

ತೀರ್ಥಹಳ್ಳಿ: ಕಲುಷಿತಗೊಂಡಿರುವ ರಾಜಕೀಯ ಕ್ಷೇತ್ರವನ್ನು ಶುದ್ಧೀಕರಣಗೊಳಿಸಲು ಪಕ್ಷಕ್ಕೂ ಮಿಗಿಲಾಗಿ ಕಾರ್ಯನಿರ್ವಹಿಸಿದ ಕಡಿದಾಳು ಮಂಜಪ್ಪ ಅವರು ಈ ರಾಜ್ಯ ಕಂಡ ಪ್ರಾಮಾಣಿಕ ರಾಜಕಾರಣಿಗಳಲ್ಲಿ ಒಬ್ಬರು ಎಂದು ಮಾಜಿ ಶಾಸಕ ಡಿ.ಆರ್.ಪಾಟೀಲ್ ಬಣ್ಣಿಸಿದರು.
ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತುಂಗಾ ಮಹಾವಿದ್ಯಾಲಯ, ಹಾರೋಗುಳಿಗೆ ಗ್ರಾಪಂ ಆಶ್ರಯದಲ್ಲಿ ಗಾಂಧಿ ತತ್ವ ಪ್ರಣೀತ ರಾಜ್ಯ ಮಟ್ಟದ ಯುವಜನ ಶಿಬಿರ ಮತ್ತು ಮಾಜಿ ಸಿಎಂ ಕಡಿದಾಳು ಮಂಜಪ್ಪ ಸಂಸ್ಮರಣೆ ಅಂಗವಾಗಿ ಹಾರೋಗುಳಿಗೆಯಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಡಿದಾಳು ಮಂಜಪ್ಪ ಅವರಂತಹ ಶುದ್ಧ ಹಸ್ತದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವುದು ಇಂದಿನ ಅನಿವಾರ್ಯ. ರಾಜಕಾರಣಿಯಾದವನು ಯಾವುದೇ ಲಾಪೇಕ್ಷೆ ಇಲ್ಲದೆ ಜನಸೇವೆ ಮಾಡುವ ಬದ್ಧತೆ ಹೊಂದಿರಬೇಕು. ಆದರೆ ಕುರ್ಚಿ ಸಲುವಾಗಿ ರಾಜಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಇಂದಿನ ಬೆಳವಣಿಗೆಯಿಂದ ಸಮಾಜವೇ ತಲೆ ತಗ್ಗಿಸುವಂತಿದೆ. ಕಡಿದಾಳು ಮಂಜಪ್ಪ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಪಡೆಯಬಹುದಾಗಿದ್ದ ಒಂದು ಎಕರೆ ಭೂಮಿಯನ್ನು ತಿರಸ್ಕರಿಸಿದವರು. ಇಂತಹ ಮೌಲ್ಯಾಧಾರಿತ ವ್ಯಕ್ತಿಗಳ ಹಾದಿಯಲ್ಲಿ ಯುವಜನತೆ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ವಿದ್ಯಾವಂತರಿಂದಾಗಿಯೇ ಇಂದಿನ ಸಮಾಜ ಕಲುಷಿತವಾಗುತ್ತಿದೆ. ಶಿಕ್ಷಣ ಪಡೆದವರಿಗಿಂತ ಅನಕ್ಷರಸ್ಥರೇ ಮೇಲು. ಕಡಿದಾಳು ಮಂಜಪ್ಪ ಈ ನಾಡಿನ ಆಸ್ತಿಯಂತಿದ್ದು, ಅವರ ತ್ಯಾಗದಲ್ಲಿ ಮನಸ್ಸನ್ನು ಬದಲಿಸುವ ಶಕ್ತಿಯೂ ಇದೆ ಎಂದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಮನುಕುಲ ಇರುವವರೆಗೂ ಮಹಾತ್ಮ ಗಾಂಧಿ ಪ್ರಸ್ತುತರಾಗಿರುತ್ತಾರೆ. ಕಡಿದಾಳು ಅವರು ಶ್ರಮಜೀವಿಗಳನ್ನು ಹೃದಯದಿಂದ ನೋಡುತ್ತಿದ್ದರು. ಜೀತದಾಳುಗಳು ಸಹ ಭೂ ಮಾಲೀಕರಾಗಬೇಕೆಂಬ ಕನಸು ಕಂಡವರಲ್ಲಿ ಮೊದಲಿಗರು. ಅಂಥವರ ಸ್ಮರಣೆಯ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಯುವಜನರು ಅದೃಷ್ಟವಂತರು. ದೇಶ ಕಟ್ಟುವ ಕಾಯಕದಲ್ಲಿ ಸ್ಫೂರ್ತಿಯಿಂದ ತೊಡಗಿಸಿಕೊಳ್ಳಿ ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ನಾಡೋಜ ಡಾ. ವೂಡೇ ಪಿ. ಕೃಷ್ಣ, ಪ್ರೊ. ಜೆ.ಎಲ್.ಪದ್ಮನಾಭ, ಪ್ರೊ. ಜಿ.ಬಿ.ಶಿವರಾಜ್, ಡಾ. ಆರ್.ಕುಮಾರಸ್ವಾಮಿ, ಪಿ.ವಿ.ಮಹಾಬಲೇಶ್, ಹಾರೋಗುಳಿಗೆ ಗ್ರಾಪಂ ಅಧ್ಯಕ್ಷೆ ಭಾರತಿ ಮೌನೇಶ್, ಕಡಿದಾಳು ಮಂಜಪ್ಪ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.