

ಶಿವಮೊಗ್ಗ: ವನ್ಯಜೀವಿ ವಿಭಾಗದ ಉಂಬ್ಳೆಬೈಲ್ ವಲಯ ವ್ಯಾಪ್ತಿಯಲ್ಲಿ ಕಡವೆ ಶಿಕಾರಿ ಮಾಡಿದ್ದ ನಾಲ್ವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದು ಇಬ್ಬರು ತಲೆಮರೆಸಿಕೊಂಡಿದ್ದಾರೆ.
ಭದ್ರಾವತಿ ತಾಲೂಕಿನ ಗೊಂದಿ ಗ್ರಾಮದ ಶಿವ(28), ವೆಂಕಟೇಶ್(60), ಎನ್.ಆರ್.ಪುರ ತಾಲೂಕಿನ ಚೌಡಿಕಟ್ಟೆ ಭೈರಾಪುರದ ಮಂಜಪ್ಪ (45), ವಿನೋದ್(19) ಬಂಧಿತರು.
ಎನ್.ಆರ್.ಪುರ ತಾಲೂಕಿನ ಚೌಡಿಕಟ್ಟೆ ಭಾಗದಲ್ಲಿ ಆರು ಆರೋಪಿಗಳು ಕಡವೆ ಶಿಕಾರಿ ಮಾಡಿದ್ದರು. ಬಳಿಕ ಆರು ಮಂದಿಯೂ ಪಾಲು ಮಾಡಿಕೊಂಡು ಬೈಕ್‌ಗಳಲ್ಲಿ ಸಾಗಿಸುತ್ತಿದ್ದರು. ಚೌಡಿಕಟ್ಟೆಯಿಂದ ಭದ್ರಾವತಿಯ ಗೋಂದಿ ಗ್ರಾಮಕ್ಕೆ ತೆರಳುತ್ತಿದ್ದ ಶಿವ ಮತ್ತು ವೆಂಕಟೇಶ್ ಉಂಬ್ಳೆಬೈಲ್ ಗೇಟ್ ಬಳಿ ಶನಿವಾರ ರಾತ್ರಿ ಗಸ್ತಿನಲ್ಲಿದ್ದ ಅರಣ್ಯಾಧಿಕಾರಿಗಳನ್ನು ಕಂಡ ಬ್ಯಾಗ್ ಅನ್ನು ಪಕ್ಕಕ್ಕೆ ಎಸೆದಿದ್ದರು.
ಅನುಮಾನಗೊಂಡ ಇಬ್ಬರನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಕಡವೆ ಶಿಕಾರಿ ಮಾಡಿರುವುದು ಬೆಳಕಿಗೆ ಬಂದಿದೆ. ಆನಂತರ ಭೈರಾಪುರದ ಮಂಜಪ್ಪ ಹಾಗೂ ವಿನೋದ್ ಸೇರಿ ಪರಾರಿಯಾಗಿರುವ ಆರೋಪಿಗಳಿಬ್ಬರ ಮನೆಗಳ ಮೇಲೂ ದಾಳಿ ನಡೆಸಿ ಪರಿಶೀಲಿಸಿ 17 ಕೆಜಿಯಷ್ಟು ಕಡವೆ ಮಾಂಸ ಜಪ್ತಿ ಮಾಡಿದ್ದಾರೆ.
ಒಂದು ಬೈಕ್ ಜಪ್ತಿ ಮಾಡಲಾಗಿದ್ದು ನಾಲ್ವರನ್ನೂ ಚಿಕ್ಕಮಗಳೂರಿನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು ನಾಲ್ವರಿಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತಲೆಮರೆಸಿಕೊಂಡ ಮತ್ತಿಬ್ಬರ ಬಂಧನಕ್ಕೆ ಅರಣ್ಯಾಧಿಕಾರಿಗಳು ಜಾಲ ಬೀಸಿದ್ದಾರೆ.
ಭದ್ರಾವತಿಯ ಡಿಸಿಎಫ್ ಆಶೀಶ್ ರೆಡ್ಡಿ, ಚನ್ನಗಿರಿ ವಿಭಾಗದ ಎಸಿಎಫ್ ರತ್ನಪ್ರಭಾ ಮಾರ್ಗದರ್ಶನದಲ್ಲಿ ಉಂಬ್ಳೆಬೈಲ್ ಆರ್‌ಎಫ್‌ಒ ಗಿಡ್ಡಸ್ವಾಮಿ, ಡಿವೈಆರ್‌ಎಫ್‌ಗಳಾದ ಪವನ್, ನವೀನ್, ಬಿ.ಎಫ್.ಸಂಜು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.