ಹೈಕೋರ್ಟ್​ ನ್ಯಾಯಮೂರ್ತಿ ಮನೆಯಲ್ಲಿ ನಗದು ಪತ್ತೆ: ಜಡ್ಜ್​ ವರ್ಗಾವಣೆ | Delhi

judge
Published on

Delhi | ಕಳೆದ ವಾರ ಹೋಳಿ ಹಬ್ಬದ ಸಂದರ್ಭದಲ್ಲಿ ದೆಹಲಿ ಹೈಕೋರ್ಟ್ ಜಡ್ಜ್ ನಿವಾಸದಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ದೆಹಲಿ ಹೈಕೋರ್ಟ್​ನಿಂದ ಅಲಹಾಬಾದ್​ಗೆ ವರ್ಗಾಯಿಸಲು ಸುಪ್ರೀಂಕೋರ್ಟ್ ಕೊಲಿಜಿಯಂ ನಿರ್ಧರಿಸಿದೆ.

ಹೌದು, ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಮನೆಯಲ್ಲಿ ಬೆಂಕಿ ಪ್ರಕರಣ ವರದಿಯಾದ ನಂತರ ಅಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿರುವುದು ನ್ಯಾಯಾಂಗ ವಲಯದಲ್ಲಿ ಸಂಚಲನವನ್ನೇ ಮೂಡಿಸಿದೆ. ಈ ಘಟನೆಯು ಸುಪ್ರೀಂ ಕೋರ್ಟ್ ಕಠಿಣ ಕ್ರಮ ಕೈಗೊಳ್ಳುವಂತೆ ಮಾಡಿದೆ. ನ್ಯಾಯಾಧೀಶರ ಮನೆಯಲ್ಲಿ ಅಪಾರ ನಗದು ಪತ್ತೆಯಾದ ಘಟನೆಯಿಂದಾಗಿ, ಸುಪ್ರೀಂ ಕೋರ್ಟ್ ಸಿಜೆಐ ಅಂದರೆ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಕೊಲಿಜಿಯಂ ತಕ್ಷಣ ಕ್ರಮ ಕೈಗೊಂಡು ಸಂಬಂಧಪಟ್ಟ ನ್ಯಾಯಮೂರ್ತಿಯನ್ನು ಬೇರೆ ಹೈಕೋರ್ಟ್‌ಗೆ ವರ್ಗಾಯಿಸಲು ನಿರ್ಧರಿಸಿದೆ.

ಅಂದಹಾಗೆ ದೆಹಲಿ ನ್ಯಾಯಮೂರ್ತಿ ಯಶವಂತ್ ವರ್ಮಾ ಎಂಬುವವರ ಮನೆಯಲ್ಲಿ ರಾಶಿ ರಾಶಿ ನಗದು ಪತ್ತೆಯಾಗಿತ್ತು. ಈಗ ಈ ನಗದು ಹಗರಣದ ಹಿನ್ನೆಲೆ ಏನು ಅನ್ನೋ ಪ್ರಶ್ನೆ ಮೂಡ್ತಾ ಇದೆ. ಅವರನ್ನು ವರ್ಗಾವಣೆ ಮಾಡುವ ನಿರ್ಧಾರವನ್ನು ಸುಪ್ರೀಂ ಕೋರ್ಟ್ ತೆಗೆದುಕೊಂಡಿದ್ದೇಕೆ? ಎಂಬ ಮುಂತಾದ ಪ್ರಶ್ನೆ ಎದುರಾಗಿದೆ. ಇನ್ನೂ ಮನೆಗೆ ಬೆಂಕಿ ಬಿದ್ದ ಸಂದರ್ಭದಲ್ಲಿ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ನಗರದಲ್ಲೇ ಇರಲಿಲ್ಲ ಎಂದು ತಿಳಿದು ಬಂದಿದೆ.

ಬೆಂಕಿ ಹೊತ್ತಿಕೊಂಡ ನಂತರ, ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಕುಟುಂಬದವರು ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು. ಬೆಂಕಿಯನ್ನು ನಂದಿಸಿದ ನಂತರ, ಸಿಬ್ಬಂದಿ ಮನೆಗೆ ಪ್ರವೇಶಿಸಿದಾಗ, ಒಂದು ಕೋಣೆಯಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ. ಅದನ್ನು ಗಮನಿಸಿದ ಪೊಲೀಸರಿಗೆ ಇದು ಅಕ್ರಮ ಹಣ ಎಂಬ ಅನುಮಾನ ಬಂದಿದೆ. ಮೂಲದ ಪ್ರಕಾರ ದೆಹಲಿಯ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಮನೆಯಲ್ಲಿ ಕೋಟ್ಯಂತರ ರೂಪಾಯಿಗಳು ಹರಡಿಕೊಂಡಿತ್ತು ಎನ್ನಲಾಗಿದೆ.

ಜಡ್ಜ್ ಮನೆಯಲ್ಲಿ ಪತ್ತೆಯಾದ ಈ ನಗದು ರಾಶಿಯ ಬಗ್ಗೆ ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿಗೆ ತಿಳಿಸಲಾಯಿತು. ಇದಾದ ನಂತರ ಸಿಜೆಐ ಸಂಜೀವ್ ಖನ್ನಾ ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಕೊಲಿಜಿಯಂ ಸಭೆ ಕರೆದರು. ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ತಕ್ಷಣವೇ ವರ್ಗಾವಣೆ ಮಾಡಬೇಕೆಂದು ಕೊಲಿಜಿಯಂ ಸರ್ವಾನುಮತದಿಂದ ನಿರ್ಧರಿಸಿತು. ಇದಾದ ನಂತರ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ಕಳುಹಿಸಲಾಯಿತು.

ಸಿಜಿಐ ತುರ್ತು ಸಭೆ

ಸುಪ್ರೀಂ ಕೋರ್ಟ್ ಕೊಲಿಜಿಯಂನ ಕೆಲವು ಸದಸ್ಯರು ಈ ಗಂಭೀರ ಘಟನೆಯನ್ನು ಕೇವಲ ವರ್ಗಾವಣೆಯಿಂದ ಪರಿಹರಿಸಲಾಗುವುದಿಲ್ಲ ಎಂದು ನಂಬಿದ್ದಾರೆ. ನ್ಯಾಯಮೂರ್ತಿ ವರ್ಮಾ ಅವರನ್ನು ರಾಜೀನಾಮೆ ನೀಡುವಂತೆ ಕೇಳಬೇಕು, ಏನಾದರೂ ಅವರು ಒಪ್ಪದಿದ್ದರೆ, ಅವರ ವಿರುದ್ಧ ಆಂತರಿಕ ತನಿಖೆ ಆರಂಭಿಸಬೇಕು ಎಂದು ಸೂಚಿಸಿದ್ದಾರೆ. ವರ್ಗಾವಣೆಯನ್ನು ಮೀರಿ ಏನಾದರೂ ಕ್ರಮ ಕೈಗೊಳ್ಳಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಈಗ ಕಾದು ನೋಡಬೇಕಾಗಿದೆ.

ವರ್ಗಾವಣೆಯಿಂದ ಏನು ಲಾಭ?

ನ್ಯಾಯಮೂರ್ತಿ ಯಶವಂತ್ ವರ್ಮಾ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ. ಈಗ ಸುಪ್ರೀಂ ಕೋರ್ಟ್ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಿದೆ. ಅವರು ಉತ್ತರ ಪ್ರದೇಶ ಮೂಲದವರಾಗಿದ್ದು, ಅಲಹಾಬಾದ್ ವಿಶ್ವವಿದ್ಯಾಲಯದಿಂದ ಕಾನೂನು ಶಿಕ್ಷಣವನ್ನು ಪೂರ್ಣಗೊಳಿಸಿದರು. ಕಾನೂನು ಅಭ್ಯಾಸವನ್ನು ಪ್ರಾರಂಭಿಸಿದ ನಂತರ ಅವರು ಅಲಹಾಬಾದ್ ಹೈಕೋರ್ಟ್‌ನಲ್ಲಿ ಅಭ್ಯಾಸ ಮಾಡಲು ಪ್ರಾರಂಭಿಸಿದರು. ಅಲ್ಲಿ ಅವರು ವಿವಿಧ ಕಾನೂನು ವಿಷಯಗಳಲ್ಲಿ ತಮ್ಮ ಪರಿಣತಿಯನ್ನು ತೋರಿಸಿದರು. ಅವರ ನಿಷ್ಪಕ್ಷಪಾತ ಮತ್ತು ಕಾನೂನಿನ ಆಳವಾದ ಅಧ್ಯಯನದಿಂದ, ಅವರನ್ನು 13, ಅಕ್ಟೋಬರ್, 2021 ರಂದು ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಿಸಲಾಯಿತು. ಇದಕ್ಕೂ ಮೊದಲು ಅವರು ಅಲಹಾಬಾದ್ ಹೈಕೋರ್ಟ್‌ನಲ್ಲಿಯೂ ಸೇವೆ ಸಲ್ಲಿಸಿದ್ದರು. ನ್ಯಾಯಮೂರ್ತಿ ವರ್ಮಾ ಅವರು ಸಾಂವಿಧಾನಿಕ, ಕ್ರಿಮಿನಲ್ ಮತ್ತು ನಾಗರಿಕ ವಿಷಯಗಳಲ್ಲಿ ಹೆಸರುವಾಸಿಯಾಗಿದ್ದರು. ಆದರೆ ಈಗ ಅವರ ನಿವಾಸದಲ್ಲಿ ಬೆಂಕಿ ಕಾಣಿಸಿಕೊಂಡು ಅಲ್ಲಿಂದ ನಗದು ವಶಪಡಿಸಿಕೊಂಡ ಘಟನೆ ನಡೆದ ನಂತರ ಅವರ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆ ಮೂಡಿಸಿದೆ.

ನ್ಯಾಯಮೂರ್ತಿ ಯಶವಂತ್ ವರ್ಮಾ ಯಾರು?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net