ಒಳಮೀಸಲು ಮಾದಿಗ ಸಮೂಹಗಳ ಒಕ್ಕೂಟದ ತಮಟೆ ಚಳವಳಿ

Tamate_Chaluvali
Published on

ತುಮಕೂರು: ಸುಪ್ರೀಂಕೋರ್ಟ್​ ತೀರ್ಪಿನಂತೆ ಒಳಮೀಸಲು ಜಾರಿಗೊಳಿಸಬೇಕು. ಅಲ್ಲಿಯವರೆಗೆ ಸರ್ಕಾರದ ನೇಮಕಾತಿಗಳಿಗೆ ತಡೆಯೊಡ್ಡುವಂತೆ ಆಗ್ರಹಿಸಿ ಮಾದಿಗ ಸಮೂಹಗಳ ಒಕ್ಕೂಟದಿಂದ ನಗರದಲ್ಲಿ ಬೃಹತ್​ ತಮಟೆ ಚಳವಳಿ ನಡೆಸಿ ಹಕ್ಕೋತ್ತಾಯಿಸಲಾಯಿತು.

ನಗರದ ಟೌನ್​ಹಾಲ್​ ಬಳಿ ಜಿಲ್ಲೆಯ10 ತಾಲೂಕುಗಳ ಮಾದಿಗ ಸಮುದಾಯದ ಮುಖಂಡರು, ಸಂಟನೆಗಳ ಪ್ರತಿನಿಧಿಗಳು ಸಮಾವೇಶಗೊಂಡು ಜಿಲ್ಲಾಧಿಕಾರಿಗಳ ಕಚೇರಿವರೆಗೆ ತಮಟೆ ಬಾರಿಸುತ್ತಾ ಒಳ ಮೀಸಲು ಜಾರಿಗೊಳಿಸುವಂತೆ ಮೆರವಣಿಗೆ ನಡೆಸಿ ಘೋಷಣೆಗಳನ್ನು ಕೂಗಿದರು. ಈ ವೇಳೆ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಮಾದಿಗ ದಂಡೋರ ಪಾವಗಡ ಶ್ರೀರಾಮ್​, ನ್ಯಾ.ಎ.ಜೆ.ಸದಾಶಿವ ನೇತೃತ್ವದ ಆಯೋಗವು 2012ರಲ್ಲಿ ವರದಿ ನೀಡಿದ್ದರೂ ಈವರೆಗೆ ವರದಿಯನ್ನು ಜಾರಿ ಮಾಡಲು ಸರ್ಕಾರಗಳು ಹಿಂದೇಟು ಹಾಕುತ್ತಾ ಬಂದಿವೆ. ಅಲ್ಲದೆ, 2024ರ ಆಗಸ್ಟ್​ 1ರ ಸುಪ್ರಿಂ ಕೋರ್ಟ್​ ತೀರ್ಪು ಸಹ ಒಳಮೀಸಲಾತಿ ಜಾರಿ ಆಯಾಯ ರಾಜ್ಯಗಳಿಗೆ ಬಿಟ್ಟ ವಿಚಾರ ಎಂದು ಹೇಳಿದೆ. ಹಾಗಾಗಿ, ಸರ್ಕಾರ ಕೂಡಲೇ ಒಳಮೀಸಲಾತಿ ಜಾರಿ ಮಾಡಬೇಕು. ಅಲ್ಲಿಯವರೆಗೆ ನೇಮಕಾತಿಗಳಿಗೆ ತಡೆನೀಡುವಂತೆ ಒತ್ತಾಯಿಸಿದರು.

ಮೀನ-ಮೇಷ ಎಣಿಸುತ್ತಿರುವ ಸರ್ಕಾರ: ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಜಾತಿಯಲ್ಲಿ ಮಾದಿಗ ಜನಾಂಗವು ಅಧಿಕ ಸಂಖ್ಯೆಯಲ್ಲಿ ಇದೆ ಎಂಬ ವಿಷಯವನ್ನು ಎಲ್ಲಾ ಆಯೋಗಗಳೂ ತಮ್ಮ ವಸ್ತುನಿಷ್ಟ ವರದಿಗಳಲ್ಲಿ ನೀಡಿವೆ. 1976 ರ ಎಲ್​.ಜಿ ಹಾವನೂರು ಆಯೋಗವು ತನ್ನ ವರದಿಯಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆಯಲ್ಲಿ ಮಾದಿಗ ಜನಾಂಗದ ಜನಸಂಖ್ಯೆ ಶೇ.58 ಇರುತ್ತದೆ ಎಂಬ ವಿಷಯವನ್ನು ತಿಳಿಸಿದೆ. ಆದರೂ ದತ್ತಾಂಶಗಳ ಕೊರತೆಯ ನೆಪವೊಡ್ಡಿ ಸುಪ್ರಿಂಕೋರ್ಟ್​ ತೀರ್ಪಿನ ನಂತರವು ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೆ ಮೀನಾಮೇಷ ಎಣಿಸುತ್ತಿರುವುದು ಖಂಡನೀಯ. ಕೂಡಲೇ ಒಳಮೀಸಲಾತಿ ಜಾರಿಗೆ ತರಬೇಕೆಂಬುದು ಸಮಸ್ತ ಮಾದಿಗ ಸಮುದಾಯದ ಒತ್ತಾಯವಾಗಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ವೈ.ಎಚ್​.ಹುಚ್ಚಯ್ಯ ಆಗ್ರಹಿಸಿದರು.

2011 ರ ಜನಗಣತಿಯ ವರದಿಯಂತೆ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಜನಸಂಖ್ಯೆ ಸುಮಾರು 1,04,74,992 ಎಂದು ಅಂಕಿ ಅಂಶಗಳು ಹೇಳುತ್ತವೆ.ನ್ಯಾ.ನಾಗಮೋಹನ್​ ದಾಸ್​ ಆಯೋಗದ ವರದಿಯಂತೆ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ.17 ಕ್ಕೆ ಏರಿಸಿ ಹೊರಡಿಸಿದ ಸರ್ಕಾರ ಆದೇಶದಂತೆ 6 ಲಕ್ಷ ಜನಸಂಖ್ಯೆಗೆ ಶೇ.1 ರಷ್ಟು ಮೀಸಲಾತಿಯ ದೊರೆಯುತ್ತದೆ. ಶೇ.17 ರ ಮೀಸಲಾತಿಯಲ್ಲಿ 32,62,390 ಜನಸಂಖ್ಯೆ ಹೊಂದಿರುವ ಮಾದಿಗ ಮತ್ತು ಅದರ ಸಂಬಂಧಿತ 29 ಜಾತಿಗಳಿಗೆ ಶೇ. 6 ರಷ್ಟು, 32,59,480 ಜನಸಂಖ್ಯೆಯ ಹೊಲೆಯ ಮತ್ತು ಅದರ ಸಂಬಂಧಿತ 26 ಜಾತಿಗಳಿಗೆ ಶೇ. 5.5 ರಷ್ಟು, 26,51,067 ಜನಸಂಖ್ಯೆಯ ಲಂಬಾಣಿ, ಬೋವಿ, ಕೊರಚ, ಕೊರಮ ಜಾತಿಗಳಿಗೆ ಶೇ.4.5 ಮತ್ತು 58,557ರಷ್ಟಿರುವ ಇತರೆ ಅಸ್ಪ--ೃಶ್ಯ ಜಾತಿಗಳಿಗೆ ಶೇ. 1 ರಷ್ಟು ಮೀಸಲಾತಿ ಯನ್ನು ನೀಡಲು ಶಿಫಾರಸು ಮಾಡಿರುವ ಎಲ್ಲಾ ಸ್ಪಷ್ಟ ಮಾಹಿತಿ ಸರ್ಕಾರದಲ್ಲಿದೆ.ಆದರೂ ಒಳಮೀಸಲಾತಿ ಜಾರಿಗೆ ಮೀನಾಮೇಷ ಎಣಿಸುವುದು ಸರಿಯಲ್ಲ.ಕೂಡಲೇ ಜಾರಿ ಮಾಡಬೇಕು.ಒಂದು ವೇಳೆ ರ್ನಿಲಕ್ಷ ತೋರಿದರೆ. 2024ರ ಲೋಕಸಭಾ ಚುನಾವಣೆಯ ಫಲಿತಾಂಶ ಪುನರರಾವರ್ತನೆಗೊಳ್ಳಲಿದೆ ಎಂದು ವೈದ್ಯ ಡಾ.ಲಕ್ಷಿ$್ಮಕಾಂತ್​ ಎಚ್ಚರಿಸಿದರು.

ಒಳಮೀಸಲಾತಿ ಮಾದಿಗ ಸಮುದಾಯಗಳ ಬಹುದಿನ ಬೇಡಿಕೆ.ಚಿತ್ರದುರ್ಗದ ಐಕ್ಯತಾ ಸಮಾವೇಶ ಹಾಗೂ 2023ರ ಚುನಾವಣೆ ಪ್ರಣಾಳಿಕೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಸಕಾಧರ ಅಧಿಕಾರಕ್ಕೆ ಬಂದು ಒಂದುವರೆ ವರ್ಷ ಕಳೆದರೂ, ಸುಪ್ರೀಂ ತೀರ್ಪು ಬಂದ ಎರಡು ತಿಂಗಳು ಕಳೆದರೂ ಈ ಬಗ್ಗೆ ಸ್ಪಷ್ಟ ನಿಲುವು ತಾಳದಿರುವುದು ದುರಾದೃಷ್ಟಕರ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅಧಿಕಾರದಲ್ಲಿ ಉಳಿಯುವುದು ಕಷ್ಟವಾಗಲಿದೆ ಎಂಬ ಎಚ್ಚರಿಕೆಯನ್ನು ಈ ತಮಟೆ ಚಳುವಳಿಯ ಮೂಲಕ ನೀಡುತ್ತಿರುವುದಾಗಿ ಜಿಲ್ಲಾ ಕಾಂಗ್ರೆಸ್​ ಮಾಜಿ ಅಧ್ಯಕ್ಷ ಕೆಂಚಮಾರಯ್ಯ ತಿಳಿಸಿದರು.

ಮಾದಿಗ ದಂಡೋರದ ಕೊಡಿಯಾಲ ಮಹದೇವ, ಕೊಟ್ಟ ಶಂಕರ್​, ಮಾರುತಿ ಗಂಗಹನುಮಯ್ಯ,ಡಾ.ಬಸವರಾಜು, ಕೇಬಲ ರಘು, ಡಿ.ಟಿ.ವೆಂಕಟೇಶ್​, ರಾಜಸಿಂಹ, ನರಸೀಯಪ್ಪ, ನರಸಿಂಹಯ್ಯ, ಎಂ.ವಿ.ರಾಘವೇದ್ರಸ್ವಾಮಿ, ಸಿದ್ದೇಶ ನೆಗಲಾಲ್​, ನಿವೃತ್ತ ಇಂಜಿನಿಯರ್​ ಶಿವಕುಮಾರ್​, ಯೋಗೀಶ್​ ಸೋರೆಕುಂಟೆ, ಮಹಲಿಂಗಯ್ಯ, ಹನುಮಂತರಾಯಪ್ಪ, ಚೇಳೂರು ಶಿವನಂಜಪ್ಪ, ಬಂಡೆಕುಮಾರ್​, ಡಾ.ಮುಕುಂದ್​, ಡಾ.ಹನುಮಂತರಾಯಪ್ಪ, ಲಕ್ಷ್ಮಿರಂಗಯ್ಯ, ಡಾ.ಹುಲಿಕುಂಟೆ ಮೂರ್ತಿ, ಡಾ.ನರಸಿಂಹಮೂರ್ತಿ, ರಾಮಯ್ಯ,ನಾಗರಾಜು, ಕುಂದೂರು ಮುರುಳಿ, ವಿರೂಪಾಕ್ಷ ಡ್ಯಾಗೇರಹಳ್ಳಿ, ಗೂಳೂರು ಸಿದ್ದರಾಜು ಮತ್ತಿತರರು ಪ್ರತಿಭಟನೆ ನೇತೃತ್ವವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net