ನೈಟ್‌ರೋಡ್‌ನಲ್ಲಿ ಜ್ಯೋತಿ ರೈ: ಕನ್ನಡ ಸೇರಿ ತೆಲುಗು, ಮಲಯಾಳಂನಲ್ಲಿ ಬಿಜಿಯಾಗಿರುವ ನಟಿ

rai 2
Published on

ಬೆಂಗಳೂರು: ಕನ್ನಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಮಿಂಚಿದ ಕರಾವಳಿ ಮೂಲದ ನಟಿ ನಟಿ ಜ್ಯೋತಿ ರೈ. ವಿನು ಬಳಂಜ ನಿರ್ದೇಶನದ ‘ಬಂದೇ ಬರತಾವ ಕಾಲ’ ಎಂಬ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಅವರು, ಬಳಿಕ ‘ಜೋಗುಳ’, ‘ಕಿನ್ನರಿ’, ‘ಗೆಜ್ಜೆಪೂಜೆ’ ಸೇರಿ ತೆಲುಗು, ತಮಿಳು ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದರು. ನಂತರ ‘ಸಪ್ಲೈಯರ್ ಶಂಕರ’, ‘ದಿಯಾ’ ಚಿತ್ರಗಳಲ್ಲಿ ನಟಿಸಿದ್ದ ಜ್ಯೋತಿ ಸದ್ಯ ಗೋಪಾಲ್ ಹಳೇಪಾಳ್ಯ ನಿರ್ದೇಶನದ ‘ನೈಟ್‌ರೋಡ್’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಇದೇ ವಾರ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು, ‘ಮೂರು ವರ್ಷಗಳ ಹಿಂದೆ ಗೋಪಾಲ್ ಹಳೇಪಾಳ್ಯ ಹೇಳಿದ ‘ನೈಟ್ ರೋಡ್’ ಕಥೆ ಇಷ್ಟವಾಗಿ ಒಪ್ಪಿಕೊಂಡೆ. ನಟ ಧರ್ಮ ಪತ್ನಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ವಿಭಿನ್ನ ರೀತಿಯ ರೋಲ್ ನನ್ನದು’ಎಂದು ಮಾಹಿತಿ ನೀಡುತ್ತಾರೆ.

ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾ: ಜ್ಯೋತಿ ರೈ ಕನ್ನಡಕ್ಕಿಂತ ಹೆಚ್ಚು ತೆಲುಗು ಚಿತ್ರರಂಗದಲ್ಲಿ ಬಿಜಿಯಾಗಿದ್ದಾರೆ. ಅವರ ನಟನೆಯ ಮೂರು ಟಾಲಿವುಡ್ ಸಿನಿಮಾಗಳು ತೆರೆಗೆ ಬರಲು ರೆಡಿಯಾಗಿವೆ. ಅರವಿಂದ್ ಕೃಷ್ಣ ಅಭಿನಯದ, ಪೂರ್ವಜ್ ನಿರ್ದೇಶನದ ‘ಮಾಸ್ಟರ್ ಪೀಸ್’ನಲ್ಲಿ ಐದು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಸವಾಲಿನ ಪಾತ್ರ ಹಾಗೂ ಅಷ್ಟೇ ವಿಭಿನ್ನ ಶೇಡ್‌ಗಳಲ್ಲಿ ನಟಿಸಿದ್ದೇನೆ. ಆ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆಯಿದೆ. ಅಲ್ಲದೇ, ಎರಡು ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ನಟಿಸಿದ್ದೇನೆ. ಮೂರು ಸಿನಿಮಾಗಳು ಡಿಸೆಂಬರ್ ಅಥವಾ ಜನವರಿಯಲ್ಲಿ ಬಿಡುಗಡೆಯಾಗಲಿವೆ. ಇದಲ್ಲದೆ ಒಂದು ಮಲಯಾಳಂ ಸಿನಿಮಾದ ಮಾತುಕತೆ ನಡೆದಿದೆ’ ಎಂದು ಹೇಳಿಕೊಳ್ಳುತ್ತಾರೆ ಜ್ಯೋತಿ.

ಸಿನಿಮಾದ ಕಡೆ ಹೆಚ್ಚು ಆಸಕ್ತಿ: ಧಾರಾವಾಹಿಗಳಿಂದ ಬ್ರೇಕ್ ತೆಗೆದುಕೊಂಡಿರುವ ಬಗ್ಗೆ ಅವರು, ‘ಸುಮಾರು ವರ್ಷಗಳ ಕಾಲ ನಾನು ಧಾರಾವಾಹಿಗಳಲ್ಲಿಯೇ ಹೆಚ್ಚು ನಟಿಸಿದ್ದೇನೆ. ಆದರೆ, ವೈಯಕ್ತಿಕವಾಗಿ ನನಗೆ ಬೆಳವಣಿಗೆ ಬೇಕು ಅಂತನ್ನಿಸಿತು. ಹೀಗಾಗಿ ಈಗೀಗ ಸಿನಿಮಾಗಳತ್ತ ಗಮನ ಹರಿಸಿದ್ದೇನೆ. ಸದ್ಯ ಸಿನಿಮಾಗಳಲ್ಲೂ ಅವಕಾಶಗಳು ದೊರೆಯುತ್ತಿವೆ. ಇದಕ್ಕೆ ಪತಿ ಪೂರ್ವಜ್ ಕೂಡ ಬೆಂಬಲವಾಗಿದ್ದಾರೆ’ ಎನ್ನುತ್ತಾರೆ.

ಸೈಡ್ ರೋಲ್‌ಗೆ ಸೀಮಿತವಾಗಿದ್ದೆ: ಪ್ರಮುಖ ಧಾರಾವಾಹಿಗಳಲ್ಲಿ ನಟಿಸಿರುವ ಜ್ಯೋತಿ ರೈ, ಕನ್ನಡ ಚಿತ್ರಗಳಲ್ಲಿ ದೊಡ್ಡ ಮಟ್ಟದ ಅವಕಾಶ ಸಿಗದಿರುವುದಕ್ಕೆ ಬೇಸರಿಸುತ್ತಾರೆ. ‘ಕನ್ನಡದಲ್ಲೇ ಪ್ರತಿಭೆಗಳಿರುವಾಗ ಬೇರೆ ಭಾಷೆಗಳಿಂದ ಹಿರೋಯಿನ್‌ಗಳನ್ನು ಕರೆ ತರುವುದು ಯಾಕೆ?’ ಎಂದು ಪ್ರಶ್ನಿಸುತ್ತಾರೆ. ಈ ಬಗ್ಗೆ ‘ಹಲವು ವರ್ಷಗಳಿಂದ ಕನ್ನಡದ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರೂ ಪ್ರತಿಭೆಯನ್ನು ಯಾರು ಗುರುತಿಸಲಿಲ್ಲ. ಕೇವಲ ನನ್ನನ್ನು ಸೈಡ್ ರೋಲ್ ಹಾಗೂ ಪೋಷಕ ಪಾತ್ರಗಳಿಗೆ ಸೀಮಿತಗೊಳಿಸಿದ್ದರು. ಈ ಬಗ್ಗೆ ನಿಜಕ್ಕೂ ಬೇಸರವಿದೆ. ಕನ್ನಡದಲ್ಲಿಯೇ ಉತ್ತಮ ಪ್ರತಿಭೆಗಳಿರುವಾಗ ಮುಂಬೈ ಹಾಗೂ ಬೇರೆ ಕಡೆಗಳಿಂದ ಹಿರೋಯಿನ್‌ಗಳನ್ನು ಕರೆ ತರುವುದು ಯಾಕೆ? ನಮ್ಮಲ್ಲಿ ಅವಕಾಶ ಸಿಗದ ಕಾರಣ ಕೆಲವು ನಟಿಯರು ಬೇರೆ ಭಾಷೆಗಳಿಗೆ ಹೋಗಿ ಅಲ್ಲಿ ಯಶಸ್ಸು ಸಾಧಿಸುತ್ತಿದ್ದಾರೆ’ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಜ್ಯೋತಿ.

ವರ್ಕಿಂಗ್ ಪ್ಲೇಸ್‌ನಲ್ಲಿ ಭದ್ರತೆ ಇರಲಿ: ಮಲಯಾಳಂ ಚಿತ್ರರಂಗದಲ್ಲಿ ಸದ್ದು ಮಾಡಿರುವ ಜಸ್ಟೀಸ್ ಹೇಮಾ ಸಮಿತಿ ವರದಿ ಕುರಿತು ಜ್ಯೋತಿ, ‘ಚಿತ್ರರಂಗ ಅಥವಾ ಯಾವುದೇ ಕ್ಷೇತ್ರದಲ್ಲಿ ಮಹಿಳೆಯರಿಗೆ ಕೆಲಸ ಮಾಡಲು ಅನುಕೂಲ ಸೃಷ್ಟಿಯಾಗಬೇಕು. ಕೆಲಸದ ಸ್ಥಳದಲ್ಲಿ ನಮ್ಮವರೇ ನಮಗೆ ಶತ್ರುಗಳಾದರೆ ಹೇಗೆ? ನನಗೆ ಯಾವುದೇ ರೀತಿಯ ಕೆಟ್ಟ ಅನುಭವ ಆಗಿಲ್ಲ. ಕನ್ನಡದಲ್ಲಿ ಅಂತಹ ವಾತಾವರಣ ಇಲ್ಲ’ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net