ಸಾಮಾನ್ಯರ ಮೂಲಕ ಚರಿತ್ರೆ ಕಟ್ಟಿದ ತೇಜಸ್ವಿ

08bnk1 tejasvi
ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ನಡೆದ ತೇಜಸ್ವಿ ನೆನಪು ಕಾರ್ಯಕ್ರಮದಲ್ಲಿ ಡಾ.ನರೇಂದ್ರ ರೈ ದೇರ್ಲ ಮಾತನಾಡಿದರು. ಡಾ. ಪ್ರದೀಪ್ ಕೆಂಜಿಗೆ, ನವದೀಪ್, ನಂದೀಶ್ ಬಂಕೇನಹಳ್ಳಿ ಇತರರಿದ್ದರು.
Published on

ಬಣಕಲ್: ಸಾಮಾನ್ಯರ ಅನುಭವಗಳಿಗೆ ದಿಕ್ಸೂಚಿಯಾಗಿ ಚರಿತ್ರೆಯನ್ನು ಕಟ್ಟಿದವರು ತೇಜಸ್ವಿ ಎಂದು ಲೇಖಕ ಡಾ.ನರೇಂದ್ರ ರೈ ದೇರ್ಲ ಹೇಳಿದರು.
ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಭಾನುವಾರ ಏರ್ಪಡಿಸಿದ್ದ ತೇಜಸ್ವಿ ನೆನಪು ಕಾರ್ಯಕ್ರಮ ಹಾಗೂ ತೇಜಸ್ವಿ ಸಾಲುಗಳ ಕ್ಯಾಲಿಗ್ರಫಿ ಕಾರ್ಯಕ್ರಮದಲ್ಲಿ ತೇಜಸ್ವಿ ಅರಿವಿನ ಇರವು ವಿಷಯದ ಬಗ್ಗೆ ಮಾತನಾಡಿದರು. ಪ್ರಕೃತಿಯನ್ನು ಗೆಲುವುದೆಂದರೇ ಪ್ರಕೃತಿಯ ಮೇಲೆ ಸವಾರಿ ಮಾಡುವುದಲ್ಲ. ಪ್ರಕೃತಿಗೆ ವಿಧೇಯರಾಗಿರುವುದು. ನೆಲ ಜಲದ ಸಂರಕ್ಷಣೆ ಮಹತ್ವವನ್ನು ತಮ್ಮ ಕೃತಿಗಳಲ್ಲಿ ತಂದವರು ತೇಜಸ್ವಿ. ಅತಿರೇಕಕ್ಕೆ ಬಿದ್ದು ಬರೆಯುವ ಲೇಖನಗಳನ್ನು ತೇಜಸ್ವಿ ಅವರು ಕೊಡಲಿಲ್ಲ. ತಮ್ಮದೇ ಆದ ವಿಶಿಷ್ಠ ಮಾದರಿಯ ಬರಹಗಳನ್ನು ಕೊಟ್ಟವರು ತೇಜಸ್ವಿ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಎಲೆಕ್ಟ್ರಿಷಿಯನ್ ಮತ್ತು ಸೂಪರ್ ವೈಸರ್ ಶ್ರೀನಿವಾಸ್ ಮಾತನಾಡಿ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಚಾರಣ, ವಿಚಾರ ಸಂಕಿರಣ, ಸಂವಾದ, ನಾಟಕ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ತೇಜಸ್ವಿ ಪ್ರತಿಷ್ಠಾನದಲ್ಲಿ ವಸ್ತು ಸಂಗ್ರಹಾಲಯ, ಕೀಟ ಸಂಗ್ರಹಾಲಯ, ಗ್ರಂಥಾಲಯ, ತೇಜಸ್ವಿ ಸಾಲುಗಳ ಕ್ಯಾಲಿಗ್ರಫಿ ಕಲಾಕೃತಿಗಳ ಗ್ಯಾಲರಿ ನಿರ್ಮಾಣವಾಗಿದ್ದು ಮುಂದಿನ ದಿನಗಳಲ್ಲಿ ಆರ್ಕಿಡೇರಿಯಂ ಮತ್ತು ಚಿಟ್ಟೆ ಉದ್ಯಾನ ನಿರ್ಮಾಣವಾಗಲಿದೆ ಎಂದರು.
ತೇಜಸ್ವಿ ಒಡನಾಡಿಗಳು ಮತ್ತು ಕಲಾವಿದರಾದ ಬಾಪು ದಿನೇಶ್, ತೇಜಸ್ವಿ ಅವರ ನಿತ್ಯ ಬದುಕಿನ ವಿವರಗಳನ್ನು ಜನಸಾಮಾನ್ಯರ ಬದುಕು ಬವಣೆಗಳನ್ನು ತಮ್ಮ ವಿಶಿಷ್ಠ ನಿರೂಪಣಾ ಶೈಲಿಯಿಂದ ಓದುಗರಿಗೆ ಓದಿನ ರುಚಿ ಹತ್ತಿಸಿದವರು. ತೇಜಸ್ವಿ ಅವರ ಸಾಹಿತ್ಯದಿಂದ ಹೊಸ ಓದುಗ ವರ್ಗ ಸೃಷ್ಟಿಯಾಗಿದೆ ಎಂದರು.
ಲೇಖಕರು ಹಾಗೂ ತೇಜಸ್ವಿ ಪ್ರತಿಷ್ಠಾನದ ಸದಸ್ಯರಾದ ಡಾ. ಪ್ರದೀಪ್ ಕೆಂಜಿಗೆ, ತಾಂತ್ರಿಕ ಸಹಾಯಕರಾದ ನವದೀಪ್, ತೇಜಸ್ವಿ ಪ್ರತಿಷ್ಠಾನದ ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿ ಸತೀಶ್ ತರುವೆ, ಸಂಗೀತಾ, ಕೀಟತಜ್ಞ ಡಾ.ಅವಿನಾಶ್, ಲೇಖಕ ಪೂರ್ಣೇಶ್ ಮತ್ತಾವರ, ತಾಂತ್ರಿಕ ನಿರ್ವಾಹಕ ಸ್ಯಾಮ್ಯುಯೆಲ್ ಹ್ಯಾರಿಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net