ಕಾವ್ಯಚೇತನ ನಿಸಾರ್ ಅಹಮದ್

Nisar Ahmed
Published on

ಕನ್ನಡದ ನಿತ್ಯೋತ್ಸವ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ 2020 ಮೇ 3ರಂದು ನಮ್ಮನ್ನು ಅಗಲಿದರು. ಇಂದು ಅವರು ಇದ್ದಿದ್ದರೆ (ಫೆಬ್ರವರಿ 5) 85ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದರು. ಕನ್ನಡಕ್ಕಾಗಿ ಹಂಬಲಿಸಿ, ಕನ್ನಡವನ್ನು ಅನನ್ಯವಾಗಿ ಪ್ರೀತಿಸಿದವರು ಕವಿ ನಿಸಾರ್ ಅಹಮದ್. ‘ಈ ಭಾಷೆಯ ಋಣ ಎಷ್ಟು ಜನ್ಮವಾದರೂ ತೀರಿಸಲು ಅಸಾಧ್ಯ’ ಎಂದು ಹೇಳಿ ನಾಡಿನ ಜನರ ಅಂತರಂಗವನ್ನು ಹೊಕ್ಕಿ, ಜಾಗೃತಿಯ, ಪ್ರಜ್ಞಾವಂತಿಕೆಯ ಪ್ರಬಲ ಅಲೆಗಳನ್ನು ನಿರ್ವಿುಸಿದರು. ಕನ್ನಡದ ಕಾವ್ಯ ಪರಂಪರೆಗೆ ಹೊಸ ಶಕ್ತಿ ತುಂಬಿದರಲ್ಲದೆ, ಕಾವ್ಯದ ಉದ್ದೇಶ, ಸಾರ್ಥಕತೆಯನ್ನೂ ಮನದಟ್ಟು ಮಾಡಿಕೊಟ್ಟರು. ಜನಪರ ಕಾಳಜಿ, ವೈಚಾರಿಕತೆಯೊಂದಿಗೆ ಕವಿತೆಯು ಅನನ್ಯತೆ ಹೊಂದಿರಬೇಕು. ಸಹೃದಯನಿಗೆ ಕಾವ್ಯವು ರಸಾನುಭೂತಿ ನೀಡಬೇಕು ಎಂದು ನಂಬಿ, ಅದರಂತೆ ನಡೆದವರು ಅವರು. ಹಾಗಾಗಿಯೇ, ‘ಜೋಗದ ಸಿರಿ ಬೆಳಕಿನಲ್ಲಿ’ ಕವಿತೆ ಖ್ಯಾತಿಯ ಉತ್ತುಂಗಕ್ಕೆ ಏರಿಸಿದರೂ, ಮತ್ತೆ ಅದೇ ಬಗೆಯ ಕವಿತೆಗಳನ್ನು ಬರೆಯಲು ಅವರು ಮುಂದಾಗಲಿಲ್ಲ.

ಭಾವಗೀತೆಗಳಿಗೆ ಮರುಹುಟ್ಟು ನೀಡಿ, ಅವುಗಳನ್ನು ಜನಮಾನಸದ ಮನಸಿನ ಅಂಗಳಕ್ಕೆ ತಲುಪಿಸಿದರು. ನಿರ್ಭಿಡೆಯಿಂದ ವ್ಯಕ್ತಪಡಿಸುವ ಪ್ರಖರ ವಿಚಾರಗಳು ಅವರ ಕಾವ್ಯದ ಒಳಶಕ್ತಿ. ಪ್ರಕೃತಿಯ ಒಡನಾಟ, ಮನುಷ್ಯತ್ವದ ಬಗೆಗಿನ ಅಗಾಧ ನಂಬಿಕೆ, ಮಣ್ಣಿನ ವಾಸನೆ ಹೊಂದಿರುವ ಅವರ ಕಾವ್ಯ ಎಂದೆಂದೂ ಸಂಭ್ರಮ ಮೂಡಿಸುವಂಥವು. ಭಾವೈಕ್ಯತೆ ಬಗ್ಗೆ ಗಟ್ಟಿದನಿಯಲ್ಲೇ ಮಾತನಾಡಿದ ನಿಸಾರ್ ವೈಚಾರಿಕ ಕೃತಿ, ಸಂಪಾದಿತ ಕೃತಿಗಳ ಮೂಲಕ ಸದ್ವಿದ್ಯೆ ಬಿತ್ತಿದರು. ಮಕ್ಕಳ ಸಾಹಿತ್ಯಕ್ಕೂ ಕೊಡುಗೆ ನೀಡಿದರು. ಅರಿವಿನ ಬೆಳಕು ಹರಡಿಕೊಳ್ಳದೆ ಬದುಕು ‘ನಿತ್ಯೋತ್ಸವ’ ಆಗಲು ಸಾಧ್ಯವಿಲ್ಲ ಎಂದೂ ಎಚ್ಚರಿಸಿದರು. ಹಾಗಾಗಿಯೇ, ಅವರ ವಿಭಿನ್ನ, ವಿಶಿಷ್ಟ ವ್ಯಕ್ತಿತ್ವಕ್ಕೆ ಮನಸೋತವರು ತುಂಬ ಜನ.

‘ಸಂದ ಜೀವನದೊಂದು ರೀತಿಯಂತೆ

ಸರಳ ಸದಭಿರುಚಿಯ ಖ್ಯಾತಿಯಂತೆ’

ಕೊನೆತನಕ ಸಾರ್ವಜನಿಕ ವ್ಯಕ್ತಿತ್ವ ಮತ್ತು ಕಾವ್ಯ ವ್ಯಕ್ತಿತ್ವ ಗಳನ್ನು ಬಿಗಿಯಾಗಿ ಇರಿಸಿಕೊಂಡವರು ನಿಸಾರ್.

ಡಿವಿಜಿ ಪ್ರಭಾವ: ನಿಸಾರ್ ಅವರಿಗೆ ಡಿವಿಜಿಯವರ ಸಾಹಿತ್ಯ ಅದರಲ್ಲೂ ಅವರ ಕವನ ಮತ್ತು ವೈಚಾರಿಕ ಗದ್ಯಬರವಣಿಗೆ ಎಂದರೆ ಮಹಾಪ್ರಾಣ. ಅನೇಕ ಲೇಖನ ಮತ್ತು ಅಂಕಣಗಳಲ್ಲಿ ನಿಸಾರ್ ಡಿವಿಜಿಯವರನ್ನು ನೆನಪಿಸಿಕೊಂಡಿದ್ದಾರೆ.

ಮುಖ್ಯ ಕವನ ಸಂಕಲನ

‘ಮನಸು ಗಾಂಧಿಬಜಾರು’-1960, ‘ನೆನೆದವರ ಮನದಲ್ಲಿ’-1964, ‘ಸಂಜೆ ಐದರ ಮಳೆ’-1970, ‘ಆಯ್ದ ಕವಿತೆಗಳು’-1974, ‘ನಿತ್ಯೋತ್ಸವ’-1976, ‘ಸ್ವಯಂಸೇವೆಯ ಗಿಳಿಗಳು’-1977, ‘ಸಮಗ್ರ ಕವಿತೆಗಳು’-1991, ‘ಆಕಾಶಕ್ಕೆ ಸರಹದ್ದುಗಳಿಲ್ಲ’-1998, ‘ಸಮಗ್ರ ಭಾವಗೀತೆಗಳು’-2001.

ವಿಮರ್ಶೆ-ವಿಚಾರಸಾಹಿತ್ಯ: ‘ಇದು ಬರಿ ಬೆಡಗಲ್ಲೋ ಅಣ್ಣ’-1980, ‘ಮನದೊಂದಿಗೆ ಮಾತುಕತೆ’-1991, ‘ಹಿರಿಯರು ಹರಸಿದ ಹೆದ್ದಾರಿ’-1992, ‘ಅಚ್ಚುಮೆಚ್ಚು’-1995.

ಅನುವಾದ: ‘ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್, ‘ಒಥೆಲೊ’, ‘ಬರಿ ಮರ್ಯಾದಸ್ಥರೆ’ (ನೆರೂಡ ಕಾವ್ಯ).

ಪ್ರಥಮ ಕ್ಯಾಸೆಟ್: ‘ನಿತ್ಯೋತ್ಸವ’- ಕನ್ನಡದ ಮೊಟ್ಟಮೊದಲ ಸುಗಮ ಸಂಗೀತದ ಧ್ವನಿಸುರಳಿ. (1978)

ಬೆಂಗಳೂರು ಪ್ರೀತಿ

ಡಿವಿಜಿ, ಮಾಸ್ತಿಯವರಂತೆ ದೀರ್ಘಕಾಲ ಬೆಂಗಳೂರಿನಲ್ಲಿ ನೆಲೆಸಿದವರು ನಿಸಾರ್. ಬೆಂಗಳೂರಿನ ಋತುಮಾನ, ಮಳೆಯ ರಿಂಗಣ ಮತ್ತು ಬೇಸಿಗೆ ಎಲ್ಲವೂ ಅವರ ಪ್ರಜ್ಞೆಯ ಭಾಗವೇ ಆಗಿತ್ತು. ಒಂದೊಂದು ಬಡಾವಣೆಯ ವಿಶೇಷತೆ ಕುರಿತು ಮಾತನಾಡಬಲ್ಲವರಾಗಿದ್ದರು.

ಸಾಹಿತ್ಯ ಕೃಷಿ

21 ಕವನ ಸಂಕಲನ

4 ವೈಚಾರಿಕ ಕೃತಿ

05 ಮಕ್ಕಳ ಸಾಹಿತ್ಯ ಕೃತಿ

05 ಅನುವಾದ ಕೃತಿ

13 ಸಂಪಾದನಾ ಗ್ರಂಥ

8 ಧ್ವನಿಸುರಳಿ

5 ಸಿಡಿ ಪ್ರಕಟಗೊಂಡಿವೆ

ರಾಜ್ ಜತೆ ಬಾಂಧವ್ಯ

ರಾಜ್ ಭಾಗವಹಿಸುತ್ತಿದ್ದ ಕೆಲವು ಸಿನಿಮಾ ಸಮಾರಂಭಗಳಲ್ಲಿ ನಿಸಾರ್ ಅತಿಥಿಗಳಾಗಿರುತ್ತಿದ್ದರು. ಇಬ್ಬರ ಕುಟುಂಬದ ನಡುವೆ ಮಧುರ ಬಾಂಧವ್ಯ ಬೆಳೆದಿತ್ತು. ನಿಸಾರ್ ಮನೆಗೆ ರಾಜ್ ಬಂದಿದ್ದರು. ರಾಜ್ ಬಂದು ಕುಳಿತಿದ್ದ ಸ್ಥಳವನ್ನು ನಿಸಾರ್ ಗುರುತು ಹಾಕಿ ಅದನ್ನು ಪೂಜಾಸ್ಥಳದಂತೆ ನೋಡಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net