ಹಿಂದಿ ರಾಷ್ಟ್ರ ಭಾಷೆಯಲ್ಲ! ಅಶ್ವಿನ್​​ ಹೇಳಿಕೆಗೆ ತಮಿಳುನಾಡು BJP ರಾಜ್ಯಾಧ್ಯಕ್ಷ ಅಣ್ಣಾಮಲೈ ಕೊಟ್ಟ ಉತ್ತರ ವೈರಲ್​... K Annamalai

K Annamalai
Published on

K Annamalai : ಹಿಂದಿ ನಮ್ಮ ರಾಷ್ಟ್ರಭಾಷೆಯಲ್ಲ ಎಂಬ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ರವಿಚಂದ್ರನ್​​ ಅಶ್ವಿನ್​ ಅವರ ಹೇಳಿಕೆಯನ್ನು ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಐಪಿಎಸ್​ ಅಧಿಕಾರಿ ಕೆ. ಅಣ್ಣಾಮಲೈ ಬೆಂಬಲಿಸಿದ್ದಾರೆ.

ಅಶ್ವಿನ್​ ಏನು ಹೇಳಿದ್ದರು?

ಇತ್ತೀಚೆಗೆ ಚೆನ್ನೈನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಪದವಿ ಪ್ರದಾನ ಸಮಾರಂಭದಲ್ಲಿ ಆರ್. ಅಶ್ವಿನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅಶ್ವಿನ್​, ಇಂಗ್ಲಿಷ್, ತಮಿಳು ಮತ್ತು ಹಿಂದಿ ಭಾಷೆಯನ್ನು ಎಷ್ಟು ಜನರು ಅರ್ಥಮಾಡಿಕೊಳ್ಳುತ್ತಾರೆ ಎಂದು ಕೇಳಿದರು. ಮೊದಲು ಇಂಗ್ಲಿಷ್​ ಎಂದು ಹೇಳಿದಾಗ ಸ್ವಲ್ಪವೇ ಮಂದಿ ಕೈ ಎತ್ತಿ ಕೂಗಿದರು. ಬಳಿಕ ತಮಿಳಿನ ಬಗ್ಗೆ ಕೇಳಿದಾಗ ಬಹುತೇಕ ಮಂದಿ ಕೈ ಎತ್ತಿ ಜೋರಾಗಿ ಕೂಗಿದರು. ಇದೇ ಸಂದರ್ಭದಲ್ಲಿ ಹಿಂದಿ ಭಾಷೆಯ ಬಗ್ಗೆ ಕೇಳಿದಾಗ ಯಾರೊಬ್ಬರು ಸಹ ಧ್ವನಿ ಎತ್ತಲಿಲ್ಲ. ಇಡೀ ಸಮಾರಂಭವೇ ಮೌನವಾಯಿತು. ಬಳಿಕ ಪ್ರತಿಕ್ರಿಯಿಸಿದ ಅಶ್ವಿನ್, ಇಲ್ಲಿ ನಿಮಗಾಗಿ ಹೇಳಬೇಕಾದ ಒಂದು ವಿಷಯವಿದೆ. ಅದೇನೆಂದರೆ, ಹಿಂದಿ ಕೇವಲ ಅಧಿಕೃತ ಭಾಷೆಯಷ್ಟೇ ರಾಷ್ಟ್ರೀಯ ಭಾಷೆಯಲ್ಲ ಎಂದರು. ಈ ಮೂಲಕ ಮತ್ತೆ ಹಿಂದಿ ಭಾಷೆಯ ಮೇಲಿನ ಚರ್ಚೆಗೆ ಅಶ್ವಿನ್​ ಪ್ರಚೋದನೆ ನೀಡಿದ್ದು. ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ಶುರುವಾಗಿದೆ.

ಅಣ್ಣಾಮಲೈ ಹೇಳಿದ್ದೇನು?

ಇತ್ತೀಚೆಗೆ ವರದಿಗಾರರು ಅಶ್ವಿನ್ ಹೇಳಿಕೆಯ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಣ್ಣಾಮಲೈ, ಅಶ್ವಿನ್ ಅವರು ಹೇಳಿದ್ದು ಸರಿ ಇದೆ. ನಾನು ಕೂಡ ಅದನ್ನೇ ಹೇಳುತ್ತೇನೆ. ಹಿಂದಿ ನಮ್ಮ ರಾಷ್ಟ್ರೀಯ ಭಾಷೆಯಲ್ಲ, ಅದು ನಮ್ಮ ಸಂಪರ್ಕದ ಭಾಷೆಯಾಗಿದೆ ಮತ್ತು ಅದು ನಮ್ಮ ಅನುಕೂಲತೆಯ ಭಾಷೆಯಾಗಿದೆ. ಹಿಂದಿ ರಾಷ್ಟ್ರೀಯ ಭಾಷೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ಬೇರೆ ಯಾರೂ ಕೂಡ ಆ ರೀತಿ ಹೇಳಿಲ್ಲ ಎಂದರು.

ಅಂದಹಾಗೆ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಸೇರಿದಂತೆ ಹಲವಾರು ವಿಪಕ್ಷಗಳು ಕೇಂದ್ರವು ರಾಜ್ಯಗಳ ಮೇಲೆ ವಿಶೇಷವಾಗಿ ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಭಾಷೆಯನ್ನು ಹೇರಲು ಪ್ರಯತ್ನಿಸುತ್ತಿದೆ ಎಂದು ಆಗಾಗ ಆರೋಪ ಮಾಡುತ್ತಲೇ ಇರುತ್ತವೆ. ಇದೇ ಸಮಯದಲ್ಲಿ ಅಶ್ವಿನ್​ ಅವರು ನೀಡಿರುವ ಹೇಳಿಕೆ ಹೊಸ ಚರ್ಚೆಗೆ ನಾಂದಿ ಹಾಡಿದೆ. ಅಣ್ಣಾಮಲೈ ಅವರು ಬಿಜೆಪಿ ರಾಜ್ಯಾಧ್ಯಕ್ಷ ಆಗಿರುವುದರಿಂದ ಏನು ಹೇಳುತ್ತಾರೆ ಎಂಬ ಕುತೂಹಲವಿತ್ತು. ಆದರೆ, ಅವರು ಕೂಡ ಅಶ್ವಿನ್​ ಹೇಳಿಕೆಯನ್ನು ಬೆಂಬಲಿಸಿರುವುದು ಕೆಲವರಲ್ಲಿ ಅಚ್ಚರಿ ಮೂಡಿಸಿದೆ.

ಇದೇ ಕಾರ್ಯಕ್ರಮದಲ್ಲಿ ಅಶ್ವಿನ್ ಅವರು ತಮ್ಮ ವೃತ್ತಿಜೀವನದ ಹಲವು ವಿಷಯಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಅಲ್ಲದೆ, ಪ್ರತಿಯೊಬ್ಬರ ಜೀವನದಲ್ಲಿ ಜೀವಮಾನದ ವಿದ್ಯಾರ್ಥಿಯಾಗಿರುವುದು ಬಹಳ ಮುಖ್ಯ. ನಾವು ಕಲಿಯುವವರೆಗೆ ಯಾರೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಕಲಿಕೆ ನಿರಂತರವಾಗಿದ್ದರೆ, ಯಶಸ್ಸು ತನ್ನಿಂದ ತಾನೇ ಬರುತ್ತದೆ ಎಂದು ಅಶ್ವಿನ್ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net