

ಬೆಂಗಳೂರು:
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ (ಕೆಸೆಟ್-2025) ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಅಧಿಶೂಚನೆಯನ್ನು ಪ್ರಕಟಿಸಿದೆ. ಅದರಂತೆ, ನ.2ರಂದು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆ.28ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಸೆ.18 ಕೊನೆಯ ದಿನವಾಗಿದೆ.
ಕೆಸೆಟ್- ವೇಳಾಪಟ್ಟಿ
ಅರ್ಜಿ ಸಲ್ಲಿಕೆ ಆರಂಭ- ಆ.28
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ- ಸೆ.18
ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನ- ಸೆ.19
ಪ್ರವೇಶಪತ್ರ ಬಿಡುಗಡೆ- ಅ.24
ಪರೀಕ್ಷಾ ದಿನಾಂಕ- ನ.2
ಅರ್ಜಿ ಸಲ್ಲಿಕೆ ಲಿಂಕ್ http://cetonline.karnataka.gov.in ಅಧಿಸೂಚನೆ ಲಿಂಕ್: https://bit.ly/4lRIkDS
ಗಮನಿಸಿ
ಒಟ್ಟು 33 ವಿಷಯಗಳಲ್ಲಿ ಕೆಸೆಟ್ ನಡೆಸಲಾಗುತ್ತಿದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ರಾಜ್ಯದ ಯಾವುದೇ ವಿಶ್ವವಿದ್ಯಾಲಯ, ಪ್ರಥಮ ದರ್ಜೆ ಕಾಲೇಜು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ( ಸರ್ಕಾರಿ, ಅನುದಾನಿತ ಮತ್ತು ಖಾಸಗಿ) ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಗೊಳ್ಳಲು ಅರ್ಹರಾಗಿರುತ್ತಾರೆ. ಆದರೆ, ಆಯಾ ಸಂಸ್ಥೆಯ ನಿಯಮ ಮತ್ತು ಕಾಯ್ದೆಗಳಿಗೆ ಒಳಪಟ್ಟಿರುತ್ತಾರೆ ಎಂದು ತಿಳಿಸಲಾಗಿದೆ.
ಅರ್ಹತೆಗಳು
ಅಭ್ಯರ್ಥಿಗಳು ಮಾಣತಯ್‌ಎ ಪಡೆದ ವಿಶ್ವವಿದ್ಯಾಲಯ ಅಥವಾ ಉನ್ನತ ಶಿಕ್ಷಣ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪಡೆದಿರಬೇಕು. ಸಾಮಾನ್ಯ ವರ್ಗದ ಅಬ್ಯರ್ಥಿಗಳು ಶೇ.55 ಹಾಗೂ ಪರಿಶಿಷ್ಟರು, ಹಿಂದುಳಿದ ವರ್ಗದವರು ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶೇ.50 ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು.
ಪ್ರಸ್ತುತ ಸ್ನಾತಕೋತ್ತರ ಪದವಿಯ ಪ್ರಥಮ ಅಥವಾ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಕೂಡ ಪರೀಕ್ಷೆ ತೆಗೆದುಕೊಳ್ಳಲು ಅರ್ಹರಿರುತ್ತಾರೆ. ಕೆಸೆಟ್ ಲಿತಾಂಶ ಪ್ರಕಟಿಸಿದ ಎರಡು ವರ್ಷದೊಳಗಾಗಿ ನಿಗದಿತ ಅಂಕಗಳೊಂದಿಗೆ ಉತ್ತೀರ್ಣರಾದ ಬಗ್ಗೆ ಸ್ನಾತಕೋತ್ತರ ಪದವಿ ಅಂಕಪಟ್ಟಿಗಳನ್ನು ಹಾಜರುಪಡಿಸಿದೆ ಮಾತ್ರ ಅರ್ಹತಾ ಪ್ರಮಾಣಪತ್ರ ಪಡೆಯಬಹುದು.
ಸ್ನಾತಕೋತ್ತರ ಪದವಿ ಅಧ್ಯಯನ ಮಾಡಿದ ವಿಷಯದಲ್ಲಿಯೇ ಕೆಸೆಟ್ ಬರೆಯಬೇಕು. ಪ್ರಸ್ತುತ ಕೆಸೆಟ್‌ನಲ್ಲಿ ಇಲ್ಲದ ವಿಷಯಗಳಿಗೆ ಯುಜಿಸಿ ನೆಟ್ ಅಥವಾ ಸಿಎಸ್‌ಐಆರ್-ನೆಟ್ ಬರೆಯಬಹುದು. ಅಭ್ಯರ್ಥಿಗಳಿಗೆ ಯಾವುದೇ ಗರಿಷ್ಠ ವಯೋಮಿತಿ ಇರುವುದಿಲ್ಲ.
ಪ್ರಮಾಣಪತ್ರಗಳು
ಮೀಸಲಾತಿಯನ್ನು ಪಡೆಯಲು ಇಚ್ಛಿಸಿದಲ್ಲಿ ಅರ್ಜಿ ಸಲ್ಲಿಸುವಾಗ ಚಾಲ್ತಿಯಲ್ಲಿರುವ ಪ್ರಮಾಣಪತ್ರದ ಆರ್‌ಡಿ ಸಂಖ್ಯೆ ನಮೂದಿಸಬೇಕು. ನಂತರದಲ್ಲಿ ಸಲ್ಲಿಸುವ ಪ್ರಮಾಣಪತ್ರಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ. ಅಂತೆಯೇ ಹೊರ ರಾಜ್ಯದ ಅಭ್ಯರ್ಥಿಗಳಿಗೆ ಯಾವುದೇ ಮೀಸಲಾತಿ ಅನ್ವಯಿಸುವುದಿಲ್ಲ.
ಮತ್ತೆ ಪರೀಕ್ಷೆಗೆ ಅವಕಾಶವಿಲ್ಲ
ಈಗಾಗಲೇ ಕೆಸೆಟ್ ಬರೆದ ಅಭ್ಯರ್ಥಿಗಳು ಮುಂಬರುವ ಕೆಸೆಟ್‌ನಲ್ಲಿ ಅದೇ ವಿಷಯದಲ್ಲಿ ಅರ್ಜಿ ಸಲ್ಲಿಸುವಂತಿಲ್ಲ. ಮತ್ತೆ ಅರ್ಜಿ ಸಲ್ಲಿಸಿದಲ್ಲಿ ಹಿಂದಿನ ಅರ್ಹತೆಯನ್ನು ರದ್ದುಪಡಿಸಲಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಪರೀಕ್ಷಾ ಶುಲ್ಕ
ಸಾಮಾನ್ಯ ವರ್ಗ, ಹಿಂದುಳಿದ ವರ್ಗಗಳು, ಇತರ ರಾಜ್ಯದ ಅಭ್ಯರ್ಥಿಗಳಿಗೆ: 1,000 ರೂ.
ಪರಿಶಿಷ್ಟರು, ಪ್ರವರ್ಗ-1, ಅಂಗವಿಕಲರಿಗೆ: 700 ರೂ.
ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸತಕ್ಕದ್ದು ಎಂದು ಸ್ಪಷ್ಟಪಡಿಸಲಾಗಿದೆ.
ಪರೀಕ್ಷಾ ವಿಧಾನ
ಒಟ್ಟು ಎರಡು ಪತ್ರಿಕೆಗಳಿದ್ದು, ಮೊದಲ ಪತ್ರಿಕೆಯಲ್ಲಿ 50 ಕಡ್ಡಾಯ ಪ್ರಶ್ನೆಗಳಿಗೆ 100 ಅಂಕಗಳಿರುತ್ತವೆ. ವಿಷಯಾಧಾರಿತ ಎರಡನೇ ಪತ್ರಿಕೆಯಲ್ಲಿ 100 ಕಡ್ಡಾಯ ಪ್ರಶ್ನೆಗಳಿಗೆ 200 ಅಂಕಗಳು ಇರಲಿವೆ. ಒಟ್ಟಾರೆ ಎರಡೂ ಪತ್ರಿಕೆಗಳಿಗೆ 3 ತಾಸಿನ ಅವಧೀ ಇರಲಿದೆ.
ಸಾಮಾನ್ಯ ಪತ್ರಿಕೆಯಲ್ಲಿ ಅಭ್ಯರ್ಥಿಗಳ ಬೋಧನೆ, ಸಂಶೋಧನೆ ಹಾಗೂ ಬೌದ್ಧಿಕ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ. ಎರಡನೇ ಪತ್ರಿಕೆಯು ಆಯಾ ವಿಷಯಕ್ಕೆ ಸಂಬಂಧಿಸಿರುತ್ತದೆ.
ಅರ್ಹತೆಗಾಗಿ ಯುಜಿಸಿ-ನೆಟ್ ಮಾನದಂಡದ ಅನುಸಾರವೇ ಕೆಸೆಟ್ ಮಾನದಂಡಗಳನ್ನು ರೂಪಿಸಲಾಗಿದ್ದು, ಸಾಮಾನ್ಯ ವರ್ಗದವರು ಎರಡೂ ಪತ್ರಿಕೆಗಳಲ್ಲಿ ಶೇ.40 ಹಾಗೂ ಉಳಿದವರು ಶೇ.35 ಅಂಕಗಳನ್ನು ಪಡೆಯಬೇಕಿದೆ.
ಪರೀಕ್ಷಾ ಕೇಂದ್ರಗಳು
ಬೆಂಗಳೂರು, ಬೆಳಗಾವಿ, ಬಳ್ಳಾರಿ, ವಿಜಯಪುರ, ದಾವಣಗೆರೆ, ಧಾರವಾಡ, ಕಲಬುರಗಿ, ಮೈಸೂರು, ಶಿವಮೊಗ್ಗ, ತುಮಕೂರು, ಮಂಗಳೂರು ಸೇರಿ 12 ಕಡೆಗಳಲ್ಲಿ ಪರೀಕ್ಷಾ ಕೇಂದ್ರಗಳು ಇರಲಿವೆ. ಆದರೆ ನಿಗದಿಪಡಿಸಿದ 15 ವಿಷಯಗಳಿಗೆ ಅಭ್ಯರ್ಥಿಗಳು ಬೆಂಗಳೂರನ್ನೇ ಪರೀಕ್ಷಾ ಕೇಂದ್ರವಾಗಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.