ಜ್ಯೋರ್ತಿಲಿಂಗ; ‘ತನ್ನೊಳಗಣ ಅರಿವು’

Jyotirlinga
Published on

ತನ್ನೊಳಗಣ ಅರಿವು

ತನ್ನಲ್ಲಿ ತೋರಿದಲ್ಲದೆ

ಅನ್ಯರಲ್ಲಿ ತೋರಬಲ್ಲುದೆ?

ತನ್ನಲ್ಲಿ ತಾನೆ ಇದ್ದಂತೆ ಇದ್ದಿತ್ತು.

ತನ್ನ ತಾನೇ ಪಕ್ವಕ್ಕೆ ಬಂದು

ತನ್ನಲ್ಲಿ ಹುಟ್ಟಿದ ನೆನಹಿನ ಬಿನ್ನಾಣವನು

ಏನೆಂಬೆನಯ್ಯ ರಾಮನಾಥ!

ಮೇಲ್ನೋಟಕ್ಕೇ ತೋರುವಂತೆ ಪ್ರಸ್ತುತ ವಚನ ಅರಿವನ್ನು ಮುನ್ನೆಲೆಯಲ್ಲಿ ಇರಿಸುತ್ತಿದೆ. ಅರಿವಿನ ಬಗೆಗಿನ ಒಂದು ಪ್ರಶ್ನೆಯನ್ನೂ ಮುಂದಿಡುತ್ತಿದೆ. ಆ ಮೂಲಕ ಈಗಾಗಲೇ ಚಾಲ್ತಿಯಲ್ಲಿರುವ ಅರಿವಿನ ಗ್ರಹಿಕೆಗೆ ಬೇರೊಂದು ತಿರುವನ್ನು ತರುತ್ತಿದೆ.

ವಚನವು ಮೊದಲಿಗೆ ಅರಿವನ್ನು ಗ್ರಹಿಸಿಕೊಳ್ಳುವುದೇ ‘ತನ್ನೊಳಗಿನ ಅರಿವಾ’ಗಿ ಎಂಬುದನ್ನು ಗಮನಿಸಬೇಕು. ಎಂದರೆ ಇಲ್ಲಿ ಮೂಲಭೂತವಾಗಿ ಅರಿವಿಗೆ ಒಂದು ‘ಒಳತನ’ವಿದೆ. ಇನ್ನಷ್ಟು ಸ್ಪಷ್ಟಪಡಿಸುವುದಾದರೆ, ಅದು ‘ಹೊರತನ’ದೊಂದಿಗೆ ಒಂದು ವೈದೃಶ್ಯವನ್ನೂ ಕಲ್ಪಿಸಿಕೊಂಡಿದೆ.

ಇದು ಅರಿವಿನ ಸಾಮಾನ್ಯವಾದ ಗ್ರಹಿಕೆಗಿಂತಲೂ ಬೇರೆಯಾದುದಾಗಿದೆ. ಏಕೆಂದರೆ ಸಾಮಾನ್ಯವಾಗಿ ಅರಿವವನ ಹೊರಗೆ ಅರಿವನ್ನು ಇರಿಸಲಾಗುತ್ತದೆ. ಅರಿಯಲಿ, ಅರಿಯದಿರಲಿ, ಅರಿವವನಿಗಿಂತ ಬೇರೆಯಾಗಿ ಅದು ಒಂದು ನಿರಪೇಕ್ಷ ಅಸ್ತಿತ್ವದಲ್ಲಿರುತ್ತದೆ ಎಂದು ತಿಳಿಯಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅರಿವೆಂದರೆ ಹೀಗೆ ಹೊರಗಿರುವುದನ್ನು ಒಳಕ್ಕೆ ತಂದುಕೊಳ್ಳುವುದು ಎಂದೂ ತಿಳಿಯಲಾಗುತ್ತದೆ. ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ಅರಿವಿನ ಒಂದು ಸಾಂಸ್ಥಿಕ ವ್ಯಾಕರಣವೂ ಇದನ್ನೇ ಪುಷ್ಟೀಕರಿಸುತ್ತದೆ.

ಬಗೆಬಗೆಯ ಜ್ಞಾನಶಿಸ್ತುಗಳು, ಗ್ರಂಥಭಂಡಾರಗಳು, ಪಾಠಪ್ರವಚನಗಳು, ಇಷ್ಟರ ಮೇಲೆ ಪರೀಕ್ಷೆಗಳು ದೇಶೋವಿಶಾಲವಾದ ಅರಿವಿನ ಒಂದು ವ್ಯವಸ್ಥೆಯನ್ನೇ ನಿರ್ವಿುಸಿರುವಂತೆ ಕಾಣುತ್ತದೆ. ಈ ವ್ಯವಸ್ಥೆಯ ವಿಸ್ತಾರವೆನ್ನುವುದು ವ್ಯಕ್ತಿಯನ್ನು ಸದಾ ಒಂದು ಕುಬ್ಜತೆಯಲ್ಲಿರುವಂತೆಯೂ ನೋಡಿಕೊಳ್ಳುತ್ತಿರುತ್ತದೆ. ಹೀಗಿರುವಾಗ ವಚನವು ಮುಖ್ಯವಾದ ಒಂದು ಪಲ್ಲಟವನ್ನು ತರುತ್ತಿದೆ. ಅದು ಅರಿವನ್ನು ಅರಿವವನ ಒಳಗಿನ ಸಂಗತಿಯನ್ನಾಗಿಸಿದೆ.

ಅರಿವನ್ನು ಅರಿವವನ ಒಳಗಿನ ಸಂಗತಿಯನ್ನಾಗಿ ಮಾಡುವುದೆಂದರೆ ಅರಿವನ್ನು ಇರವಿನೊಂದಿಗೆ ಜೋಡಿಸುವುದೂ ಆಗಿದೆ. ಅಷ್ಟೇ ಅಲ್ಲದೆ ಒಳಗಿನ ಇರವನ್ನು ಹೊರಗಿನ ಇರವಿನೊಂದಿಗೆ ಕೂಡಿಸುವುದೂ ಆಗಿದೆ. ಒಳಗಿನ ಇರವು ಹೊರಗಿನ ಇರವಿನೊಂದಿಗೆ ಕೂಡಿಕೊಂಡಾಗ ಹೊರಗಿನದೆಂದು ಭಾವಿಸಲಾದ ಅರಿವು ಕೂಡ ಒಳಗಿನದಾಗುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಈ ಒಳಗುತನವೆನ್ನುವುದು ಆಯ್ಕೆಯ ಸಂಗತಿಯಾಗದೆ ಮೂಲಭೂತವಾದ ಅಸ್ತಿತ್ವವೇ ಆಗಿದೆ. ಇದರಿಂದ ಅರಿವೆನ್ನುವುದಕ್ಕೆ ಅಸ್ತಿತ್ವಾತ್ಮಕವಾದ (ಛ್ಡಿಜಿಠಠಿಛ್ಞಿಠಿಜಿಚ್ಝ) ಆಯಾಮವು ಒದಗಿಬರುತ್ತದೆ.

ಅರಿವೆನ್ನುವುದು ಬಾಹ್ಯವಾದಾಗ ಅಸ್ತಿತ್ವವನ್ನು ವಿಭಜಿಸುತ್ತದೆ. ಅಲ್ಲಿ ಅರಿವು-ಅರಿವುಗಳ ನಡುವೆ ಮಾತ್ರವಲ್ಲದೆ ಇರವು-ಇರವುಗಳ ನಡುವೆಯೂ ವಿಭಜನೆಗಳು ಏರ್ಪಡುತ್ತವೆ. ವಿಭಜನೆ ಎಂದ ಕೂಡಲೇ ಒಂದಕ್ಕೂ ಇನ್ನೊಂದಕ್ಕೂ ಪ್ರತಿ-ಸಂಬಂಧವು ಏರ್ಪಡುತ್ತದೆ. ಇದೊಂದು ಬಗೆಯ ಸ್ಪರ್ಧಾತ್ಮಕತೆಗೂ ಎಡೆಮಾಡಿಕೊಡುತ್ತದೆ.

ಆದರೆ ಅರಿವು ಆಂತರಿಕವಾದಾಗ ಅರಿವು-ಅರಿವುಗಳ ನಡುವೆ ಹೊಂದಾಣಿಕೆ ಏರ್ಪಡುತ್ತದೆ. ಈ ಹೊಂದಾಣಿಕೆಯು ಇರವು-ಇರವುಗಳನ್ನು ಕೂಡ ಕೂಡಿಸುವ ಕೆಲಸವನ್ನು ಮಾಡುತ್ತದೆ. ಹೀಗಾಗಿ ಸಮಗ್ರ ಅಸ್ತಿತ್ವದ ಪ್ರತಿಯೊಂದು ಘಟಕದ ನಡುವೆಯೂ ಸಹ-ಸಂಬಂಧವೇರ್ಪಡುತ್ತದೆ. ಆಗ ಅಲ್ಲಿ ಯಾವುದು ಯಾವುದಕ್ಕೂ ಅನ್ಯವಾಗುವುದಿಲ್ಲ. ಹೀಗಾಗಿ ಅಸ್ತಿತ್ವದ ಸಹಜತೆಯಲ್ಲಿಯೇ ಪ್ರೀತಿಯು ನೆಲಸುವಂತಾಗುತ್ತದೆ.

ಈ ದೃಷ್ಟಿಯಿಂದ ವಚನದ ಪ್ರಾರಂಭದ ಪ್ರಶ್ನೆ, ‘ತನ್ನೊಳಗಣ ಅರಿವು ತನ್ನಲ್ಲಿ ತೋರಿದಲ್ಲದೆ ಅನ್ಯರಲ್ಲಿ ತೋರಬಲ್ಲುದೆ?’, ಒಂದು ಮುಖ್ಯವಾದ ಸಂಗತಿಯನ್ನು ಮುನ್ನೆಲೆಗೆ ತರುತ್ತಿದೆ. ಅರಿವಿನ ಕೇಂದ್ರವು ತನ್ನಿಂದ ಹೊರಕ್ಕೆ ಪಲ್ಲಟಿಸುವುದರಲ್ಲೇ ಅನ್ಯದ ಅಸ್ತಿತ್ವವೂ ಇದೆ. ಅಲ್ಲದೆ ತಾನು ಅಸ್ತಿತ್ವದಲ್ಲಿ ನಿಜವಾಗಬೇಕಾದರೆ ‘ಅನ್ಯ’ದಿಂದ ಬಿಡಿಸಿಕೊಳ್ಳಬೇಕಾಗಿದೆ. ವಿಶೇಷವೆಂದರೆ, ಈ ‘ಬಿಡಿಸಿಕೊಳ್ಳುವ’ ವಿಧಾನದ ಸೂಚನೆಯನ್ನೂ ವಚನವು ಕೊಡುತ್ತದೆ.

‘ತನ್ನಲ್ಲಿ ತಾನೆ ಇದ್ದಂತೆ ಇದ್ದಿತ್ತು. ತನ್ನ ತಾನೇ ಪಕ್ವಕ್ಕೆ ಬಂದು ತನ್ನಲ್ಲಿ ಹುಟ್ಟಿದ ನೆನಹಿನ ಬಿನ್ನಾಣವನು ಏನೆಂಬೆನಯ್ಯ ರಾಮನಾಥ!’ ‘ಇದ್ದಂತೆ ಇದ್ದಿತ್ತು’ ಎಂಬಲ್ಲಿ ಅರಿವು ಇರವಿನೊಂದಿಗೆ ಏಕತ್ರಗೊಂಡಿದೆ. ಅರಿವಿನ ಬೀಜವೇ ಇರವಿನ ಬೀಜವಾಗಿಯೂ ಇದೆ. ಇಲ್ಲಿನ ಇಡೀ ಹೋಲಿಕೆ ಮೊಳಕೆ-ಸಸಿ-ಗಿಡ-ಹಣ್ಣುಗಳ ಬೆಳವಣಿಗೆಯ ನೆಲೆಯಲ್ಲಿದೆ. ಯಾವುದು ಬೀಜವಾಗಿ ಸುಪ್ತವಾಗಿದ್ದಿತೋ ಅದೇ ‘ಪಕ್ವಕ್ಕೆ ಬಂದು’ ವ್ಯಕ್ತವಾಗುತ್ತದೆ. ಬೀಜದ ಹಿಂದೆ ‘ಪಕ್ವ’ವಿರುವಂತೆ ಪಕ್ವದ ಮುಂದೆಯೂ ಬೀಜವಿದೆ. ಹೀಗಾಗಿ ‘ಇದ್ದಂತೆ ಇದ್ದದ್ದು’ ‘ಪಕ್ವಕ್ಕೆ ಬರು’ವುದೆಂದರೆ ಬಿಡಿಯೊಂದು ಎಲ್ಲ ಬಿಂದುಗಳನ್ನು ಸಂರ್ಪಸಿ ಇಡಿಯಾಗುವುದಾಗಿದೆ. ಬಿಡಿಯಾದುದರ ಇಡಿತನದ ವಿಕಾಸದಲ್ಲೇ ಅರಿವು ಹಣ್ಣಾಗುವ ಪ್ರಕ್ರಿಯೆಯೂ ಇದೆ.

ಇಷ್ಟಲ್ಲದೆ ಈ ಇಡೀ ಪ್ರಕ್ರಿಯೆ ಒಂದು ಬೆರಗಿನಲ್ಲಿ ತನ್ನ ಶಿಖರವನ್ನು ಮುಟ್ಟುತ್ತದೆ. ಅರಿವಿನ ಶಿಖರವೇ ಬೆರಗಾಗಿದೆ. ಜೊತೆಗೆ ಬೆರಗಿನಿಂದ ಬೇರ್ಪಟ್ಟ ಅರಿವೆನ್ನುವುದರ ಹೆಸರಿನ ನಿರ್ಜೀವತೆಯ ಧ್ವನಿಯೂ ಇದರಲ್ಲೇ ಅಡಕವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net