರಿಸುವ ಮೂಲಕ ಉದ್ಧರಿಸಲ್ಪಡುತ್ತಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net