ಬಿಜೆಪಿಯಿಂದ ಕದಿರೇಶ್ ಉಚ್ಚಾಟನೆ

bdvt kadiresh
ವಿ.ಕದಿರೇಶ್
Published on

ಭದ್ರಾವತಿ: ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಜಾರಿಗೊಳಿಸಿದ್ದ ವಿಪ್ ಉಲ್ಲಂಘಿಸಿದ್ದರಿಂದ ಬಿಜೆಪಿ ಸದಸ್ಯ ವಿ.ಕದಿರೇಶ್ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆಗೊಂಡಿದ್ದಾರೆ.

ನಲವತ್ತು ವರ್ಷಗಳ ಕಾಲ ಬಿಜೆಪಿ ಅಂಗಳದಲ್ಲಿ ಕಾಣಿಸಿಕೊಂಡು ತಾಲೂಕಿನಲ್ಲಿ ಕಾರ್ಯಕರ್ತರ ಪಡೆ ಕಟ್ಟಿ ಬಿಜೆಪಿಗೆ ಭದ್ರ ಬುನಾದಿ ಹಾಕಿದ್ದ ಕದಿರೇಶ್‌ಗೆ ಉಚ್ಚಾಟನೆ ಕ್ರಮ ಸಾಕಷ್ಟು ಮುಜುಗರ ತಂದಿದೆ. ನೇರವಾಗಿ ಅಲ್ಲದಿದ್ದರೂ ಇದೀಗ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷದಲ್ಲಿದ್ದು, ಹಿಂದು ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ನಂತರ ಸಿಎಂ ಸೇರಿ ರಾಜ್ಯ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.
ನಗರಸಭೆಯಲ್ಲಿನ ಬಿಜೆಪಿ ಪಕ್ಷದ 4 ಸದಸ್ಯರ ಪೈಕಿ ಕದಿರೇಶ್ ಹಾಗೂ ಇನ್ನಿಬ್ಬರು ಕಾಂಗ್ರೆಸ್ ಸೇರಲಿದ್ದಾರೆ. ತಾಪಂ ಮಾಜಿ ಸದಸ್ಯ ಕದಿರೇಶ್ ಪುತ್ರ ಮಂಜುನಾಥ್ ಈಗಾಗಲೇ ಕಾಂಗ್ರೆಸ್ ಸೇರಿದ್ದಾರೆ. ತಮಿಳು ಸಮಾಜಕ್ಕೆ ಸೇರಿದ ಕದಿರೇಶ್ ಬಿಜೆಪಿಯಲ್ಲಿದ್ದುಕೊಂಡು ನಗರದಲ್ಲಿ ಹಿಂದು ಮಹಾಸಭಾ ಹಾಗೂ ಹಿಂದು ರಾಷ್ಟ್ರಸೇನಾ ಸಂಘಟನೆ ಕಟ್ಟಿದ್ದರು. 1983ರಿಂದ ಬಿಜೆಪಿಗೆ ದುಡಿಯುತ್ತಿದ್ದು, ಪುರಸಭೆ ಹಾಗೂ ನಗರಸಭೆ ಸೇರಿ ಆರು ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
1999ರಲ್ಲಿ ಬಿಜೆಪಿಯಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಬಿ.ಎಸ್.ಯಡಿಯೂರಪ್ಪ ಅವರ ಆಪ್ತರಾಗಿದ್ದ ಇವರು, ಅಂದು ಕೆಜೆಪಿ ಪಕ್ಷವನ್ನು ಸಹ ಅವರ ಆಣತಿಯಂತೆ ಬೆಂಬಲಿಸಿದ್ದರು. ತಂದೆ ವಿಚಾರದಲ್ಲಿ ಪಕ್ಷದ ತೀರ್ಮಾನ ಕುರಿತು ಸುದ್ದಿಗೋಷ್ಠಿ ಮೂಲಕ ಬೇಸರ ವ್ಯಕ್ತಪಡಿಸಿರುವ ಪುತ್ರ ಮಂಜುನಾಥ್, ಚುನಾವಣೆ ಸಂದರ್ಭಗಳಲ್ಲಿ ಪಕ್ಷ ಜಾರಿಗೊಳಿಸಿರುವ ವಿಪ್ ಅನ್ನು ಹೊಸನಗರ, ಸಾಗರ, ಶಿರಾಳಕೊಪ್ಪದಲ್ಲಿಯೂ ಮುರಿಯಲಾಗಿತ್ತು. ಆದರೆ ಅಲ್ಲಿ ವಿಪ್ ತಿರಸ್ಕರಿಸಿದ್ದ ಚುನಾಯಿತ ಪ್ರತಿನಿಧಿಗಳಿಗೆ ಪಕ್ಷ ಯಾವುದೇ ಕ್ರಮ ಕೈಗೊಂಡಿಲ್ಲ. ಭದ್ರಾವತಿಯಲ್ಲಿ ಮಾತ್ರ ಕ್ರಮ ಏಕೆ ಎಂದು ಪ್ರಶ್ನಿಸಿದ್ದರು.
ಜಿಪಂ ಮಾಜಿ ಸದಸ್ಯರಾದ ಜೆಡಿಎಸ್‌ನ ಎಸ್.ಕುಮಾರ್ ಹಾಗೂ ಮಣಿಶೇಖರ್ ಈಗಾಗಲೇ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಇದೀಗ ಕದಿರೇಶ್ ಕುಟುಂಬ ಕಾಂಗ್ರೆಸ್ ತೆಕ್ಕೆಯಲ್ಲಿದೆ. ಇದರಿಂದ ಶಾಸಕ ಸಂಗಮೇಶ್ವರ್‌ಗೆ ಮತ್ತಷ್ಟು ಬಲ ಹೆಚ್ಚಾಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net