115 ಅಡಿ ತಲುಪಿದ ಕೆ.ಆರ್.ಸಾಗರ ಅಣೆಕಟ್ಟೆ

18-06-25--krs1 (3)
ಒಳಹರಿವು ಏರಿಕೆಯಾಗಿರುವ ಕಾರಣ ಕೆ.ಆರ್.ಸಾಗರ ಅಣೆಕಟ್ಟೆ 115 ಅಡಿ ತಲುಪಿದ್ದು, ಜಲಾಶಯದಲ್ಲಿ ನೀರು ತುಂಬಿ ತುಳುಕುತ್ತಿದೆ.
Published on

ಕೆ.ಆರ್.ಸಾಗರ: ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಕಳೆದ ವಾರದಿಂದ ಉತ್ತಮ ಮಳೆಯಾಗುತ್ತಿರುವ ಕಾರಣ ಬುಧವಾರ ರಾತ್ರಿ ವೇಳೆಗೆ 124.80 ಅಡಿ ಗರಿಷ್ಠ ಮಟ್ಟ ಇರುವ ಕನ್ನಂಬಾಡಿ ಕಟ್ಟೆಯ ಅಣೆಕಟ್ಟೆಯ ನೀರಿನ ಮಟ್ಟ 115 ಅಡಿ ತಲುಪಿದೆ. ಇನ್ನು 12 ದಿನಗಳಲ್ಲಿ ಅಣೆಕಟ್ಟೆ ಭರ್ತಿಯಾದರೆ ಇದೇ ಮೊದಲ ಬಾರಿ ಜೂನ್ ತಿಂಗಳಲ್ಲಿ ಭರ್ತಿ ಆದ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನೀರಿನ ಸಂಗ್ರಹ ಉತ್ತಮವಾಗಿದ್ದು 28 ಅಡಿ ನೀರು ಹೆಚ್ಚು ಸಂಗ್ರಹವಾಗಿದೆ. ಕೆ.ಆರ್.ಸಾಗರ ಅಣೆಕಟ್ಟೆ ನಿರ್ಮಾಣದ ನಂತರದ ದಾಖಲೆಗಳಲ್ಲಿ ಸುಮಾರು 92 ವರ್ಷಗಳ ನಂತರ ಜೂನ್ ತಿಂಗಳಲ್ಲಿ ನೀರಿನ ಮಟ್ಟ 115 ಅಡಿಗೆ ತಲುಪಿರುವುದು ಇದೇ ಮೊದಲ ಬಾರಿಯಾಗಿದೆ. ಅಣೆಕಟ್ಟೆ ಭರ್ತಿಯಾಗಲು ಕೇವಲ 9.80 ಅಡಿ ನೀರು ಮಾತ್ರ ಬೇಕಾಗಿದ್ದು, ಇದೇ ರೀತಿ ಒಳಹರಿವಿನ ಪ್ರಮಾಣ ಹೆಚ್ಚಾದರೆ ಜೂನ್ ಕೊನೇ ವಾರದಲ್ಲಿ ಅಣೆಕಟ್ಟೆ ಭರ್ತಿಯಾಗುವ ಸಾಧ್ಯತೆ ಇದೆ.

1980ರ ಜುಲೈ 11ರಂದು ಅಣೆಕಟ್ಟೆ ಭರ್ತಿಯಾಗಿದ್ದು, ಬಿಟ್ಟರೆ ನಂತರ ಎಲ್ಲ ಜುಲೈ ಕೊನೆ ವಾರದ ನಂತರ ಅಣೆಕಟ್ಟೆ ಭರ್ತಿಯಾಗಿದೆ. 2024 ರಲ್ಲಿ ಇದೇ ದಿನ 87.20 ಅಡಿ ಒಳಹರಿವು 1849 ಕ್ಯುಸೆಕ್, ಹೊರಹರಿವು 466 ಕ್ಯುಸೆಕ್ ಇದ್ದು, 14,336 ಟಿಎಂಸಿ ನೀರಿನ ಸಂಗ್ರಹವಿತ್ತು.

2023 ರಲ್ಲಿ ಅಣೆಕಟ್ಟೆ ಭರ್ತಿಯಾಗಿರಲಿಲ್ಲ. ಕಳೆದ 2024 ರಲ್ಲಿ ಆಗಸ್ಟ್ 9 ರಂದು ಅಣೆಕಟ್ಟೆ ಭರ್ತಿಯಾಗಿತ್ತು, 2022ರ ಜೂನ್ 18ರಂದು 105 ಅಡಿ ತಲುಪಿತ್ತು. ನಂತರ ಒಳಹರಿವು ಕಡಿಮೆಯಾದ ಹಿನ್ನೆಲೆಯಲ್ಲಿ ಜುಲೈ 20 ರಂದು ಅಣೆಕಟ್ಟೆ ಭರ್ತಿಯಾಗಿತ್ತು.

ಹಾರಂಗಿ ಜಲಾಶಯದಿಂದ ನೀರು ಬಿಡುಗಡೆಯಾಗಿದ್ದು, ಕೆ.ಆರ್.ಸಾಗರ ಅಣೆಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಒಳಹರಿವು ಹೆಚ್ಚಾಗಿದೆ. ಕೆ.ಆರ್.ಸಾಗರ ಅಣೆಕಟ್ಟೆಗೆ ಒಳಹರಿವು 33,210 ಕ್ಯುಸೆಕ್ ದಾಟಿದ್ದು, ಹೊರಹರಿವಿನ ಪ್ರಮಾಣ 1,151 ಇದೆ. ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹದ ಮಟ್ಟ ಕಳೆದ 48 ಗಂಟೆಯಲ್ಲಿ 5 ಅಡಿ ಏರಿಕೆ ಕಂಡಿದೆ. ಅಣೆಕಟ್ಟೆಯಲ್ಲಿ 36,496 ಟಿ.ಎಂ.ಸಿ ನೀರಿನ ಸಂಗ್ರಹವಿದೆ

ತಮಿಳುನಾಡಿಗೆ ಜೂನ್ ತಿಂಗಳಲ್ಲಿ 9.19 ಟಿಎಂಸಿ ಮತ್ತು ಜುಲೈ ತಿಂಗಳಲ್ಲಿ 31.24 ಟಿಎಂಸಿ ನೀರು ಹರಿಸಬೇಕಾಗಿದ್ದು, ಈಗಾಗಲೇ ಸುಮಾರು 7.5 ಟಿಎಂಸಿ ನೀರು ಹರಿಸಲಾಗಿದ್ದು, ಜೂನ್ ತಿಂಗಳ ಕೋಟಾ ಶೇ. 80ರಷ್ಟು ನೀರನ್ನು ಹರಿಸಲಾಗಿದೆ. ಕಳೆದ ವರ್ಷ ಇದೇ ದಿನ ಅಣೆಕಟ್ಟೆಯಲ್ಲಿ 87.20 ಅಡಿ ನೀರು ಸಂಗ್ರಹವಾಗಿತ್ತು. ಒಳಹರಿವು 1,849 ಕ್ಯುಸೆಕ್, ಹೊರಹರಿವು 466 ಕ್ಯುಸೆಕ್ ಇತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net